ಕನ್ನಡಪ್ರಭ ವಾರ್ತೆ ಕನಕಗಿರಿ
ಹಲವು ತಿಂಗಳುಗಳಿಂದ ನದಿಯಲ್ಲಿ ನೀರು ಇಲ್ಲದ ಕಾರಣ ಚಿಕ್ಕಜಂತಕಲ್ ಪಂಪ್‌ಹೌಸ್‌ನಿಂದ ಕನಕಗಿರಿ ಲಕ್ಷ್ಮೀದೇವಿ ಕೆರೆಗೆ ನೀರು ಸರಬರಾಜಿಗೆ ತಡೆಯೊಡ್ಡಲಾಗಿತ್ತು. ಇದೀಗ ಟಿಬಿ ಡ್ಯಾಂ ತುಂಬಿದ್ದು, ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಈ ಹಿನ್ನಲೆಯಲ್ಲಿ ಲಕ್ಷ್ಮೀದೇವಿ ಕೆರೆಗೆ ನೀರು ಸರಬರಾಜು ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಕಾಟಾಪುರ ಕೆರೆಗೂ ನೀರು ಬಿಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ವೆಂಕಟೇಶ ಗೋಡಿನಾಳ ತಿಳಿಸಿದ್ದಾರೆ.
ನದಿಯಿಂದ ಕೆರೆಗೆ ನೀರು ಹರಿಬಿಟ್ಟಿರುವ ವಿಷಯ ತಿಳಿದ ಸ್ಥಳೀಯರು, ಮುಖಂಡರು ಸ್ನೇಹಿತರೊಂದಿಗೆ ಕೆರೆಗೆ ಬಂದು ನೀರು ಸರಬರಾಜು ಆಗುವುದನ್ನು ವೀಕ್ಷಿಸಿ ಸಂತಸಪಟ್ಟರು.ನದಿಪಾತ್ರದಲ್ಲಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳಿ:
ತುಂಗಭದ್ರಾ ಜಲಾಶಯವು ತುಂಬಿದ ಹಿನ್ನೆಲೆ ಜಲಾಶಯದಿಂದ ನದಿಗೆ ನೀರು ಬಿಡುಗಡೆಗೊಳಿಸಲಾಗಿದ್ದು, ನದಿ ಪಾತ್ರ, ದಂಡೆ ಮತ್ತು ನದಿಯ ಅಸುಪಾಸಿನಲ್ಲಿ ವಾಸಿಸುವ ಗ್ರಾಮಗಳ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.
ಕಾರಣ ನದಿ ಪಾತ್ರ, ನದಿ ದಂಡೆ ಮತ್ತು ನದಿಯ ಅಸುಪಾಸಿನಲ್ಲಿ ವಾಸಿಸುವ ಎಲ್ಲ ಗ್ರಾಮಸ್ಥರು, ಸ್ಥಳೀಯ ನಿವಾಸಿಗಳು, ಪ್ರವಾಸಿಗರು ಮತ್ತು ಜಾನುವಾರುಗಳಿಗೆ ಮನ್ನೆಚ್ಚರಿಕಾ ಕ್ರಮಕಾಗಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇ ತೆರಳಲು ವಿನಂತಿಸಲಾಗಿದೆ. ಈ ಸಂಬಂಧ ನದಿಪಾತ್ರದ ವ್ಯಾಪ್ತಿಯಲ್ಲಿನ ಎಲ್ಲ ನೀರಾವರಿ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು, ಪೊಲೀಸ್ ಇಲಾಖೆ, ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳು, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ಕೈಗೊಂಡು, ನದಿ ಪಾತ್ರ ನದಿ ದಂಡೆ ಮತ್ತು ನದಿಯ ಅಸುಪಾಸಿನಲ್ಲಿ ವಾಸಿಸುವ ಗ್ರಾಮಗಳ ಗ್ರಾಮಸ್ಥರಿಗೆ ಸೂಕ್ತ ತಿಳುವಳಿಕೆ ನೀಡಿ, ನದಿ ದಂಡೆಯ ಹತ್ತಿರ ಯಾರು ಹೋಗದಂತೆ ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.ತುರ್ತು ಸಂದರ್ಭದಲ್ಲಿ ತಾಲೂಕು ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದ್ದು, ಕೊಪ್ಪಳ: 9164258531, 9900324711, ಗಂಗಾವತಿ: 9740793877, 9964221162, ಕಾರಟಗಿ: 8792429600 ಗೆ ಸಾರ್ವಜನಿಕರು ಕರೆ ಮಾಡಬಹುದು.