ಮುಂಡರಗಿ:ತುಂಗಭದ್ರಾ ನದಿ ನೀರು ಹಸಿರಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನ ಕೊರ್ಲಹಳ್ಳಿ ಹತ್ತಿರ ಹರಿಯುತ್ತಿರುವ ತುಂಗಭದ್ರಾ ನದಿ ನೀರು ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿ ಜನರಲ್ಲಿ ಆತಂಕ ಮನೆ ಮಾಡಿರುವ ಕುರಿತು ಶುಕ್ರವಾರ ''''ಕನ್ನಡಪ್ರಭ'''' ವರದಿ ಮಾಡಿತ್ತು.ಶುಕ್ರವಾರ ಮುಂಡರಗಿ ತಾಲೂಕಿನ ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ ಹತ್ತಿರ ಹರಿದಿರುವ ತುಂಗಭದ್ರಾ ನದಿಗೆ ತಹಸೀಲ್ದಾರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು. ನೀರನ್ನು ಮತ್ತೆ ತಪಾಸಣೆಗೆ ಕಳುಹಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕೊರ್ಲಹಳ್ಳಿ ಗ್ರಾಮದ ರೈತ ಮಾರುತಿ ಪಲ್ಲೇದ, ಕಳೆದ 3-4 ದಿನಗಳಿಂದ ಕೊರ್ಲಹಳ್ಳಿ ಹತ್ತಿರವಿರುವ ತುಂಗಭದ್ರಾ ನದಿಯಲ್ಲಿನ ನೀರು ಹಸಿರು ಬಣ್ಣಕ್ಕೆ ತಿರುಗಿದ್ದರಿಂದ ನಮಗೆ ಆತಂಕ ಸೃಷ್ಟಿಯಾದಂತಾಗಿದೆ. ನಾವು ಈ ಕೂಡಲೇ ಭತ್ತ ನಾಟಿ ಮಾಡಬೇಕಿದೆ. ಆದರೆ ನಮ್ಮ ಜಮೀನಿನಲ್ಲಿ ಭತ್ತದ ನಾಟಿ ಮಾಡಲು ಕೂಲಿ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಆ ನೀರಿನಲ್ಲಿ ಇಳಿದು ಕೆಲಸ ಮಾಡಿದರೆ ಚರ್ಮರೋಗ ಬರಬಹುದೆಂದು ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. 3-4 ದಿನಗಳಿಂದ ನದಿ ಪಕ್ಕದ ಜಮೀನಿನ ಮೋಟರ್ ಸ್ಥಗಿತಗೊಳಿಸಿರುವೆ ಎಂದು ಹೇಳಿದರು.ಮುಂಡರಗಿ ತಹಸೀಲ್ದಾರ್ ಎರ್ರಿಸ್ವಾಮಿ. ಪಿ.ಎಸ್. ಪ್ರತಿಕ್ರಿಯಿಸಿ, ತಾಲೂಕಿನ ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ ಗ್ರಾಮಗಳ ಬಳಿ ಇರುವ ತುಂಗಭದ್ರಾ ನದಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದು ಯಾವುದೇ ರಾಸಾಯನಿಕದಿಂದ ಹಸಿರು ಬಣ್ಣಕ್ಕೆ ತಿರುಗಿದ್ದಲ್ಲ. ಹಸಿರುಗಟ್ಟಿದ ಪಾಚಿಯು ದಡಕ್ಕೆ ಬಂದು ಕುಳಿತುಕೊಳ್ಳುವುದರಿಂದ ನೀರು ಈ ರೀತಿ ಹಸಿರು ಬಣ್ಣಕ್ಕೆ ತಿರುಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಕೆಲವು ಪ್ರದೇಶದಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದು ಕಂಡುಬಂದಿದೆ. ಆದರೂ ನೀರಿನ್ನು ಮತ್ತೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.