ಜನತೆಯ ದಾಹ ಇಂಗಿಸಲು ತುಂಗೆಭದ್ರೆ ಸಿದ್ಧ

KannadaprabhaNewsNetwork |  
Published : Apr 21, 2025, 12:48 AM IST
ಚಿತ್ರ ಶೀರ್ಷಿಕೆ19ಎಂ ಎಲ್ ಕೆ1ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ತುಂಗಾಭದ್ರಾ ಹಿನ್ನೀರಿನ ಯೋಜನೆಯ ಪೈಪು ಲೈನಿಗೆ ನೀರು ಬಿಟ್ಟು ಸ್ವಚ್ಚಗೊಳಿಸುತ್ತಿರುವುದು. | Kannada Prabha

ಸಾರಾಂಶ

ತುಂಗಾಭದ್ರಾ ಹಿನ್ನೀರಿನ ಕುಡಿವ ನೀರಿನ ಯೋಜನೆ ಕಾಮಗಾರಿ ಬಹುತೇಕ ಪೂರ್ಣ । ಭರದಿಂದ ಸಾಗಿದ ಪೈಪು ಸ್ವಚ್ಛತೆ ಕಾರ್ಯ

ಬಿ.ಜಿ.ಕೆರೆ ಬಸವರಾಜ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಬರದ ಹೊಡೆತಕ್ಕೆ ಸಿಲುಕಿ ಬಳಲಿ ಬೆಂಡಾಗಿದ್ದ ಬರದ ನಾಡಿನ ಜನತೆಯ ದಾಹ ಇಂಗಿಸಲು ತುಂಗೆಭದ್ರೆ ತಾಲೂಕಿಗೆ ಮೆಲ್ಲನೆ ಹೆಜ್ಜೆ ಇರಿಸಿದ್ದಾಳೆ.

ಹೌದು ಶಾಶ್ವತ ಬರಪೀಡಿತ ಐದು ತಾಲೂಕುಗಳ ಜನತೆಯ ಕುಡಿಯುವ ನೀರಿನ ದಾಹ ತಣಿಸುವ ಬಹು ನಿರೀಕ್ಷಿತ ತುಂಗಾಭದ್ರಾ ಹಿನ್ನೀರಿನ ಕುಡಿಯುವ ನೀರಿನ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದ್ದು ಪೈಪು ಸ್ವಚ್ಛಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು ಕೆಲ ತಿಂಗಳಲ್ಲಿ ನೀರು ಪೂರೈಕೆಯಾಗುವ ನಿಶ್ಚಯವಾಗಿದೆ.

ದೇವಸಮುದ್ರ ಹಾಗೂ ಕಸಬಾ ಸೇರಿದಂತೆ ಎರಡೂ ಹೋಬಳಿಗಳ ಒಟ್ಟು 127ಕ್ಕೂ ಹೆಚ್ಚಿನ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ತಳವಾರಹಳ್ಳಿ, ಹಾನಗಲ್, ಮರ್ಲಹಳ್ಳಿ, ಹರಿವಿನದೊಡ್ಡಿ, ರಾಂಪುರ ಸೇರಿ ಒಟ್ಟು 5 ವಲಯಗಳನ್ನಾಗಿ ವಿಂಗಡಿಸಿ ಪ್ರತಿದಿನ 150 ಎಂಎಲ್‌ಡಿ ನೀರು ತಾಲೂಕಿಗೆ ಪೂರೈಕೆ ಮಾಡುವ ಯೋಜನೆ ಇದಾಗಿದೆ. ಪೈಪುಲೈನು ಪರೀಕ್ಷೆ ಜೊತೆಗೆ ಪೈಪು ಸ್ವಚ್ಛತಾ ಕಾರ್ಯವೂ ಪೂರ್ಣಗೊಂಡಿದೆ.

ಹೊಸಪೇಟೆ ಸಮೀಪದ ತುಂಗಾಭದ್ರಾ ಜಲಾಶಯದಿಂದ ಜಾಕ್ ವಲ್ ಮೂಲಕ ನೀರನ್ನು ಪಂಪ್‌ ಮಾಡಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರದಲ್ಲಿ ನಿರ್ಮಿಸಿರುವ ನೀರು ಸಂಗ್ರಹಣಾ ಕೇಂದ್ರಕ್ಕೆ ಹರಿಸಿ ಅಲ್ಲಿ ನೀರು ಶುದ್ಧೀಕರಿಸಿ ಜರಿಮಲೆಯಲ್ಲಿರುವ ಎಂಬಿಆರ್ (ಮುಖ್ಯ ಸಮತೋಲನಾ ನೀರು ಸಂಗ್ರಹ ಕೇಂದ್ರ)ಪಂಪು ಮಾಡಿ ಅಲ್ಲಿಂದ ಗುರುತ್ವಾಕರ್ಷಣೆಯ ಮೂಲಕ ಬರದ ಭೂಮಿಯ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ.

ಎರಡು ಹೋಬಳಿಯ ಎಲ್ಲಾ ಪೈಪ್‌ಗಳನ್ನು ಸ್ವಚ್ಛಗೊಳಿಸಿದ್ದು ತಾಲೂಕಿನ 127 ಟ್ಯಾಂಕ್‌ಗಳಲ್ಲಿ ನೀರು ಹರಿಸಿ ಪರೀಕ್ಷಿಸಲಾಗಿದೆ. 42 ಕಡೆಯಲ್ಲಿ ನೀರಿನ ಸ್ಯಾಂಪಲ್ ಪಡೆದು ಪರೀಕ್ಷೆಗೊಳ ಪಡಿಸಲಾಗಿದೆ.

ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯ ಪ್ರಕಾರ ಹಿಂದುಳಿದ ತಾಲೂಕುಗಳ ಸಾಲಲ್ಲಿ ಬರುವ ಮೊಳಕಾಲ್ಮುರು, ಕೂಡ್ಲಿಗಿ, ಚಳ್ಳಕೆರೆ, ಪಾವಗಡ ಹಾಗೂ ಚಿತ್ರದುರ್ಗದ ಕೆಲ ಭಾಗದ ಜನತೆಗೆ ಕಾಡುತ್ತಿರುವ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ನಿವಾರಣೆಗೆ 2013 ಕಾಂಗ್ರೆಸ್ ಸರ್ಕಾರ 2250 ಕೋಟಿ ವೆಚ್ಚದ ತುಂಗಭದ್ರಾ ಹಿನ್ನೀರಿನ ಕುಡಿಯುವ ನೀರಿನ ಯೋಜನೆ ಮುಂಜೂರು ಮಾಡಿತ್ತು. ಅಂದಿನ ಶಾಸಕ ಎಸ್.ತಿಪ್ಪೇಸ್ವಾಮಿ ಆದಿಯಾಗಿ ಐದು ತಾಲೂಕುಗಳ ಶಾಸಕರೊಟ್ಟಿಗೆ ಸರ್ಕಾರ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿತ್ತು. ಅಲ್ಲಿಂದ ಆರಂಭಗೊಂಡ ಕಾಮಗಾರಿ ಪ್ರಸಕ್ತ ವರ್ಷ ಪೂರ್ಣಗೊಂಡು ಸರ್ಕಾರಗಳ ಮಲತಾಯಿ ದೋರಣೆ ಪ್ರಕೃತಿಯ ಮುನಿಸಿನಿಂದ ತಾಲೂಕಿಗೆ ವರವಾಗಿ ಕಾಡುತ್ತಿರುವ ಬರದ ಬೀಕರತೆ ಜನತೆಯ ಬದುಕನ್ನು ಕಸಿದುಕೊಂಡು ಅಟ್ಟಹಾಸ ಮೆರೆಯುತ್ತಾ ಹನಿ ನೀರಿಗೂ ಪರಿತಪಿಸುತ್ತಾ ಹಿಂದುಳಿದ ಪ್ರದೇಶವೆನ್ನುವ ಶಾಶ್ವತ ಹಣೆ ಪಟ್ಟಿ ಗೀಚಿಕೊಂಡು ಸಾಗಿರುವ ಈ ಭಾಗದಲ್ಲಿ ಮಳೆಗಾಲ ಆರಂಭಗೊಂಡು ಜಲಾಶಯದಲ್ಲಿ ನೀರು ಸಂಗ್ರಹವಾದಲ್ಲಿ ತಾಲೂಕಿನ ಪ್ರತಿ ಮನೆಯಲ್ಲಿ ತುಂಗೆಭದ್ರೆಯ ಕಲರವ ಕೇಳಿಬರುವ ಕಾಲ ಸನ್ನಿಹಿತವಾಗಿದೆ ಎನ್ನಲಾಗುತ್ತಿದೆ.ಮಂದಗತಿಯಲ್ಲಿ ಜೆಜೆಎಂ ಕಾಮಗಾರಿ

ಬಹು ನಿರೀಕ್ಷಿತ ಕುಡಿಯುವ ನೀರಿನ ಯೋಜನೆಯಲ್ಲಿ ಒಂದಾಗಿರುವ ಜಲ ಜೀವನ್ ಮಿಷನ್ ಕಾಮಗಾರಿ ತಾಲೂಕಿನಲ್ಲಿ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ನಿರ್ವಹಣೆ ಮಂದಗತಿಯಲ್ಲಿ ಸಾಗುತ್ತಿದೆ. ಬಿ.ಜಿ ಕೆರೆ, ಕೊಂಡ್ಲಹಳ್ಳಿ, ಕೋನಸಾಗರ, ರಾಂಪುರ ಸೇರಿದಂತೆ ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ಇನ್ನೂ ಕೆಲ ಗ್ರಾಮಗಳಲ್ಲಿ ನಳಗಳನ್ನು ಅಳವಡಿಸಲು ಅಗೆದಿದ್ದ ರಸ್ತೆಯನ್ನು ದುರಸ್ತಿ ಮಾಡಲು ಮುಂದಾಗಿಲ್ಲ. ತುಂಗಭದ್ರ ಇನ್ನಿರಿನ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದರು ಜಲಜೀವನ್ ಮಿಷನ್ ಯೋಜನೆಯ ಮಗಾರಿ ವಿಳಂಬವಾಗುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ