ಹೊಸಪೇಟೆ: ಬಡವರಿಗೆ ಮನೆ, ನಿವೇಶನ ಮಂಜೂರು ಮಾಡಬೇಕು ಮತ್ತು ರೈತರಿಗೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಶಾಸಕ ಎಚ್.ಆರ್.ಗವಿಯಪ್ಪನವರ ಮನೆ ಎದುರು ಸಿಪಿಐಎಂ ಪಕ್ಷದ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಕ್ಕರೆ ಕಾರ್ಖಾನೆ ಸ್ಥಾಪನೆ ಮತ್ತು ಸ್ವಂತ ಮನೆ,ನಿವೇಶನ ಇಲ್ಲದ ಬಡವರಿಗೆ ಮನೆ, ನಿವೇಶನ ಮಂಜೂರು ಮಾಡಬೇಕು. ಹತ್ತಾರು ಸಲ ಚರ್ಚೆ ಮಾಡಿದರೂ ಇನ್ನೆರಡು ತಿಂಗಳಲ್ಲಿ ಅನುಷ್ಠಾನ ಮಾಡುವುದಾಗಿ ಹೇಳುತ್ತಲೆ ಬಂದಿದ್ದೀರಿ. ಇನ್ನೂ ಪತ್ರಿಕೆಗಳಲ್ಲೂ ಈ ರೀತಿಯ ಭರವಸೆಯ ಮಾತುಗಳನ್ನು ಹೇಳುತ್ತಲೇ ಬಂದಿರುತ್ತೀರಿ. ಚುನಾವಣೆ ಸಂದರ್ಭದಲ್ಲಿ ನೀವು ನೀಡಿದ ಭರವಸೆ ನಂಬಿ ಮತದಾರರು ಮೂವತ್ತು ಸಾವಿರಕ್ಕೂ ಮೇಲ್ಪಟ್ಟು ಅಂತರದಲ್ಲಿ ಗೆಲ್ಲಿಸಿದ್ದಾರೆ. ವಿಜಯನಗರ ಕ್ಷೇತ್ರದ ರೈತರು, ಕಾರ್ಮಿಕರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಹಾಗೂ ಬಡವರಿಗೆ ನೀಡಿದ ಭರವಸೆಯ ಮಾತಿನಂತೆ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು:ಹೊಸಪೇಟೆ ನಗರಕ್ಕೆ ಹೊಂದಿಕೊಂಡಿರುವ ಜಂಬುನಾಥನಹಳ್ಳಿ ಗ್ರಾಮದ ಸರ್ಕಾರಿ ಸರ್ವೆ ನಂಬರ್ ಪೈಕಿ 84.86 ಎಕರೆ ಮತ್ತು ಸಂಕ್ಲಾಪುರ ಗ್ರಾಮದ ಸರ್ಕಾರಿ ಸರ್ವೆ ನಂ.185/2 ಪೈಕಿ 281.11 ಎಕರೆ ಒಟ್ಟು 365.97 ಎಕರೆ ಸರ್ಕಾರಿ ಜಮೀನನ್ನು ಮನೆ ನಿವೇಶನ ಇಲ್ಲದ ಎಸ್ಸಿ,ಎಸ್ಟಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಅರ್ಹ ಬಡ ಕುಟುಂಬಗಳಿಗೆ 30/40 ಅಡಿ ವಿಸ್ತೀರ್ಣದ ನಿವೇಶನ ಮಂಜೂರು ಮಾಡಬೇಕು. ಹಾಗೆಯೇ ಸರ್ಕಾರಿ ಇಲಾಖೆಗಳಿಗೂ ಜಾಗ ಮೀಸಲಿಡಬೇಕು. ರೈತರ ಸಾಗುವಳಿ ಭೂಮಿಗೆ ಪಟ್ಟಾ ವಿತರಿಸಬೇಕು ಎಂದು ಒತ್ತಾಯಿಸಿದರು.
ಬ್ರಿಟೀಷರ ಕಾಲದ 1934ರಲ್ಲಿ ಹೊಸಪೇಟೆಯಲ್ಲಿ ಸ್ಥಾಪನೆಯಾದ ಸಕ್ಕರೆ ಕಾರ್ಖಾನೆ 2015ರಲ್ಲಿ ಮುಚ್ಚಲಾಗಿದೆ. 5 ಲಕ್ಷ ಟನ್ ಕಬ್ಬು ಬೆಳೆಯುವ ರೈತರ ಬೆನ್ನಿಗೆ ಚೂರಿ ಹಾಕಿ ಮೋಸ ಮಾಡಲಾಗಿದೆ. 2023ರಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದರು.ಸ್ಲಂಬೋರ್ಡ್ ಏರಿಯಾಗಳಲ್ಲಿ ನೀಡಲಾದ ಮನೆಗಳಿಗೆ ಸರಿಯಾದ ಕಟ್ಟಡ ಸಾಮಗ್ರಿ ಕೊಡದೆ ಮತ್ತು ಇತರೆ ನಿರ್ಮಾಣ ಕೆಲಸಗಳಿಗೆ ಹಣ ಬಿಡುಗಡೆ ಮಾಡದೇ ಇರುವ ಕೊಳಚೆ ನಿರ್ಮೂಲನ ಮಂಡಳಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಹೊಸಪೇಟೆ 34, 35ನೇ ವಾರ್ಡ್ ಏರಿಯಾಗಳಾದ ಉಕ್ಕಡಕೇರಿ, ಆಕಾಶವಾಣಿ, ಪಾರ್ವತಿ ನಗರದ ವಸತಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಕೆಇಬಿ ನಿರಂತರ ವಿದ್ಯುತ್ ಕಡತದಿಂದ ಕುಡಿಯುವ ನೀರಿನ ಸಮಸ್ಯೆ ಹಾಗೂ ಇತರೆ ಕೆಲಸಗಳಿಗೆ ತೊಂದರೆ ಉಂಟಾಗಿದೆ. ಮುನ್ಸೂಚನೆ ನೀಡದೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಆರ್.ಭಾಸ್ಕರ್ ರೆಡ್ಡಿ, ಎನ್.ಯಲ್ಲಾಲಿಂಗ, ಬಿಸಾಟಿ ಮಹೇಶ್, ಗೋಪಾಲ್, ವಿ. ಸ್ವಾಮಿ, ಈಡಿಗರ ಮಂಜುನಾಥ, ಸತ್ಯಮೂರ್ತಿ ಮತ್ತಿತರರಿದ್ದರು.