ಕಾರವಾರ:
ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಒಬ್ಬ ಉಪ ಲೋಕಾಯುಕ್ತರು ಬೇಕು. ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರದಿಂದ ದೂರುಗಳು ಹೆಚ್ಚು ಬರುತ್ತಿವೆ. ಕಲಬುರಗಿ ವಿಭಾಗ ಮತ್ತು ಧಾರವಾಡ-ಹುಬ್ಬಳ್ಳಿ ವಿಭಾಗಕ್ಕೆ ಒಬ್ಬೊಬ್ಬರು ಉಪ ಲೋಕಾಯುಕ್ತರು ಇದ್ದರೆ ಒಳ್ಳೆಯದು. ಮುಖ್ಯ ಲೋಕಾಯುಕ್ತರ ಜತೆಗೆ ಒಟ್ಟೂ ನಾಲ್ಕು ಉಪ ಲೋಕಾಯುಕ್ತರು ಇದ್ದರೆ ತ್ವರಿತಗತಿಯಲ್ಲಿ ದೂರು ಇತ್ಯರ್ಥಪಡಿಸಿ ಲೋಕಾಯುಕ್ತ ಸಂಸ್ಥೆಗೆ ಇನ್ನಷ್ಟು ಬಲ ತುಂಬಬಹುದು ಎಂದರು.
ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇತರೆ ರಾಜ್ಯಗಳ ಲೋಕಾಯುಕ್ತ ಸಂಸ್ಥೆಗಳಿಗಿಂತ ಕರ್ನಾಟಕದ ಲೋಕಾಯುಕ್ತದ ತೀರ್ಪುಗಳನ್ನು ರಾಜ್ಯ ಸರ್ಕಾರ ಶೇ. 90ರಷ್ಟು ಅನುಷ್ಠಾನಕ್ಕೆ ತರುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಲೋಕಾಯುಕ್ತ ಎಸ್ಪಿ, ಇನ್‌ಸ್ಪೆಕ್ಟರ್ ದರ್ಜೆಯ ವ್ಯವಸ್ಥೆ ಇದೆ ಎಂದ ಅವರು, ಉತ್ತರ ಕನ್ನಡ ಜಿಲ್ಲೆಯ ಅನುಭವಗಳನ್ನು ಹಂಚಿಕೊಂಡು ಈ ಜಿಲ್ಲೆಯಲ್ಲಿ ದೂರುಗಳು ಕಡಿಮೆಯಿದೆ. ಬಂದ ದೂರುಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾಮಗಾರಿ ಮಾಡದೆ ಹಣ ಲಪಾಟಿಯಿಸಿರುವುದು, ಕಳಪೆ ಕಾಮಗಾರಿ, ಒಂದೇ ಕೆಲಸಕ್ಕೆ ಎರಡು ಬಿಲ್ ಹಾಕಿರುವ ದೂರುಗಳೇ ಹೆಚ್ಚು ಹಾಗೂ ಒತ್ತುವರಿ ಪ್ರಕರಣ, ಖಾತಾ ಬದಲಾವಣೆ ವಿಳಂಬ ಮಾಡುವುದು, ಯಾರದೋ ಆಸ್ತಿಗೆ ಇನ್ನಾರದೂ ಹೆಸರು ಬರೆಯುವ ಪ್ರಕರಣದ ದೂರುಗಳು ಹೆಚ್ಚಾಗಿದ್ದವು ಎಂದು ತಿಳಿಸಿದರು.ಲೋಕಾಯುಕ್ತರ ಎದುರು ಉತ್ತರ ಕನ್ನಡ ಜಿಲ್ಲೆಯ ಒಟ್ಟೂ 199 ಪ್ರಕರಣಗಳಿವೆ. ಕಳೆದ ಮೂರು ದಿನಗಳಲ್ಲಿ ನಡೆದ ಅವಹಾಲು ಸ್ವೀಕಾರದಲ್ಲಿ 120 ದೂರು ಸಲ್ಲಿಕೆಯಾಗಿದ್ದು, ಇದರಲ್ಲಿ ನಮ್ಮ ವ್ಯಾಪ್ತಿಗೆ ಬರುವ 33 ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕೆಲ ಪ್ರಕರಣಗಳಲ್ಲಿ ವಾರ, ಹದಿನೈದು ದಿನದ ಗಡುವು ನೀಡಿದ್ದೇವೆ. 10 ಪ್ರಕರಣ ಜಿಲ್ಲಾಧಿಕಾರಿ, 11 ಪ್ರಕರಣ ಕಾನೂನು ಸೇವಾ ಪ್ರಾಧಿಕಾರಕ್ಕೆ, ಜಿಪಂ ಸಿಇಒಗೆ 3 , ಇತರೆ 7 ಪ್ರಕರಣವನ್ನು ಬೇರೆ ಬೇರೆ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ. ಸಂಸ್ಥೆಯಲ್ಲಿ ಬಾಕಿ ಇದ್ದ 40 ಪ್ರಕರಣಗಳ ವಿಚಾರಣೆಗಳನ್ನು ಇಲ್ಲಿ ನಡೆಸಿದ್ದು, ಅದರಲ್ಲಿ 17 ಪ್ರಕರಣ ಇತ್ಯರ್ಥಪಡಿಸಲಾಗಿದೆ. 13 ಪ್ರಕರಣ ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದೆ ಎಂದು ವಿವರಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್, ಲೋಕಾಯುಕ್ತ ಉಪ ನಿಬಂಧಕ ಸಿ. ರಾಜಶೇಖರ್, ಚೆನ್ನಕೇಶವ ರೆಡ್ಡಿ, ಜಿಲ್ಲಾ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಇದ್ದರು.