ಕೊಪ್ಪಳ: ವಾರಾಣಸಿಯ ಪವಿತ್ರ ಗಂಗಾ ನದಿ ತಟದಲ್ಲಿ ನಡೆಯುವ ವಿಶ್ವಪ್ರಸಿದ್ಧ ಗಂಗಾ ಆರತಿಯ ಮಾದರಿಯಲ್ಲಿ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದ ತುಂಗಭದ್ರಾ ನದಿ ತಟದಲ್ಲಿ ಮಂಗಳವಾರ ತುಂಗಭದ್ರಾ ಆರತಿ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಭಾವದಿಂದ ನೆರವೇರಿತು.
ಗಣ್ಯರಿಂದ ತುಂಗಭದ್ರೆಗೆ ಬಾಗಿನ ಸಮರ್ಪಣೆ: ತುಂಗಭದ್ರಾ ಆರತಿಗೂ ಮುನ್ನ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ, ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹಾಗೂ ಜನಪ್ರತಿನಿಧಿಗಳು ತುಂಗಭದ್ರಾ ನದಿಗೆ ಆರತಿ ಬೆಳಗಿ ಬಾಗಿನ ಸಮರ್ಪಿಸಿದರು.
ಬಳಿಕ ನದಿ ದಡದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವಸ್ಥಾನದ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಗಣ್ಯರು ಭಕ್ತಿ ನಮನ ಸಲ್ಲಿಸಿದರು.ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ವಚನಾನಂದ ಸ್ವಾಮೀಜಿ, ವಿನಯ್ ಗುರೂಜಿ ಹಾಗೂ ವಿವಿಧ ಮಠಾಧೀಶರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ., ಮಾಜಿ ಸಂಸದ ಕರಡಿ ಸಂಗಣ್ಣ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷ ಹಸನಸಾಬ ನಭಿಸಾಬ ದೋಟಿಹಾಳ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೆಗಿ, ಸಹಾಯಕ ಆಯುಕ್ತ ಮಹೇಬೂಬ್ ಜೀಲಾನ್, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶ್ ರಾವ್ ಉಪಸ್ಥಿತರಿದ್ದರು.