ಅಶೋಕ ಡಿ. ಸೊರಟೂರ
ಲಕ್ಷ್ಮೇಶ್ವರ ಪಟ್ಟಣದಿಂದ 30 ಕಿಮೀ ಅಂತರದಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದರೂ ಪಟ್ಟಣದ ಜನತೆಗೆ 30 ದಿನಗಳಿಗೊಮ್ಮೆ ತುಂಗೆಯ ದರ್ಶನ ಮಾಡಿಸಲಾಗುತ್ತಿದೆ. ಪಟ್ಟಣದಿಂದ ತುಂಗಭದ್ರಾ ನದಿಯ ತೀರದ ಮೇವುಂಡಿ ಗ್ರಾಮದಲ್ಲಿ ಪಟ್ಟಣಕ್ಕೆ ನೀರು ಪೂರೈಸುವ ಜಾಕ್‌ವೆಲ್ ನಿರ್ಮಾಣ ಮಾಡಿ ಅಲ್ಲಿಂದ ಪಂಪ್ ಮೂಲಕ ಸೂರಣಗಿ ಹತ್ತಿರ ನಿರ್ಮಾಣ ಮಾಡಿರುವ ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೆ ಬಂದು ಅಲ್ಲಿಂದ ನೀರು ಶುದ್ಧಗೊಂಡು ಲಕ್ಷ್ಮೇಶ್ವರಕ್ಕೆ ಪೂರೈಕೆಯಾಗುತ್ತಿತ್ತು.
ಪಟ್ಟಣಕ್ಕೆ ನೀರು ಪೂರೈಸುವ ಮೇವುಂಡಿ ಘಟಕ ಹಾಗೂ ಸೂರಣಗಿಯ ಶುದ್ಧೀಕರಣ ಯಂತ್ರಗಳು ರೋಗಗ್ರಸ್ತವಾಗಿದ್ದು, ಒಂದಿಲ್ಲೊಂದು ಕಾರಣದಿಂದ ತಿಂಗಳಿಗೊಮ್ಮೆ ಕುಡಿಯುವ ನೀರು ಪೂರೈಸುತ್ತಿರುವುದು ಲಕ್ಷ್ಮೇಶ್ವರ ಜನತೆಯ ದುರ್ದೈವ.ಕುಡಿಯುವ ನೀರಿಗಾಗಿ ಪಟ್ಟಣದ ಜನತೆ ಪುರಸಭೆಗೆ ಆಗಮಿಸಿ ಮನವಿ ನೀಡುವುದು ಮನೆಗೆ ಹೋಗುವುದು ವರ್ಷದ 12 ತಿಂಗಳಲ್ಲಿಯೂ ನಡೆದೇ ಇರುತ್ತದೆ. ಪುರಸಭೆಯ ಅಧಿಕಾರಿಗಳು ಸದಸ್ಯರಿಗೆ ಮೋಟರ್ ಕೆಟ್ಟಿದೆ ಅಥವಾ ಪೈಪ್ ಒಡೆದಿದೆ ಎಂದು ಹೇಳಿ ಸಾಗಹಾಕುತ್ತಾರೆ. ಅಲ್ಲದೆ, ಎರಡು ದಿನಗಳಲ್ಲಿ ದುರಸ್ತಿ ಮಾಡಿಸಿದ ತಕ್ಷಣವೇ ನಿಮ್ಮ ವಾರ್ಡ್‌ಗಳಿಗೆ ನೀರು ನೀಡುತ್ತೇವೆ ಎನ್ನುವ ಸಬೂಬು ಹೇಳಿ ಜನರನ್ನು ಮನೆಗೆ ಕಳಿಸುತ್ತಾರೆ.
ಈ ಮೋಟರ್‌ಗಳು ಸದಾ ದುರಸ್ತಿಯಲ್ಲಿರುತ್ತವೆ ಎಂಬುದು ಇನ್ನೊಂದು ಆಶ್ವರ್ಯದ ಸಂಗತಿ. ಅಲ್ಲದೆ, ಈ ಮೋಟರ್‌ಗಳ ದುರಸ್ತಿಗಾಗಿ ಲಕ್ಷ್ಮೇಶ್ವರ ಪುರಸಭೆಯಿಂದ ಲಕ್ಷಾಂತರ ಖರ್ಚು ಹಾಕಲಾಗಿದೆ.
ಕಳೆದ 3-4 ತಿಂಗಳ ಹಿಂದೆ ಲಕ್ಷ್ಮೇಶ್ವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಹೊಸ ಪೈಪ್ ಅಳವಡಿಕೆಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಸುಮಾರು ₹30 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈಗ ಪೈಪ್ ಗಳಿಗೆ ಸಿಮೆಂಟ್ ಕೋಟಿಂಗ್ ಮಾಡುವ ಕಾರ್ಯ ಭರದಿಂದ ಸಾಗಿದ್ದು. ಬೇಸಿಗೆ ಮುಕ್ತಾಯಗೊಳ್ಳುವ ಅವಧಿಯಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾರ್ಯ ಮುಗಿಯತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೇವುಂಡಿಯ ಜಾಕ್‌ವೆಲ್ಲನಲ್ಲಿನ ಎರಡು ಮೋಟಾರ್ ಕೂಡಿಸುವ ಕಾರ್ಯದಿಂದ 3-4 ದಿನ ನೀರು ಬಿಡುವಲ್ಲಿ ತಡವಾಗಿತ್ತು. ಈಗ ಮತ್ತೆ ಮೊದಲಿನಂತೆಯೇ ಕುಡಿಯುವ ನೀರು ಕೊಡುತ್ತೇವೆ. ಬೇಸಿಗೆಯ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.