ಮಂಡ್ಯದಲ್ಲಿ ಕನ್ನಡ ಭವನ, ಕ್ರೀಡಾಂಗಣ ಜಾಗ ನಡುವೆ ಜಟಾಪಟಿ

KannadaprabhaNewsNetwork |  
Published : Oct 01, 2026, 01:45 AM IST
೩೦ಕೆಎಂಎನ್‌ಡಿ-೧ಒಳಾಂಗಣ ಕ್ರೀಡಾಂಗಣ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕನ್ನಡ ಭವನದ ರೇಖಾಚಿತ್ರ. | Kannada Prabha

ಸಾರಾಂಶ

ಮಂಡ್ಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕನ್ನಡ ಭವನ ನಿರ್ಮಿಸುವ ವಿಚಾರ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಕ್ರೀಡಾ ಚಟುವಟಿಕೆಗಳಿಗೆ ಮೀಸಲಾದ ಜಾಗದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕ್ರೀಡಾಪಟುಗಳು, ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದರೆ, ವಿರೋಧದ ನಡುವೆಯೂ ಕನ್ನಡ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಸಿದ್ಧತೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕನ್ನಡ ಭವನ ನಿರ್ಮಿಸುವ ವಿಚಾರ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಕ್ರೀಡಾ ಚಟುವಟಿಕೆಗಳಿಗೆ ಮೀಸಲಾದ ಜಾಗದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕ್ರೀಡಾಪಟುಗಳು, ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದರೆ, ವಿರೋಧದ ನಡುವೆಯೂ ಕನ್ನಡ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿರುವುದು ಜಟಾಪಟಿಗೂ ಕಾರಣವಾಗಿದೆ.

೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸವಿನೆ ನಪಿಗಾಗಿ ಕನ್ನಡ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಒಳಾಂಗಣ ಕ್ರೀಡಾಂಗಣದ ೧೩ ಗುಂಟೆ ಜಾಗದಲ್ಲಿ ಕನ್ನಡ ಭವನ ನಿರ್ಮಿಸಲು ಉದ್ದೇಶಿಸಿ ೩೦ ಜನವರಿ ೨೦೨೬ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಂದ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಸಮಯದಲ್ಲಿ ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು ಕ್ರೀಡಾ ಚಟುವಟಿಕೆಗಳಿಗೆ ಮೀಸಲಾದ ಜಾಗದಲ್ಲಿ ಕನ್ನಡ ಭವನ ನಿರ್ಮಿಸುತ್ತಿರುವುದಕ್ಕೆ ಸ್ಥಳದಲ್ಲೇ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಹತ್ತು ತಿಂಗಳ ಬಳಿಕ ಕಳೆದ ವಾರ ಕನ್ನಡ ಭವನ ನಿರ್ಮಾಣ ಕಾಮಗಾರಿ ಆರಂಭಕ್ಕೆ ಮುಂದಾದಾಗ ಕ್ರೀಡಾಪಟುಗಳು ತೀವ್ರ ವಿರೋಧ ವ್ಯಕ್ತಪಡಿಸಿ ಕ್ರೀಡಾಂಗಣ ಜಾಗದಲ್ಲಿದ್ದ ಮರಗಳನ್ನು ಕಡಿಯಲು ಬಂದಿದ್ದವರನ್ನು ವಾಪಸ್ ಕಳುಹಿಸಿದ್ದರು. ಇದೀಗ ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು ಕ್ರೀಡಾಂಗಣದ ಜಾಗ ಉಳಿವಿಗೆ ಹೋರಾಟವನ್ನು ತೀವ್ರಗೊಳಿಸಿದ್ದು, ಅವರಿಗೆ ಹಲವು ಸಂಘಟನೆಯವರೂ ಸಾಥ್ ನೀಡಿದ್ದಾರೆ.

ವಾಲಿಬಾಲ್ ಕ್ರೀಡಾಂಗಣಕ್ಕೆ ರೂಪುರೇಷೆ ತಯಾರು:

ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಎರಡು ಸುಸಜ್ಜಿತ ವಾಲಿಬಾಲ್ ಕ್ರೀಡಾಂಗಣವನ್ನು ನಿರ್ಮಿಸಲು ೧೫.೧೨.೨೦೨೨ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ವಾಲಿಬಾಲ್ ಅಂಕಣಕ್ಕೆ ೧೮ ಲಕ್ಷ ರು., ಆಸನಗಳ ವ್ಯವಸ್ಥೆಗೆ ೧೮ ಲಕ್ಷ ರು. ಹಾಗೂ ಉಡುಪು ಬದಲಾವಣೆ ಕೊಠಡಿ ನಿರ್ಮಾಣ ಕಾಮಗಾರಿಗೆ ೨೮ ಲಕ್ಷ ರು. ಸೇರಿ ೬೪ ಲಕ್ಷ ರು ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿತ್ತು. ಮೊದಲ ಹಂತದಲ್ಲಿ ೨೮ ಲಕ್ಷ ರು. ಹಣವನ್ನು ಬಿಡುಗಡೆಗೊಳಿಸಲಾಗಿತ್ತು. ಕಾರಣಾಂತರಗಳಿಂದ ಕಾಮಗಾರಿ ಆರಂಭಗೊಳ್ಳದೆ ನೆನೆಗುದಿಗೆ ಬಿದ್ದಿತ್ತು.

ಜಾಗ ಕ್ರೀಡಾಂಗಣಕ್ಕೆ ಖಾತೆಯಾಗಿಲ್ಲ:

ಸರ್ವೇ ನಂ. ೯೦/೨ರಲ್ಲಿ ೪ ಎಕರ ೨೬ ಗುಂಟೆ ಸರ್ಕಾರಿ ಖರಾಬು ಟೌನ್ ಬಡಾವಣೆ ಎಂದು ನಮೂದಾಗಿದೆ. ಒಟ್ಟು ೫.೩೯ ಗುಂಟೆ ಜಮೀನಾಗಿದ್ದು ಈ ಜಮೀನನ್ನು ಖಾತೆ ಬದಲಾವಣೆ ಮಾಡುವ ಬಗ್ಗೆ ತಹಸೀಲ್ದಾರ್ ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವರು ಪತ್ರ ಬರೆದಿದ್ದರು. ಅದರಂತೆ ೯ ಜುಲೈ ೨೦೨೪ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪತ್ರದನ್ವಯ ಮಂಡ್ಯ ಮಂಡ್ಯ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್‌ರವರಿಗೆ ಅಪರ ಜಿಲ್ಲಾಧಿಕಾರಿಗಳು ಪತ್ರ ಬರೆದು ಕ್ರೀಡಾಂಗಣಕ್ಕಾಗಿ ಖಾತೆ ವರ್ಗಾಯಿಸುವ ಬಗ್ಗೆ ಪತ್ರ ಬರೆದಿದ್ದರು. ಆದರೆ, ಇದುವರೆಗೂ ಜಮೀನು ಖಾತೆ ಬದಲಾವಣೆಯಾಗದೆ ಸರ್ಕಾರಿ ಖರಾಬು ಟೌನ್ ಬಡಾವಣೆ ಹೆಸರಿನಲ್ಲೇ ಉಳಿದುಕೊಂಡಿದೆ.

ಕನ್ನಡ ಭವನವನ್ನು ವಿಶಾಲ ಜಾಗದಲ್ಲಿ ನಿರ್ಮಿಸಿ:

ಕನ್ನಡ ಭವನಕ್ಕೆ ನಗರ ವ್ಯಾಪ್ತಿಯಲ್ಲೇ ಸಾಕಷ್ಟು ಸ್ಥಳಾವಕಾಶಗಳಿವೆ. ನಿರುಪಯುಕ್ತವಾಗಿರುವ ಪಂಪ್‌ಹೌಸ್ ಜಾಗ, ಪೇಟೆಬೀದಿಯೊಳಗಿರುವ ಹಳೇ ತಾಲೂಕು ಕಚೇರಿ, ವಾರ್ತಾಭವನ ಪಕ್ಕದಲ್ಲಿರುವ ಹಳೇ ತಾಲೂಕು ಕಚೇರಿ ಜಾಗಗಳಿವೆ. ಅಲ್ಲಿ ವಿಶಾಲವಾದ ಸ್ಥಳವಿದ್ದು ಕನ್ನಡ ಭವನವನ್ನು ಅದ್ಭುತವಾಗಿ ನಿರ್ಮಿಸಲು ಸಾಧ್ಯವಿದೆ. ಕ್ರೀಡಾ ಚಟುವಟಿಕೆಗಳಿಗೆ ಇದೊಂದು ಜಾಗ ಬಿಟ್ಟರೆ ಬೇರೆಲ್ಲೂ ಜಾಗವಿಲ್ಲ. ಜಿಲ್ಲಾಡಳಿತ, ಸಚಿವರು, ಶಾಸಕರು ಇದನ್ನು ಅರ್ಥ ಮಾಡಿಕೊಂಡು ಕನ್ನಡ ಭವನವನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಬಿಗಿಪಟ್ಟು ಹಿಡಿದು ಬುಧವಾರದಿಂದ ಒಳಾಂಗಣ ಕ್ರೀಡಾಂಗಣ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕ್ರೀಡಾಂಗಣ ಜಾಗ ಉಳಿವಿನ ಹೋರಾಟಕ್ಕೆ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ಎಂ.ಕೆ.ಸೋಮಶೇಖರ್, ಖಜಾಂಚಿ ಗಿರೀಶ್, ಪಿ.ಎಂ.ಸೋಮಶೇಖರ್, ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತ್ಯಪ್ಪ, ಜಿ.ಕೆ.ಉಮೇಶ್, ಕರುನಾಡ ಸೇವಕರು ಸಂಘಟನೆಯ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಬೆಂಬಲ ಸೂಚಿಸಿದ್ದಾರೆ.ಕ್ರೀಡಾಂಗಣದ ಜಾಗ ಉಳಿವಿಗಾಗಿ ಗುರುವಾರ ಬೆಳಗ್ಗೆ ೮ ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಕ್ರೀಡಾಪಟುಗಳು ಆಟವಾಡುವ ಮೂಲಕ ಕ್ರೀಡಾಂಗಣಕ್ಕೆ ಜಾಗವಿಲ್ಲವೆಂಬ ಸಂಗತಿಯನ್ನು ಅಣಕು ಪ್ರದರ್ಶನದ ಮೂಲಕ ತೋರಿಸಲಿದ್ದಾರೆ. ಕ್ರೀಡಾಪಟುಗಳಿಗೆ ಇರುವುದು ಇದೊಂದೇ ಜಾಗ. ಇದನ್ನೂ ಕನ್ನಡ ಭವನಕ್ಕಾಗಿ ಅತಿಕ್ರಮಣ ಮಾಡುವುದು ಬೇಡ. ಈಗಾಗಲೇ ಕ್ರೀಡಾ ಉದ್ದೇಶಕ್ಕಿದ್ದ ಜಾಗವನ್ನು ಸಾಕಷ್ಟು ಕಳೆದುಕೊಂಡಿದ್ದೇವೆ. ಈ ಜಾಗವೂ ಕೈತಪ್ಪಿದರೆ ಕ್ರೀಡಾಪಟುಗಳು ಬೀದಿಗೆ ಬೀಳುವರು.

- ಎಂ.ಕೆ.ಸೋಮಶೇಖರ್, ಕಾರ್ಯದರ್ಶಿ, ವಾಲಿಬಾಲ್ ಅಸೋಸಿಯೇಷನ್ ಸಂಸ್ಥೆ

ಮಂಡ್ಯದ ಹೃದಯ ಭಾಗದಲ್ಲಿ ಕನ್ನಡ ಭವನ ನಿರ್ಮಿಸಿದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಈಗಾಗಲೇ ಭವನ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ. ಸಕಾಲದಲ್ಲಿ ಬಳಸಿಕೊಂಡರೆ ಅದ್ಭುತ ಭವನ ತಲೆ ಎತ್ತಲಿದೆ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಉಪಯೋಗವಾಗಲಿದೆ. ಕನ್ನಡ ಭವನವನ್ನು ನಗರದಿಂದ ೫ ಕಿ.ಮೀ. ಹೊರಗೆ ನಿರ್ಮಿಸಿದರೆ ಯಾರು ಹೋಗುತ್ತಾರೆ. ಎಲ್ಲರ ಅಭಿಪ್ರಾಯವನ್ನು ಕೇಳಿಕೊಂಡು ಯಾವುದೇ ಕೆಲಸ ಮಾಡಲಾಗುವುದಿಲ್ಲ. ಕನ್ನಡ ಭವನ ಉದ್ದೇಶಿತ ಜಾಗದಲ್ಲೇ ನಿರ್ಮಿಸುತ್ತೇವೆ. ಇಲ್ಲದಿದ್ದರೆ ಹಣ ವಾಪಸ್ ಹೋಗಲಿದೆ. ಅದರಿಂದ ಯಾರಿಗೂ ಉಪಯೋಗವಾಗುವುದಿಲ್ಲ.

- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ

ಮುಖ್ಯಾಂಶ

- ಕ್ರೀಡಾ ಚಟುವಟಿಕೆಗಳಿಗೆ ಮೀಸಲಾದ ಜಾಗದಲ್ಲಿ ಕನ್ನಡ ಭವನ ಬೇಡ

- ವಾಲಿಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ೨೦೨೨ರಲ್ಲೇ ನೀಲಿ ನಕಾಶೆ ತಯಾರು

- ೩೦ ಜನವರಿ ೨೦೨೬ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಶಂಕುಸ್ಥಾಪನೆ

- ಹತ್ತು ತಿಂಗಳ ಬಳಿಕ ಕಳೆದ ವಾರ ಕನ್ನಡ ಭವನ ನಿರ್ಮಾಣ ಕಾಮಗಾರಿ ಆರಂಭ

- ಈ ಹಿಂದೆಯೇ ವಾಲಿಬಾಲ್ ಕ್ರೀಡಾಂಗಣಕ್ಕೆ ರೂಪುರೇಷೆ ತಯಾರು

- ಉದ್ದೇಶಿತ ಜಾಗ ಕ್ರೀಡಾಂಗಣಕ್ಕೆ ಖಾತೆಯಾಗಿಲ್ಲ

- ವಿಶಾಲ ಜಾಗದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ಪಟ್ಟು

- ಕ್ರೀಡಾಪಟುಗಳಿಗೆ ಇರುವುದು ಇದೊಂದೇ ಜಾಗ ಎಂದು ಜಟಾಪಟಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ರಾಜಕೀಯದಿಂದ ದೂರ ಉಳಿಯಬೇಕು: ಪಿ.ಎಂ.ನರೇಂದ್ರಸ್ವಾಮಿ
ಅಂಕಗಳು ಕಲಿಕೆಯ ಒಂದು ಭಾಗವೇ ಹೊರತು ಅದೇ ಶಿಕ್ಷಣದ ಮೂಲ ಗುರಿಯಲ್ಲ