- ಬಿಎಸ್‌ವೈ ಅಭಿಮಾನೋತ್ಸವ ಅಂಗವಾಗಿ ಕಾರ್ಯಕರ್ತರ ಸಭೆ । ಲೋಗೋ ಪ್ರತಿ ಅನಾವರಣ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ನೂರಾರು ಜನಕ್ಕೆ ರಾಜಕೀಯ ಕ್ಷೇತ್ರದಲ್ಲಿ ಜನ್ಮಕೊಟ್ಟು, ದಕ್ಷಿಣ ಭಾರತದಲ್ಲಿ ಬಿಜೆಪಿ ಆಧಿಕಾರಕ್ಕೆ ಬರುವಂತೆ ಶ್ರಮಿಸಿದ ಏಕೈಕ ನಾಯಕ ಎಂದರೆ ಅದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಬಿ.ಎಸ್. ಯಡಿಯೂರಪ್ಪ ಅವರು ಐದು ದಶಕಗಳ ಯಶಸ್ವಿ ರಾಜಕೀಯ ಜೀವನ ಪೂರೈಸಿದ ಹಿನ್ನೆಲೆ ಮೇ 9ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ಅಭಿಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆ ಬುಧವಾರ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಅವರು ಸಮಾರಂಭದ ಲೋಗೋ ಪ್ರತಿ ಅನಾವರಣಗೊಳಿಸಿ ಮಾತನಾಡಿದರು.
ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯ ಕ್ಷೇತ್ರವಾದ ಶಿಕಾಪುರದಲ್ಲಿ ಪುರಸಭೆ ಅಧ್ಯಕ್ಷರಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಅವರು ಹಲವಾರು ಪಾದಯಾತ್ರೆಗಳು, ಹೋರಾಟಗಳ ಜೀವನದ ಮೂಲಕ ಯಶಸ್ವಿ ಮೆಟ್ಟಿಲುಗಳನ್ನು ಏರಿದವರು. ಈಗ ರಾಜಕೀಯ ಜೀವನದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ, ಭದ್ರಾ ನಾಲೆ ಆಧುನೀಕರಣ ಸೇರಿದಂತೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಅಭಿವೃದ್ಧಿಗಾಗಿ ₹900 ಕೋಟಿಗೂ ಅಧಿಕ ಅನುದಾನ, ಕೆರೆಗೆ ನೀರು ತುಂಬಿಸಿ ಯೋಜನೆಗೆ ₹519 ಕೋಟಿ ನೀಡಿದ್ದಾರೆ ಎಂದು ಸ್ಮರಿಸಿದರು.
ಅಭಿಮಾನೋತ್ಸವಕ್ಕೆ 10 ಸಾವಿರಕ್ಕೂ ಹೆಚ್ಚು ಜನ:ಚಿತ್ರದುರ್ಗದಲ್ಲಿ ಮೇ 9ರಂದು ನಡೆಯುವ ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ನ್ಯಾಮತಿ ಮತ್ತು ಹೊನ್ನಾಳಿ ಅವಳಿ ತಾಲೂಕುಗಳಿಂದ ಸುಮಾರು 150 ಬಸ್‌ಗಳ ಮೂಲಕ 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ರೈತರು, ಮಹಿಳೆಯವರು ಭಾಗವಹಿಸಲಿದ್ದಾರೆ. ನಾಡಿನ ಎಲ್ಲ ಸಮಾಜದ ಮಠಾಧಿಪತಿಗಳು, ಯಡಿಯೂರಪ್ಪ ಅವರ ರಾಜಕೀಯ ಒಡನಾಡಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ರಾಜಕೀಯ ಚಾಣಕ್ಯ ಹಾಗೂ ದೇಶದ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಾಲಿ ಮಾಜಿ ಸಚಿವರು, ಸಂಸದರು. ಶಾಸಕರು ಸ್ಥಳೀಯ ಸಂಘ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಊಟ, ತಿಂಡಿ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಕುಬೇಂದ್ರಪ್ಪ, ಸುರೇಂದ್ರ ನಾಯ್ಕ, ಮಾರುತಿ ನಾಯ್ಕ, ಕೆ.ಇ.ನಾಗರಾಜಪ್ಪ, ರಮೇಶ್ ಗೌಡ, ಎಂ.ಎಸ್. ಪಾಲಾಕ್ಷಪ್ಪ,ಶಿವು ಹುಡೇದ್, ಬಾಬು ಹೋಬಳದಾರ್ ರಾಘವೇಂದ್ರ, ಬೀರಪ್ಪ, ಮಂಜುನಾಥ ನೆಲಹೊನ್ನೆ, ನೂರಾರು ಜನ ಮುಖಂಡರು, ಕಾರ್ಯಕರ್ತರು ಇದ್ದರು.
- - --6ಎಚ್.ಎಲ್.ಐ1:
ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮದ ಲೋಗೋ ಪ್ರತಿ ಅವರು ಅನಾವರಣಗೊಳಿಸಿದರು.