ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳಿಂದ ಸಾಧನೆ
ಕನ್ನಡಪ್ರಭ ವಾರ್ತೆ ಗಂಗಾವತಿತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಬೃಹತ್ ಗಣೇಶ ಆಕೃತಿ ರಚಿಸುವ ಮೂಲಕ ಗಮನ ಸೆಳೆದಿದ್ದಾರೆ.
ಪ್ರತಿ ವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಒಂದಿಲ್ಲ ಒಂದು ವಿಶೇಷ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಿರುವ ಈ ಶಾಲೆಯ ವಿದ್ಯಾರ್ಥಿಗಳು, ಈ ಬಾರಿ ಶಾಲೆಯ ಮೈದಾನದಲ್ಲಿ ಗಣೇಶ ಆಕೃತಿಯಲ್ಲಿ ನಿಂತು ಗಮನ ಸೆಳೆದರು.2500 ವಿದ್ಯಾರ್ಥಿಗಳು ಭಾಗಿ:
ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಆವರಣದ ಮೈದಾನದಲ್ಲಿ 2,500 ವಿದ್ಯಾರ್ಥಿಗಳು ಗಣೇಶ ಆಕೃತಿಯಲ್ಲಿ ನಿಂತಿದ್ದಾರೆ. ಇದಕ್ಕಿಂತ ಪೂರ್ವದಲ್ಲಿ ಶಾಲೆಯ ಚಿತ್ರಕಲಾ ಶಿಕ್ಷಕರು, ಮುಖ್ಯಸ್ಥರು ಜತೆಗೂಡಿ ಬೃಹತ್ ಗಣೇಶನ ಆಕೃತಿಯನ್ನು ಚಿತ್ರೀಕರಿಸಿದ್ದಾರೆ. ಆನಂತರ ವಿದ್ಯಾರ್ಥಿಗಳು ವಿವಿಧ ರೀತಿಯ ಬಣ್ಣ ಬಣ್ಣದ ವಸ್ತ್ರ ಹಾಕಿಕೊಂಡು ಬಂದು ಶಿಕ್ಷಕರ ಮಾರ್ಗದರ್ಶನದಲ್ಲಿ ನಿಂತಿದ್ದಾರೆ. ಕಿರೀಟ, ಕಿವಿ, ನಾಲ್ಕು ಕೈ, ರೇಷ್ಮೆಯ ವಸ್ತ್ರ, ಕೈಯಲ್ಲಿ ಲಾಡು, ಗಣೇಶನ ಮುಂಭಾಗದಲ್ಲಿ ಇಲಿಯ ಚಿತ್ರ ಕಾಣಿಸಿಕೊಳ್ಳುವಂತೆ ರಚನೆ ಮಾಡಿದ್ದಾರೆ.ಪರಿಸರಸ್ನೇಹಿ ಗಣೇಶ:
ಪ್ರತಿ ವರ್ಷ ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತಿದ್ದ ವಿದ್ಯಾರ್ಥಿಗಳು ಈ ಬಾರಿ ವಿಭಿನ್ನವಾಗಿ ಗಣೇಶೋತ್ಸವ ಆಚರಿಸಿದ್ದಾರೆ. ಬೃಹತ್ ಗಣೇಶ ಆಕೃತಿಯ ರಚನೆಯ ಜತೆಗೂ ಪರಿಸರಸ್ನೇಹಿ ಗಣೇಶ ಮೂರ್ತಿಯನ್ನೂ ತಯಾರಿಸಿದ್ದಾರೆ. ಶಾಲೆಯ ಕಲಾ ಮತ್ತು ಕರಕುಶಲ ವಿಭಾಗದ ಶಿಕ್ಷಕ ವಿನೋದ್‍ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿಶಿಷ್ಟ ರೀತಿಯಲ್ಲಿ ನಾನಾ ವಿಧದ ಗಣೇಶನ ಮೂರ್ತಿಗಳನ್ನು ತಯಾರಿಸಿ, ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ್ದಾರೆ.ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಒಂದಿಲ್ಲ ಒಂದು ವಿಶೇಷ ರೀತಿಯಲ್ಲಿ ಗಣೇಶನ್ನು ತಯಾರಿಸಿ, ಗಮನ ಸೆಳೆಯುತ್ತಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಕ್ಕಳಲ್ಲಿ ಶಿಕ್ಷಣದ ಜತೆಗೆ ಧಾರ್ಮಿಕತೆ ಬೆಳೆಯಲಿ ಎಂಬ ಉದ್ದೇಶದಿಂದ ಪ್ರತಿ ವರ್ಷ ಗಣೇಶ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಈ ಬಾರಿ 2500 ವಿದ್ಯಾರ್ಥಿಗಳೇ ನಿಂತು ಗಣೇಶನ ಆಕೃತಿ ರಚಿಸಿದ್ದಾರೆ. ಜತೆಗೆ ಪರಿಸರ ಗಣೇಶನನ್ನು ತಯಾರಿಸಿ ಮನೆಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದ್ದಾರೆ.