ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಗ್ರಾಮೀಣ ಪ್ರದೇಶದ ಜನರು ಸೇರಿದಂತೆ ಪ್ರತಿಯೊಬ್ಬರಿಗೂ ಕಾನೂನು ಅರಿವು ಮೂಡಿಸಿದರೆ ವಾಜ್ಯ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಮದ್ದೂರು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್ ಹರಿಣಿ ತಿಳಿಸಿದರು.ಸಮೀಪದ ಅಲಭುಜನಹಳ್ಳಿಯ ಶ್ರೀಕಂಚಿನ ಮಾರಮ್ಮ ದೇವಾಲಯ ಆವರಣದಲ್ಲಿ ಹುಬ್ಬಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯ, ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಕಾಲೇಜು ಆಫ್ ಲಾ, ಮದ್ದೂರು ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಹಾಗೂ ಅಣ್ಣೂರು ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶದ ಜನತೆಗೆ ಇರುವಷ್ಟು ಕಾನೂನು ಅರಿವು ಗ್ರಾಮೀಣ ಪ್ರದೇಶದ ಜನರಿಗಿಲ್ಲ. ಕಾನೂನು ದಿನೇ ದಿನೇ ಕಠಿಣವಾಗುತ್ತಿದ್ದು, ಅದರ ಅರಿವು ಪಡೆದರೆ ಕಾನೂನು ಸಲಹೆಗಳು ಮುಕ್ತವಾಗಿ ದೊರೆಯುತ್ತದೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರಿಗೆ ಉಚಿತ ಕಾನೂನು ಅರಿವು ಮೂಡಿಸಲು ಪ್ರಾಧಿಕಾರ ರಚಿಸಿದೆ. ಈ ಮೂಲಕ ಉಚಿತ ಕಾನೂನು ನೀಡಲು ಆಗತ್ಯ ಕ್ರಮ ಕೈಗೊಂಡಿದ್ದರೂ ಕೂಡ ಗ್ರಾಮೀಣ ಜನರು ಪ್ರಯೋಜನ ಪಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಕಾನೂನು ಕಟ್ಟೆ ಕಡೆಯ ಜನತೆಗೂ ಸಿಗಬೇಕು ಎಂಬುವುದೇ ಕಾನೂನು ಸೇವೆಗಳ ಸಮಿತಿ ಉದ್ದೇಶವಾಗಿದೆ. ಈ ಬಗ್ಗೆ ಜನತೆ ಜಾಗೃತರಾಗಿ ಕಾನೂನಿನ ಅರಿವು ಪಡೆಯುವಂತೆ ಕಿವಿಮಾತು ಹೇಳಿದರು.ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಕಾನೂನು ಸೇವಗಳ ಸಮಿತಿಯಿಂದ ಉಚಿತವಾಗಿ ವಕೀಲರನ್ನು ನೇಮಿಸಿಕೊಡಲಾಗುತ್ತದೆ. ಈ ಬಗ್ಗೆ ಹಳ್ಳಿಗಾಡಿನ ಜನತೆಗೆ ಅರಿವಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡಲು ಕಾನೂನು ಸೇವಾ ಸಮಿತಿ ಸಂಪರ್ಕಿಸಿ ನಿಮ್ಮ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಿ ಎಂದರು.
ಮದ್ದೂರು 3ನೇ ಅಪಾರ ಸಿವಿಲ್ ನ್ಯಾಯಾಧೀಶ ಎಸ್.ಪಿ.ಕಿರಣ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಾನೂನಿನ ಬಗ್ಗೆ ಅರಿವು ಇದ್ದರೂ ಕೂಡ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿವೆ. ಕಾನೂನು ಸಂಕಷ್ಟಗಳಿದ್ದರೂ ಪೋಷಕರೇ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.18 ವರ್ಷ ತುಂಬಿದ ಯುವತಿಗೆ ಮದುವೆ ಮಾಡಬೇಕು. ಆದರೆ, 16ನೇ ವಯಸ್ಸಿಗೆ ಮದುವೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಬಾಲ ಕಾರ್ಮಿಕರ ಪದ್ಧತಿ ನಿರಂತರವಾಗಿದೆ. ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಈ ಬಗ್ಗೆ ಜನತೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷ ಎ.ಎನ್. ಪ್ರಕಾಶ್‌ಗೌಡ ಮಾತನಾಡಿ, ಪ್ರತಿಯೊಬ್ಬ ಪ್ರಜೆಯು ಕಾನೂನಿಗೆ ತಲೆ ಭಾಗಬೇಕು. ಪೊಲೀಸ್ ಇಲಾಖೆ ನಿಯಮಗಳನ್ನು ಸಾರ್ವಜನಿಕರು ಪಾಲಿಸಿದರೆ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತವೆ ಎಂದರು.ಇದೇ ವೇಳೆ ರಸ್ತೆ ಅಪಘಾತಗಳ ಬಗ್ಗೆ ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್, ಸಂಪನ್ಮೂಲ ವ್ಯಕ್ತಿಗಳಾದ ಜೆಎಂಎಫ್‌ಸಿ ನ್ಯಾಯಲಯದ ಸಹಾಯಕ ಸರ್ಕಾರಿ ಅಭಿಯೋಜಕ ಎಚ್.ಕಪನಿ ನಂಜೇಶ್ವರಿ, ತಾಲೂಕು ಕಾನೂನು ಸೇವೆಗಳ ಸಮಿತಿ ಉಚಿತ ಕಾನೂನು ಸಲಹೆಗಾರರಾದ ಎಚ್.ಬಿ.ನಾಗೇಶ್, ಜಯರಾಮು ಕಾನೂನು ಅರಿವು ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶಿವಮ್ಮ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜು ಆಫ್ ಲಾ ಪ್ರಾಂಶುಪಾಲೆ ಕಾರ್ತಿಕ ರಾಮಮೂರ್ತಿ, ವಕೀಲರ ಸಂಘದ ಕಾರ್ಯದರ್ಶಿ ಎಂ.ಜೆ.ಸುಮಂತ್, ಪಿಡಿಒ ಅಶ್ವಿನಿ, ಆಡಳಿತಧಿಕಾರಿ ಕೆ. ರಮೇಶ್ ಸೇರಿದಂತೆ ಹಲವರು ಇದ್ದರು.