ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ನರೇಗಾ ವರದಾನ

KannadaprabhaNewsNetwork |  
Published : Apr 21, 2025, 12:47 AM IST
ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ವಿವಿಧ ಕಾಮಗಾರಿಗಳು. | Kannada Prabha

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಮಾನವ ದಿನಗಳ ಸೃಜನೆಯಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದೆ.

ಕೆ.ಆರ್.ರವಿಕಿರಣ್

ಕನ್ನಡಪ್ರಭ ವಾರ್ತೆ,ದೊಡ್ಡಬಳ್ಳಾಪುರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಮಾನವ ದಿನಗಳ ಸೃಜನೆಯಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದೆ.

ಯೋಜನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಕಳೆದ 2023-24ನೇ ಸಾಲಿನಲ್ಲಿ 14ನೇ ಸ್ಥಾನದಲ್ಲಿತ್ತು. ಆರ್ಥಿಕ ವರ್ಷ 2024-25ನೇ ಸಾಲಿನಲ್ಲಿ 14 ಲಕ್ಷ ಗುರಿ ಹೊಂದಿದ್ದು, ಗುರಿಯನ್ನು ಮೀರಿ 16,310 ಲಕ್ಷ ಮಾನವ ದಿನಗಳ ಸೃಜನೆ ಮಾಡಿ ಶೇ.116.50 ಪ್ರಗತಿ ಸಾಧಿಸಿದೆ. ಗ್ರಾಮಗಳ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಆಸ್ತಿಗಳ ಸೃಜನೆ ಮಾಡುವ ಮೂಲಕ ಗ್ರಾಮೀಣ ಜನರ ಸಬಲೀಕರಣಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಿ, ಗುರಿಯನ್ನು ಮಿರಿ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು 4ನೇ ಸ್ಥಾನದಲ್ಲಿದೆ.

ಹೊಸಕೋಟೆ ತಾಲೂಕಲ್ಲಿ ಶೇ.139 ಸಾಧನೆ:

ಯೋಜನೆಯಲ್ಲಿ ಜಿಲ್ಲೆಯಲ್ಲಿ ಮಾನವ ದಿನಗಳ ಸೃಜನೆಯಲ್ಲಿ ತಾಲೂಕುವಾರು ಪ್ರಗತಿ ಸಾಧಿಸಿದೆ. ದೇವನಹಳ್ಳಿ ತಾಲೂಕು ಶೇ 113.48, ದೊಡ್ಡಬಳ್ಳಾಪುರ ತಾಲೂಕು ಶೇ.104.19, ಹೊಸಕೋಟೆ ತಾಲೂಕು ಶೇ.139.30 ಮತ್ತು ನೆಲಮಂಗಲ ತಾಲೂಕು ಶೇ.91.38 ಪ್ರಗತಿಯನ್ನು ಸಾಧಿಸಿದೆ. ಸದರಿ ಯೋಜನೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಒಟ್ಟು 1,19,669 ಉದ್ಯೋಗ ಚೀಟಿಯನ್ನು ಹೊಂದಿರುವ ನೋಂದಾಯಿತ ಕುಟುಂಬಗಳಿದ್ದು, ಅದರಲ್ಲಿ 2,61,128 ಕೂಲಿಕಾರರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

ವಿವಿಧ ಚಟುವಟಿಕೆಗಳ ಮೂಲಕ ಉದ್ಯೋಗ:

ಯೋಜನೆಯಲ್ಲಿ ಉದ್ಯೋಗ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ವಾರ್ಷಿಕವಾಗಿ 100 ದಿನಗಳ ಉದ್ಯೋಗವನ್ನು ನೀಡಲಾಗುತ್ತಿದ್ದು, ಅರ್ಥಿಕವಾಗಿ ಸಬಲರಾಗಲು ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ರೇಷ್ಮೆ, ಸಾಮಾಜಿಕ ಅರಣ್ಯ ಇಲಾಖೆ, ಪಂಚಾಯತ್‌ ರಾಜ್‌ ಇಂಜನಿಯರಿಂಗ್‌(ಪಿಆರ್‌ಇಡಿ) ಇಲಾಖೆಗಳು ಮಹತ್ವದ ಪಾತ್ರವನ್ನು ವಹಿಸಿವೆ. ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಸಮುದಾಯ ಚಟುವಟಿಕೆಗಳು ಸಮಗ್ರವಾಗಿ ಶಾಲಾಭಿವೃದ್ಧಿ, ಸ್ಮಶಾನ, ಚರಂಡಿ, ಬೂದು ನೀರು ನಿರ್ವಹಣೆ ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ, ಸಂಜೀವಿನಿ ಭವನ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM)ಗಳ ಅಭಿವೃದ್ದಿ ಸಹಕಾರಿಯಾಗಿದೆ. ಹಾಗೇ ವೈಯಕ್ತಿಕ ಕಾಮಗಾರಿಗಳಾದ ಹಸುಶೆಡ್‌, ಕುರಿಶೆಡ್‌, ಹಂದಿಶೆಡ್‌, ಕೋಳಿಶೆಡ್‌, ವಸತಿ ಯೋಜನೆಯ ಫಲಾನುಭವಿಗಳು, ವಿಶೇಷ ಚೇತನರು, ಹಿರಿಯ ನಾಗರಿಕರು ಮತ್ತು ಗರ್ಭಿಣಿ ಸ್ತ್ರೀಯರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

ಸ್ವಚ್ಛ ಭಾರತ ಮಿಷನ್‌ಗೂ ಸಹಕಾರಿ:

ಸ್ವಚ್ಛ ಭಾರತ್‌ ಮಿಷನ್‌ ಮತ್ತು ಬೂದು ನೀರು ನಿರ್ವಹಣೆ ಗ್ರಾಮೀಣ ಯೋಜನೆ ಅಧೀನದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂಲಕ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಇದರ ಹೊರತಾಗಿ ನರೇಗಾ ಮೂಲಕವೂ ವಿಶೇಷ ಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ.

ಮಹಿಳಾ ಸಬಲೀಕರಣಕ್ಕೂ ಪೂರಕ:

ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾದ ನರೇಗಾ ಯೋಜನೆಯಡಿ ಮಹಿಳೆಯರು ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ, ಅರ್ಥಿಕ ವರ್ಷ 2024-25ನೇ ಸಾಲಿನಲ್ಲಿ ಶೇ.51.97 ಪ್ರಗತಿಯನ್ನು ಸಾಧಿಸಲಾಗಿರುತ್ತದೆ. ಮುಖ್ಯವಾಗಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂಬುದು ಜಿಲ್ಲಾಡಳಿತದ ಮಾಹಿತಿ/

ಸ್ತ್ರೀ ಚೇತನ, ದುಡಿಯೋಣ ಬಾ ಅಭಿಯಾನ:

ಮಹಿಳೆಯರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವುದಕ್ಕೆ ಏಪ್ರಿಲ್‌ 1ರಿಂದ ಜೂನ್‌ 30 ರವರೆಗೆ ಮೂರು ತಿಂಗಳ ಕಾಲ ಅಭಿಯಾನವನ್ನು ಹಮ್ಮಿಕೊಂದಿದೆ. ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸ್ತ್ರೀಚೇತನ ಮತ್ತು ದುಡಿಯೋಣ ಬಾ ಅಭಿಯಾನ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಶೇ.60 ಗುರಿ ಸಾಧಿಸಲು, ಕರಪತ್ರ ವಿತರಣೆ, ಮನೆ ಮನೆಗೆ ಭೇಟಿ, ಆಟೋ ಮೂಲಕ ಪ್ರಚಾರ ಮಾಡುವುದು, ವಾರ್ಡ್‌ಗಳಲ್ಲಿ ಸಭೆ ಮಾಡುವುದು, ಗ್ರಾಮಗಳಲ್ಲಿನ ಸಭೆ ಮೂಲಕ ಇನ್ನೂ ಹೆಚ್ಚಿನ ಪ್ರಚಾರ ಮಾಡಲು ಯೋಜನೆ ರೂಪಿಸಿ 101 ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಜಿಲ್ಲೆಯ ಗಣನೀಯ ಸಾಧನೆಗೆ ಜಿಲ್ಲಾಡಳಿತ, ವಿವಿಧ ಇಲಾಖೆಗಳು ಸಂತಸ ವ್ಯಕ್ತಪಡಿಸಿದ್ದು, ಸಾಧನೆಯನ್ನು ಮುಂದುವರೆಸುವ ಹಂಬಲ ತೋರಿವೆ. ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ 15 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯನ್ನು ಹೊಂದಲಾಗಿದ್ದು. ಗ್ರಾಮ ಪಂಚಾಯಿತಿಗಳಿಂದ ಬಂದಂತಹ ಯೋಜನೆಗಳಿಗೆ ರಾಜ್ಯದಿಂದ ಅನುಮೊದನೆಯನ್ನು ಪಡೆದುಕೊಂಡು ಕಾಮಗಾರಿಗಳಿಗೆ ನಿಯಮಾನುಸಾರ ಚಾಲನೆ ನೀಡಲಾಗಿದೆ.

----------

ನರೇಗಾ ಯೋಜನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಕಳೆದ 2023-24ನೇ ಸಾಲಿನಲ್ಲಿ 14ನೇ ಸ್ಥಾನದಲ್ಲಿತ್ತು. ಆರ್ಥಿಕ ವರ್ಷ 2024-25ನೇ ಸಾಲಿನಲ್ಲಿ 14 ಲಕ್ಷ ಗುರಿ ಹೊಂದಿದ್ದು, ಗುರಿಯನ್ನು ಮೀರಿ 16,310 ಲಕ್ಷ ಮಾನವ ದಿನಗಳ ಸೃಜನೆ ಮಾಡಿ ಶೇ.116.50 ಪ್ರಗತಿ ಸಾಧಿಸಿದೆ.

-ಕೆ.ಎನ್.ಅನುರಾಧ, ಸಿಇಒ, ಜಿಪಂ, ಬೆಂ.ಗ್ರಾ

---------

ನೈಸರ್ಗಿಕ ಸಂಪನ್ಮೂಲಗಳಾದ ಜಲ ಸಂರಕ್ಷಣೆ, ಅರಣ್ಯೀಕರಣ, ಗ್ರಾಮಗಳ ಸ್ವಚ್ಛತೆ ಮತ್ತು ಶಾಲೆಗಳ ಅಭಿವೃದ್ಧಿಗೆ ನರೇಗಾ ಯೋಜನೆಯಡಿ ಹೆಚ್ಚಿನ ಗಮನ ಹರಿಸಲಾಗಿದೆ.

-ಟಿ.ಕೆ.ರಮೇಶ್‌, ಉಪಕಾರ್ಯದರ್ಶಿ, ಜಿಪಂ, ಬೆಂ.ಗ್ರಾ

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌