ಸಕಲೇಶಪುರದ ಹೆತ್ತೂರಿನಲ್ಲಿ ಆಯೋಜನೆ । 22ನೇ ಸಾಹಿತ್ಯ ಉತ್ಸವದ ಪೂರ್ವ ಸಿದ್ಧತೆ ಪೂರ್ಣ
ಸಕಲೇಶಪುರ ತಾಲೂಕು ಹೆತ್ತೂರಿನಲ್ಲಿ ಮಾ.೨೩ ಮತ್ತು ೨೪ ರಂದು ಎರಡು ದಿನಗಳ ಕಾಲ ನಡೆಯುವ ೨೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವ ಸಿದ್ಧತಾ ಕಾರ್ಯ ಪೂರ್ಣಗೊಂಡಿವೆ ಎಂದು ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿ, ಹೆತ್ತೂರಿನ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದ ಡಾ.ಸಿದ್ಧಲಿಂಗಯ್ಯ ಮಹಾವೇದಿಕೆಯಲ್ಲಿ ಮಾ.೨೩ ಮತ್ತು ೨೪ ರಂದು ಎರಡು ದಿನಗಳ ಕನ್ನಡ ಉತ್ಸವ ನಡೆಯಲಿದೆ. ಮೊದಲ ದಿನ ಬೆಳಿಗ್ಗೆ ೮ ಗಂಟೆಗೆ ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ.ಶೃತಿ ಎಂ.ಕೆ. ಅವರು ರಾಷ್ಟ್ರಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಪರಿಷತ್ತಿನ ಧ್ವಜ ಮತ್ತು ತಹಸೀಲ್ದಾರ್ ಮೇಘನಾ ಜಿ. ಅವರು ನಾಡಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಿಗ್ಗೆ ೮.೩೦ಕ್ಕೆ ಸಮ್ಮೇಳನ ಆವರಣದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಕನ್ನಡ ಜಾಗೃತಿ ಜಾಥಾ ನಡೆಯಲಿದ್ದು, ಸಕಲೇಶಪುರ ಸಿಪಿಐ ನಿರಂಜನಕುಮಾರ್ ಚಾಲನೆ ನೀಡುವರು ಎಂದು ತಿಳಿಸಿದರು.ಸಮ್ಮೇಳನದ ಸಾನಿಧ್ಯವನ್ನು ಹಾಸನ, ಕೊಡಗು ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿ ವಹಿಸುವರು. ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಗೌರವ ಉಪಸ್ಥಿತಿ ಇರಲಿದ್ದು, ಹಾಸನ ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಆಶಯ ನುಡಿಗಳನ್ನು ಆಡಲಿದ್ದು, ರಮಾ ಸಿದ್ದಲಿಂಗಯ್ಯ ಮಹಾ ವೇದಿಕೆ ಉದ್ಘಾಟನೆ ಮಾಡಿದರೆ, ಖ್ಯಾತ ಸಾಹಿತಿ, ಜಾನಪದ-ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಕಾಳೇಗೌಡ ನಾಗವಾರ ಬೆಳಗ್ಗೆ ೧೦ಕ್ಕೆ ಸಮ್ಮೇಳನ ಉದ್ಘಾಟನೆ ನೆರವೇರಿಸುವರು ಎಂದರು.ಸಮ್ಮೇಳನಾಧ್ಯಕ್ಷರ ಮೆರವಣಿಗೆ:
ಬೆಳಿಗ್ಗೆ ೯ ಗಂಟೆಗೆ ವೈವಿಧ್ಯಮಯ ಕಲಾತಂಡ ಮತ್ತು ಪೂರ್ಣಕುಂಭಗಳೊಂದಿಗೆ ಸಮ್ಮೇಳನ ಆರಂಭವಾಗಲಿದ್ದು, ಸತ್ಯ ಮಲ್ಲೇಶ್ವರ ದೇವಾಲಯದಿಂದ ಊರಿನ ಮುಖ್ಯ ರಸ್ತೆ ಮೂಲಕ ಸಮ್ಮೇಳನ ಆವರಣಕ್ಕೆ ಬರಲಿದೆ. ಮೆರವಣಿಗೆಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಚಾಲನೆ ನೀಡಲಿದ್ದು, ಎಸ್ಪಿ ಮೊಹಮದ್ ಸುಜೀತಾ, ಜಿಪಂ ಸಿಒಒ ಡಾ.ಬಿ.ಆರ್.ಪೂರ್ಣಿಮಾ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಕಲೇಶಪುರ ತಾಲೂಕು ಕಸಾಪ ಅಧ್ಯಕ್ಷೆ ಶಾರದಾ ಗುರುಮೂರ್ತಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇರುವರು ಎಂದು ಹೇಳಿದರು.ಸಾಧಕರಿಗೆ ಸನ್ಮಾನ:
ಹೆತ್ತೂರಿನ ವೈದ್ಯ ಹಾಗೂ ಸಮಾಜ ಸೇವಕ ಡಾ. ಅಪ್ಪಸ್ವಾಮಿಗೌಡ, ಅರಕಲಗೂಡು ತಾಲೂಕು ದೊಡ್ಡಮಗ್ಗೆಯ ಡಾ.ಎಂ.ಸಿ.ರಂಗಸ್ವಾಮಿ, ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಎಚ್.ಪಿ.ಮೋಹನ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಬ್ಬು ಹೊಲೆಯಾರ್ ಹಾಗೂ ಮೈಸೂರಿನ ಜಯದೇವ ಹೃದ್ರೋಗ ತಜ್ಞ ಡಾ.ಶ್ರೀನಿಧಿ ಹೆಗಡೆ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು ಎಂದರು.ಮಾ.23 ಮತ್ತು 24 ರಂದು ಎರಡು ಗೋಷ್ಠಿಗಳು ನಡೆಯಲಿವೆ. ಕೊನೆಯ ದಿನ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮಲೆನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿಶೇಷವಾಗಿ ಇತ್ತೀಚಿಗೆ ದುರಂತ ಸಾವಿಗೀಡಾದ ಅಂಬಾರಿ ವೀರ ಅರ್ಜುನ ಆನೆ ಹೆಸರನ್ನು ಮಹಾದ್ವಾರಕ್ಕೆ ಇಡಲಾಗಿದೆ ಎಂದರು.
ಸಾಹಿತಿ ಹುಲ್ಲೇನಹಳ್ಳಿ ರಾಜೇಶ್ವರಿ, ಕಸಾಪ ಪದಾಧಿಕಾರಿಗಳಾದ ಜಯರಾಂ, ಬಿ.ಆರ್.ಬೊಮ್ಮೇಗೌಡ, ಶಂಕರ್, ಹೆತ್ತೂರು ನಾಗರಾಜ್, ವನಜಾ ಸುರೇಶ್ ಇದ್ದರು.ಹಾಸನದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲೇಶಗೌಡ.