ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್ಲ 33 ಕ್ರಸ್ಟ್ ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್ ಅಳವಡಿಸುವ ಕುರಿತು ತಾಂತ್ರಿಕ ತನಿಖಾ ಸಮಿತಿ ನೀಡಿದ್ದ ವರದಿಯ ಸಾಧಕ-ಬಾಧಕ ಬಗ್ಗೆ ತುಂಗಭದ್ರಾ ಮಂಡಳಿ ಮಹತ್ವದ ಸಭೆಯನ್ನು ಇದೇ ತಿಂಗಳಲ್ಲಿ ತುಂಗಭದ್ರಾ ಜಲಾಶಯದಲ್ಲಿ ನಡೆಸಲಿದೆ.
ಜಲಾಶಯಕ್ಕೆ ಅಳವಡಿಸಿರುವ ಕ್ರಸ್ಟ್ ಗೇಟ್‌ಗಳ ಆಯುಷ್ಯ ಐದು ವರ್ಷ ಇದೆ. ಉತ್ತಮ ನಿರ್ವಹಣೆಯಿಂದ 70 ವರ್ಷ ದಾಟಿದರೂ ಬಾಳಿಕೆ ಬಂದಿವೆ. ಆದರೆ ಈ ಹಿಂದೆ ಸಲಹೆ ನಿರ್ಲಕ್ಷಿಸಿದರ ಪರಿಣಾಮ 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದು 40 ಟಿಎಂಸಿ ನೀರು ನದಿ ಪಾಲಾಗಿದೆ. ಈಗ ಈ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಕೆ ಮಾಡಲಾಗಿದೆ.
ಪರಿಣತ ತಜ್ಞ ಎ.ಕೆ.ಬಜಾಜ್ ನೇತೃತ್ವದ ತಾಂತ್ರಿಕ ತನಿಖಾ ಸಮಿತಿ ನೀಡಿದ್ದ ವರದಿ ಬಗ್ಗೆಯೂ ಮಂಡಳಿ ಸಭೆಯಲ್ಲಿ ಚರ್ಚಿಸಲಿದೆ. ಸಭೆಯಲ್ಲಿ ಅನುಮೋದನೆ ನೀಡಿದರೆ ಮುಂದಿನ ಬೇಸಿಗೆಯಲ್ಲಿ ಗೇಟ್ ಅಳವಡಿಸುವ ಕಾರ್ಯ ಸಾಗಲಿದೆ. ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣದ ಪ್ರಸ್ತಾವನೆ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಮಂಡಳಿ ಮೂಲಗಳು ತಿಳಿಸಿವೆ.ಗೇಟ್ ಬದಲಾವಣೆ:
ಪರವಾನಗಿ:
ಜಲಾಶಯಕ್ಕೆ ಹೊಸ ಗೇಟ್ ಅಳವಡಿಸುವ ಕುರಿತ ಪ್ರಸ್ತಾವನೆಗೆ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಅನುಮತಿ ನೀಡಿದ್ದಾರೆ. ಈಗ ಗೇಟ್‌ಗಳ ವಿನ್ಯಾಸಗಳನ್ನು ಸಿದ್ಧಗೊಳಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಗೇಟ್ ದುರಂತ ಸಂಭವಿಸಿದಾಗ ಸ್ಟಾಪ್ ಲಾಗ್ ತಯಾರಿಸಿದ ಸ್ಥಳಿಯ ಕಂಪನಿಗಳಿಗೆ ಹೊಸ ಗೇಟ್ ಗಳ ನಿರ್ಮಾಣ ಹೊಣೆ ಹೊರಿಸುವ ಸಾಧ್ಯತೆ ಇದೆ. ಈ ನಡುವೆ ಮೂರು ರಾಜ್ಯ ಸರ್ಕಾರಗಳ ನೀರಾವರಿ ಇಲಾಖೆಯ ಕಾರ್ಯದರ್ಶಿಗಳು ಅನುಮೋದನೆ ನೀಡುವುದು ಬಾಕಿ ಇದೆ.