ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎರಡನೇ ಬೆಳೆ ಅತಂತ್ರ

KannadaprabhaNewsNetwork |  
Published : Nov 12, 2025, 02:30 AM IST
ಫೋಟೋ 11ಕೆಆರ್‌ಟಿ2-2ಎ: ತುಂಗಭದ್ರ ನೀರಾವರಿ ಮಂಡಳಿಗೆ ಅಣೆಕಟ್ಟೆ  ತಾಂತ್ರಿಕ ತಜ್ಞ, ಆಂಧ್ರಪ್ರದೇಶ ಸರಕಾರದ ನೀರಾವರಿ ಸಲಹೆಗಾರ ಬರೆದ ಪತ್ರದ ಪ್ರತಿ | Kannada Prabha

ಸಾರಾಂಶ

ಅಣೆಕಟ್ಟಿನಲ್ಲಿ ಗಂಭೀರ ಸ್ವರೂಪದ ಬದಲಾವಣೆ ಕ್ರಸ್ಟ್‌ಗೇಟ್‌ ಅಳವಡಿಕೆಗೆ ಸರಿ ಸುಮಾರು ಐದಾರು ತಿಂಗಳ ಕಾಲಮಿತಿ ಬೇಕಾಗಿರುವುದರಿಂದ ಎರಡನೇ ಬೆಳೆಗೆ ನೀರು ಲಭ್ಯದ ಕರಿಮೋಡ ಛಾಯ ಆವರಿಸಲಿದೆ

ಎ.ಜಿ. ಕಾರಟಗಿ ಕಾರಟಗಿ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎರಡನೇ ಬೆಳೆ ಅತಂತ್ರವಾಗಲಿದೆ. ಅಣೆಕಟ್ಟು ಕ್ರಸ್ಟ್‌ಗೇಟ್‌ ಅಳವಡಿಕೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರದ ನೀರಾವರಿ ಸಲಹೆಗಾರ ಹಾಗೂ ತಾಂತ್ರಿಕ ತಜ್ಞ ಕನ್ಹಯ್ಯ ನಾಯ್ಡು ತುಂಗಭದ್ರಾ ಮಂಡಳಿಗೆ ಬರೆದ ಪತ್ರದ ಪ್ರಕಾರ ಮುಂದಿನ ಮುಂಗಾರು ಆರಂಭಕ್ಕೂ ಮುನ್ನವೇ ಕ್ರಸ್ಟ್‌ಗೇಟ್‌ ಬದಲಾಯಿಸಬೇಕೆಂದು ತಿಳಿಸಿದ್ದಾರೆ.

ಕನ್ನಡಪ್ರಭಕ್ಕೆ ಲಭ್ಯವಾದ ಪತ್ರದಲ್ಲಿ ಈ ಕುರಿತು ಸ್ಪಷ್ಟವಾಗಿದ್ದು, ಅಣೆಕಟ್ಟಿನಲ್ಲಿ ಗಂಭೀರ ಸ್ವರೂಪದ ಬದಲಾವಣೆ ಕ್ರಸ್ಟ್‌ಗೇಟ್‌ ಅಳವಡಿಕೆಗೆ ಸರಿ ಸುಮಾರು ಐದಾರು ತಿಂಗಳ ಕಾಲಮಿತಿ ಬೇಕಾಗಿರುವುದರಿಂದ ಎರಡನೇ ಬೆಳೆಗೆ ನೀರು ಲಭ್ಯದ ಕರಿಮೋಡ ಛಾಯ ಆವರಿಸಲಿದೆ.ಇದಕ್ಕೆ ಇಂಬು ನೀಡುವಂತೆ ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಎರಡನೇ ಬೆಳೆಗೆ ನೀರು ಬೇಕೋ, ಅಣೆಕಟ್ಟಿಗೆ ಕ್ರಸ್ಟ್‌ಗೇಟ್‌ ಅಳವಡಿಸಬೇಕೋ ಎನ್ನುವ ಪ್ರಶ್ನೆ ಹಾಕಿದ್ದು ನೋಡಿದರೆ ಬಹುಶಃ ಈ ಬಾರಿ ಅಚ್ಚುಕಟ್ಟು ಪ್ರದೇಶಕ್ಕೆ ರಾಜ್ಯ ಸರ್ಕಾರ ನೀರು ಬಿಡುವುದು ಅನುಮಾನವಾಗಿದೆ.

ಅಧ್ಯಯನದ ವರದಿ, ತಜ್ಞರ ಸ್ಥಾಯಿ ಸಲಹಾ ಸಮಿತಿ, ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಬರುವ 2026 ಜೂನ್ ಒಳಗೆ ಹೊಸದಾಗಿ ಕ್ರಸ್ಟ್‌ಗೇಟ್‌ ಅಳವಡಿಸಬೇಕೆಂದು ಒಕ್ಕೂರಲಿನಿಂದ ತೀರ್ಮಾನಿಸಿ ಮಂಡಳಿಗೆ ಈ ಪತ್ರ ಬರೆಯಲಾಗಿದೆ ಎಂದು ನಾಯ್ಡು ತಿಳಿಸಿದ್ದಾರೆ.

ನೀರಿನ ರಭಸಕ್ಕೆ ಕೊಚ್ಚಿಹೋದ 19ನೇ ಕ್ರಸ್ಟ್‌ಗೇಟ್‌ ಬದಲಿ ವ್ಯವಸ್ಥೆ, ಜತೆಗೆ 32 ಕ್ರಸ್ಟ್‌ಗೇಟ್‌ ಸಧ್ಯದ ಸ್ಥಿತಿ, ಅಣೆಕಟ್ಟೆಯ ಮೇಲೆ ಬೇರೆ ಅಡ್ಡ ಪರಿಣಾಮ ಬೀರದಂತೆ ಗೇಟ್ ಅಳವಡಿಸಬೇಕಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರದಂತೆ ಕಾಪಾಡಲು ಅಣೆಕಟ್ಟಿನಲ್ಲಿ ಕನಿಷ್ಠ 12ರಿಂದ 15 ಅಡಿಗಳಿಗೆ ನೀರು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ತಜ್ಞರು ಪತ್ರದಲ್ಲಿ ವಿವರಿಸಿದ್ದಾರೆ.

ಜಲಾಶಯದ ಸುರಕ್ಷತೆ, ನೀರು ಅವಲಂಬಿತ ಕರ್ನಾಟಕದ ನಾಲ್ಕು ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಕುಡಿಯಲು ಮತ್ತು ಬೆಳೆಗಳಿಗೆ ನೀರು ಕೊಡುವ ದೃಷ್ಟಿಯಿಂದ ಹೊಸ ಕ್ರಸ್ಟ್‌ಗೇಟ್‌ ಅಳವಡಿಕೆ ಅನಿವಾರ್ಯವೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ಜಲಾಶಯದ ಒಂಬತ್ತು ಕ್ರಸ್ಟ್‌ಗೇಟ್‌ಗಳು ಶೇ.39 ರಿಂದ 49ರಷ್ಟು ಹಾನಿಗೀಡಾಗಿವೆ, 15 ಕ್ರಸ್ಟ್‌ಗೇಟ್‌ಗಳು (1,6,7,8,9,14,15,16,17,20,21,28,31 ಮತ್ತು 33) ಶೇ.60ರಷ್ಟು, ಎಂಟು ಕ್ರಸ್ಟ್‌ಗೇಟ್‌ (3,4,5,13,18,24,29 ಮತ್ತು 32)ಗಳು ಶೇ. 50ರಿಂದ 59ರಷ್ಟು ಹಾನಿಗೀಡಾಗಿವೆ. ಮುಖ್ಯವಾಗಿ ಅಣೆಕಟ್ಟು, ಕ್ರಸ್ಟ್‌ಗೇಟ್‌ಗಳ ಚೌಕಟ್ಟು ಹಾಗೂ ಗೇಟ್‌ಗಳಿಗೆ ಅಳಡಿಸಿದ ಸರಪಳಿ ಸುರಕ್ಷತೆಗಾಗಿ ಕಟ್ಟೆಯ ಮೇಲೆ 12ರಿಂದ 13ರಡಿ ಎತ್ತರದವರೆಗೆ ಗರಿಷ್ಠ ನೀರು ಸಂಗ್ರಹ ಕಾಯ್ದುಕೊಳ್ಳಬೇಕು. ಆ ಪ್ರಕಾರ ಅಣೆಕಟ್ಟಿನಲ್ಲಿ 80 ಟಿಎಂಸಿ ಅಡಿ ಎತ್ತರದವರೆಗೆ ಗರಿಷ್ಠ ಸಂಗ್ರಹ ಅವಶ್ಯಕ. ಪ್ರಸಕ್ತ ವರ್ಷ 2025-26ರ ಒಂದು ಹಂಗಾಮಿನ ಒಂದು ಬೆಳೆ ನಂತರ ಕುಡಿವ ನೀರು ಪೂರೈಕೆ ಬಳಕೆ ಮಾಡಿಕೊಳ್ಳಬೇಕೆಂದು ತಜ್ಞ ಕನ್ಹಯ್ಯ ನಾಯ್ಡು ಕಳೆದ 2025 ಏ.16ಕ್ಕೆ ತುಂಗಭದ್ರ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ. ಹೀಗಾಗಿ ಕಳೆದ ಎಪ್ರಿಲ್‌ನಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ಎರಡನೇ ಬೆಳೆ ನೀರು ಪೂರೈಕೆ ಸ್ಥಗಿತಗೊಳಿಸಿ ಕ್ರಸ್ಟ್‌ಗೇಟ್‌ ಅಳವಡಿಕೆ ಕಾಮಗಾರಿ ನಡೆಸುವಂತೆ ಸೂಚಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.

ಅಣೆಕಟ್ಟೆಯಲ್ಲಿ ಸಂಗ್ರಹಕ್ಕೆ ನಿಗದಿಪಡಿಸಿದ ಮಿತಿ ಪಾಲನೆ ಕಡ್ಡಾಯವಾಗಿ ಮಾಡಬೇಕು. ಹೆಚ್ಚುವರಿ ನೀರಿನ ಹರಿವು ಆದರೆ ನದಿ, ವಿದ್ಯುತ್ ಚಾನೆಲ್, ಕಾಲುವೆಗಳಿಗೆ ಹರಿಸಬೇಕು ನಂತರ 2026ರ ಜೂನ್‌ ಒಳಗೆ ಹೊಸ ಕ್ರಸ್ಟ್‌ಗೇಟ್‌ ಅಳಡಿಸಬೇಕೆಂದು ಪತ್ರದಲ್ಲಿ ಶಿಫಾರಸ್ಸು ಮಾಡಿದ್ದು ಬೆಳಕಿಗೆ ಬಂದಿದೆ.

ಜಾಗರೂಕತೆ:

ಅಣೆಕಟ್ಟಿಗೆ ಕ್ರಸ್ಟ್‌ಗೇಟ್‌ಗಳ ರಿಯಾಬ್ರಿಕೇಷನ್, ಈಗ ಹಳತಾಗಿರುವ ಕ್ರಸ್ಟ್‌ಗೇಟ್‌ಗಳನ್ನು ಚೌಕಟ್ಟಿನಿಂದ ಹೊರಗೆ ತೆಗೆದು ಹೊಸದಾಗಿ ಅಳವಡಿಸುವುದು ಅತ್ಯಂತ ನಾಜೂಕು ಮತ್ತು ಜಾಗರೂಕತೆ, ತಜ್ಞ ತಾಂತ್ರೀಕ ತಂಡದ ನೈಪುಣ್ಯದ ಕೆಲಸವಾಗಿದೆ. ಈ ಮುಖ್ಯ ಕಾರಣಕ್ಕಾಗಿಯೇ ಸುಮಾರು 7-8 ತಿಂಗಳ ಕಾಲಾವಕಾಶ ಬೇಕಾಗಿದೆ ಎಂದು ಕನ್ಹಯ್ಯನಾಯ್ಡು ಪತ್ರದಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.

ಸವಾಲು ಸಭೆ:

ಈಗ ತುಂಗಭದ್ರಾ ಅಣೆಕಟ್ಟಿನಲ್ಲಿ ಸುಮಾರು 70 ಟಿಎಂಸಿ ನೀರು ವಾಸ್ತವದಲ್ಲಿ ಲಭ್ಯವಿದೆ. ಅಚ್ಚುಕಟ್ಟು ಪ್ರದೇಶದ ಎರಡನೇ ಬೆಳೆಗೆ ನೀರು ಬೇಡಿಕೆ ಕಿಚ್ಚು ಹೆಚ್ಚಾಗಿದೆ.ರಾಜ್ಯ ಸರ್ಕಾರಕ್ಕೆ ಇದೊಂದು ದೊಡ್ಡ ಸವಾಲಾಗಿದೆ. ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ನ. 14ರಂದು ಬೆಂಗಳೂರಿನಲ್ಲಿ ನೀರು ಬಿಡುಗಡೆ, ಅಣೆಕಟ್ಟು ಕ್ರಸ್ಟ್‌ಗೇಟ್‌ ಅಳವಡಿಕೆ ವಿಚಾರವಾಗಿ ಸಭೆ ನಡೆಯಲಿದೆ.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ