ಹಸಿರು ಪಾಚಿಗಟ್ಟಿದ ತುಂಗಭದ್ರಾ ನದಿ ನೀರು : ಕುಡಿಯದಂತೆ ಗದಗ ಜಿಲ್ಲಾಡಳಿತ ಎಚ್ಚರಿಕೆ

KannadaprabhaNewsNetwork |  
Published : Jan 24, 2025, 12:48 AM ISTUpdated : Jan 24, 2025, 12:45 PM IST
23ಕೆಪಿಎಲ್24 ತುಂಗಭದ್ರಾ ಜಲಾಶಯದಲ್ಲಿ ಹಸಿರು ಬಣ್ಣಕ್ಕೆ ತಿರುಗಿರುವ ನೀರು 23ಕೆಪಿಎಲ್25 ತುಂಗಭದ್ರಾ ನದಿ ನೀರು  ಹಸಿರುಪಾಚಿಗಟ್ಟಿರುವುದು. | Kannada Prabha

ಸಾರಾಂಶ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಳ್ಳಿ, ಗಂಗಾಪರು ಹಾಗೂ ಅದರ ಸುತ್ತಮುತ್ತಲ ಗ್ರಾಮಸ್ಥರು ತುಂಗಭದ್ರಾ ನದಿಯ ನೀರು ಕುಡಿಯದಂತೆ ಗದಗ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಸೋಮರಡ್ಡಿ ಅಳವಂಡಿ

 ಕೊಪ್ಪಳ : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಳ್ಳಿ, ಗಂಗಾಪರು ಹಾಗೂ ಅದರ ಸುತ್ತಮುತ್ತಲ ಗ್ರಾಮಸ್ಥರು ತುಂಗಭದ್ರಾ ನದಿಯ ನೀರು ಕುಡಿಯದಂತೆ ಗದಗ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ತುಂಗಭದ್ರಾ ನದಿ ನೀರು ಹಸಿರು ಪಾಚಿಗಟ್ಟಿದ್ದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಯೋಗಾಲಯದ ಪ್ರಾಥಮಿಕ ವರದಿ ಬಂದಿದ್ದು, ಕುಡಿಯಲು ಯೋಗ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಹೀಗಾಗಿ, ಕುಡಿಯದಂತೆ ಎಚ್ಚರಿಕೆ ನೀಡಲಾಗಿದೆ.

ಇದು, ಈಗ ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ನೀರನ್ನೇ ಕುಡಿಯುವ ಸುಮಾರು 30 ಗ್ರಾಮ ಮತ್ತು ಜಿಲ್ಲಾ ಕೇಂದ್ರ ಜಿಲ್ಲೆಯ ಜನರನ್ನು ಆತಂಕಕ್ಕೆ ಈಡಾಗುವಂತೆ ಮಾಡಿದೆ.

ತುಂಗಭದ್ರಾ ನದಿ ಮುಂಡರಗಿ ತಾಲೂಕಿನ ಮಾರ್ಗವಾಗಿ ಕೊಪ್ಪಳ ಜಿಲ್ಲೆಯಲ್ಲಿಯೂ ಹರಿದಿದೆ. ಇಲ್ಲಿ ಅಣೆಕಟ್ಟು ಸಹ ಕಟ್ಟಲಾಗಿದೆ. ಈ ನದಿಯುದ್ದಕ್ಕೂ ಇರುವ ಗ್ರಾಮಗಳು ಸೇರಿದಂತೆ ಕೊಪ್ಪಳ ಸುತ್ತಮುತ್ತಲ ಗ್ರಾಮಗಳಿಗೆ ಈ ನದಿಯ ನೀರನ್ನೇ ಪೂರೈಕೆ ಮಾಡಲಾಗುತ್ತದೆ. ಹೀಗಾಗಿ, ಜನರು ಭಯಭೀತರಾಗಿದ್ದಾರೆ.

ಹಸಿರು ಪಾಚಿ:

ತುಂಗಭದ್ರಾ ಜಲಾಶಯ ಸೇರಿದಂತೆ ನದಿಯುದ್ದಕ್ಕೂ ನೀರು ಸಂಪೂರ್ಣ ಹಸಿರುಬಣ್ಣಕ್ಕೆ ತಿರುಗಿದೆ. ಅಷ್ಟೇ ಅಲ್ಲ ಪಾಚಿಗಟ್ಟಿರುವುದು ಕಂಡು ಬರುತ್ತದೆ.

ಹೀಗಾಗಿ, ಈ ನೀರು ಕುಡಿಯಲು ಯೋಗ್ಯವಾಗಿದೆಯೇ ಎನ್ನುವುದು ಸದ್ಯದ ಪ್ರಶ್ನೆ. ಗದಗ ಜಿಲ್ಲಾಡಳಿತ ನೀರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಯೋಗಾಲಯಕ್ಕೆ ಕಳುಹಿಸಿ, ಪ್ರಾಥಮಿಕ ವರದಿಯಲ್ಲಿ ಕುಡಿಯಲು ಯೋಗ್ಯವಿಲ್ಲ ಎಂದು ಬಂದಿರುವುದರಿಂದ ಅದೇ ನದಿ ಕೊಪ್ಪಳ ಜಿಲ್ಲೆಯಲ್ಲಿಯೂ ಹರಿಯುತ್ತದೆ. ಹೀಗಾಗಿ, ಅದು ಕುಡಿಯಲು ಯೋಗ್ಯವಾಗಿದೆಯೇ ಎನ್ನುವುದು ಜನರ ಪ್ರಶ್ನೆಯಾಗಿದೆ.

ಈ ಹಿಂದೆ ತುಂಗಭದ್ರಾ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದ ಕುರಿತು ಮಾಧ್ಯಮಗಳಲ್ಲಿ ವರದಿಯಾದಾಗ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿತ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಯೋಗಾಲಯಕ್ಕೆ ನೀರನ್ನು ಕಳುಹಿಸಿದಾಗ ಕುಡಿಯಲು ತೊಂದರೆಯಿಲ್ಲ ಎನ್ನುವ ವರದಿ ಬಂದಿತ್ತು. ಆದರೆ, ಈಗ ಗದಗ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ಕುಡಿಯಲು ಯೋಗ್ಯವಿಲ್ಲ ಎಂದು ವರದಿಯಾಗಿರುವುದರಿಂದ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತ ಗಮನ ವಹಿಸಲಿ:

ಈ ಕುರಿತು ಜಿಲ್ಲಾಡಳಿತ ತುರ್ತು ಕ್ರಮವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೊಪ್ಪಳ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹಾಗೂ ಜಿಲ್ಲಾ ಕೇಂದ್ರ ಕೊಪ್ಪಳ ನಗರದ ವಾಸಿಗಳು ಈಗ ತುಂಗಭದ್ರಾ ನದಿ ನೀರನ್ನೇ ಕುಡಿಯಲು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ, ಕೂಡಲೇ ಪ್ರಯೋಗಾಲಯದ ಮೂಲಕ ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎನ್ನುತ್ತಾರೆ ನಾಗರಿಕರು.

ನಮ್ಮ ಜಿಲ್ಲೆಯಲ್ಲಿ ಆ ಬಗ್ಗೆ ವರದಿಯನ್ನೇನು ಮಾಡಿಲ್ಲ. ಹೀಗಾಗಿ, ಈಗ ತುಂಗಭದ್ರಾ ನದಿ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸೂಚಿಸುತ್ತೇನೆ. ವರದಿಯನ್ನಾಧರಿಸಿ ಮುಂದಿನ ಕ್ರಮ ವಹಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ