ಜೂನ್‌ ಅಂತ್ಯದವರೆಗೂ ತುಂಗಭದ್ರಾ ನೀರು: ಶಿವರಾಜ್‌ ತಂಗಡಗಿ

KannadaprabhaNewsNetwork | Published : Jan 20, 2024 2:03 AM

ಸಾರಾಂಶ

ಜಲಾಶಯದಲ್ಲಿನ ನೀರಿನ ಲಭ್ಯತೆ ಆಧರಿಸಿ 4 ಜಿಲ್ಲೆಗಳಿಗೆ ನೀರು ಹಂಚಿಕೆ. ವಿಧಾನಸೌಧದಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ತುಂಗಭದ್ರಾ ನದಿಯಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಜೂನ್‌ ತಿಂಗಳ ಅಂತ್ಯದವರೆಗೆ ಕುಡಿಯುವ ನೀರು ಮತ್ತು ಬೆಳೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದರು. ಸಭೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಣ್ಣ ನೀರಾವರಿ ಸಚಿವ ಬೋಸ್ ರಾಜ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಎಚ್.ಆರ್.ಗವಿಯಪ್ಪ, ಗಾಲಿ ಜನಾರ್ದನ ರೆಡ್ಡಿ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ನೀರಿನ ಸಾಮರ್ಥ್ಯ 10.151 ಟಿಎಂಸಿ ಇದ್ದು, ಎರಡು ಟಿಎಂಸಿ ಡೆಡ್‌ ಸ್ಟೋರೆಜ್‌ ಇರಲಿದೆ. ರಾಜ್ಯದ ಪಾಲು 2.481 ಟಿಎಂಸಿ, ಆಂಧ್ರಪ್ರದೇಶದ ಪಾಲು 2.851 ಟಿಎಂಸಿ ಇದೆ. ಜಲಾಶಯದಲ್ಲಿನ ನೀರಿನ ಲಭ್ಯತೆ ಆಧರಿಸಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ತುಂಗಭದ್ರಾ ಎಡದಂಡೆ ಮುಖ್ಯಕಾಲುವೆಗೆ 0.300 ಟಿಎಂಸಿ ನೀರನ್ನು ಕುಡಿಯಲು ಸಲುವಾಗಿ ಕಾಯ್ದಿರಿಸಲಾದ 0.500 ಟಿಎಂಸಿ ನೀರಿನಲ್ಲಿ ಜ.22 ರಿಂದ ಏ.30ರ ತನಕ 50 ಕ್ಯುಸೆಕ್ಸ್ ನಂತೆ ಹರಿಸಲಾಗುವುದು. ರಾಯಚೂರು ಜಿಲ್ಲೆಗೆ ಹಂಚಿಕೆಯಾದ 1.200 ಟಿಎಂಸಿ ನೀರನ್ನು ಫೆ.15ರಿಂದ ಫೆ.25ರವರೆಗೆ, 0.600 ಟಿಎಂಸಿ ನೀರನ್ನು ಏ.10ರಿಂದ ಏ.20ರವರೆಗೆ ಕುಡಿಯುವ ನೀರಿನ ಸಲುವಾಗಿ ಹರಿಸಲಾಗುವುದು. ಇನ್ನು ಜ.21ರಿಂದ ಜ.31ರವರೆಗೆ 100 ಕ್ಯುಸೆಕ್ಸ್ ನಂತೆ ಮತ್ತು ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ತಿಂಗಳಿಗೆ 10 ದಿನಗಳಿಗೊಮ್ಮೆ 100 ಕ್ಯುಸೆಕ್ಸ್ ನಂತೆ ಕುಡಿಯುವ ನೀರಿನ ಸಲುವಾಗಿ ಬಳ್ಳಾರಿ ಜಿಲ್ಲೆಗೆ ಹರಿಸಲಾಗುವುದು. ರಾಯ ಬಸವಣ್ಣ ಕಾಲುವೆಯಿಂದ ವಿಜಯನಗರ ಜಿಲ್ಲೆಗೆ ಹಂಚಿಕೆಯಾದ 0.500 ಟಿಎಂಸಿ ನೀರಿನಲ್ಲಿ ಜ.21ರಿಂದ ಜ.30ರವರೆಗೆ 100 ಕ್ಯುಸೆಕ್ಸ್ ನಂತೆ ನೀರು ಹರಿಸಲಾಗುವುದು ಎಂದು ಮಾಹಿತಿ ನೀಡಿದರು.

ಉಳಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ನೀರಿಗೆ ಬೇಡಿಕೆ ಇಟ್ಟಂತೆ ಕುಡಿಯಲು ನೀರು ಹರಿಸಲಾಗುವುದು. ಎರಡನೇ ಬೆಳೆಗೆ ನೀರು ನೀಡಲು ಸಾಧ್ಯವೇ ಇಲ್ಲ ಎಂಬುದನ್ನು ಹೇಳಲಾಗಿದೆ. ನಿಂತ ಬೆಳೆಗೆ ನೀರು ಬಿಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Share this article