ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ರಂಗಪಂಚಮಿ ಆಡಿದ ನಂತರ ಈಜಲು ಹೋದ ಇಬ್ಬರು ಶಾಲಾ ಬಾಲಕರು ಬಾವಿಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ತಾಲೂಕಿನ ಯಕ್ಸಂಬಾದಲ್ಲಿ ಬುಧವಾರ ಸಂಜೆ ನಡೆದಿದೆ.ವೇದಾಂತ ಸಂಜು ಹಿರೇಕುಡೆ (9), ಮನೋಜ ಕಾಶಿನಾಥ ಕಲ್ಯಾಣಿ (8 ವರ್ಷ) ಮೃತ ಮಕ್ಕಳಾಗಿದ್ದಾರೆ. ಘಟನೆಯಿಂದ ಹಿರೆಕುಡೆ ಮತ್ತು ಕಲ್ಯಾಣಿ ಕುಟುಂಬಗಳು ದುಃಖದಲ್ಲಿ ಮುಳುಗಿದ್ದು, ಪಟ್ಟಣದ ಎಲ್ಲೆಡೆ ಶೋಕ ಆವರಿಸಿತ್ತು.ಘಟನೆ ಹಿನ್ನೆಲೆ:
ವೇದಾಂತ್ ಮತ್ತು ಮನೋಜ್ ಬುಧವಾರ ಬೆಳಗ್ಗೆ ರಂಗಪಂಚಮಿ ಆಡಿಕೊಂಡು ಪಟ್ಟಣದ ಹೊರವಲಯದಲ್ಲಿದ್ದ ಬಾವಿಗೆ ಸ್ನಾನಕ್ಕೆ ತೆರಳಿದ್ದರು. ತಡವಾದರೂ ಇಬ್ಬರೂ ಮಕ್ಕಳು ಮನೆಗೆ ಬಾರದ ಕಾರಣ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಇದೇ ವೇಳೆ ಪಟ್ಟಣದ ಹೊರವಲಯದಲ್ಲಿರುವ ಗದ್ದೆಯ ಬಾವಿಯ ಬಳಿ ಬಟ್ಟೆ, ಚಪ್ಪಲಿ, ಬಕೆಟ್ ಪತ್ತೆಯಾಗಿದ್ದು, ಇದರಿಂದ ಮಕ್ಕಳಿಬ್ಬರು ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ವೇಳೆ ಗ್ರಾಮದ ಕೆಲ ಯುವಕರು ಶೋಧ ಕಾರ್ಯ ಆರಂಭಿಸಿದ್ದರು.ಮೊದಲು ವೇದಾಂತ ಹಿರೇಕುಡೆ ಮೃತದೇಹ ಹೊರ ತರಲಾಯಿತು. ಬಾವಿಯಲ್ಲಿ ನೀರು ಹೇರಳವಾಗಿರುವ ಕಾರಣ ಮತ್ತೊಬ್ಬ ಮನೋಜ್ ಕಲ್ಯಾಣಿಯ ಶವ ಶೋಧಕ್ಕೆ ಅಡ್ಡಿಯಾಗುತ್ತಿತ್ತು ಆದರೂ ಸ್ಥಳೀಯರ ಹಾಗೂ ಸದಲಗಾ ಅಗ್ನಿಶಾಮಕ ದಳದ ಸಿಬ್ಬಂ ಅಲ್ಲದೆ ಔರ್ವಾಡ್‌ನಿಂದ ಬಂದ ವಜೀರ್ ರಕ್ಷಣಾ ಪಡೆ ಸಿಬ್ಬಂದಿ ಸಹಾಯದಿಂದ ಸಂಜೆ ವೇಳೆಗೆ ಮನೋಜ್ ಕಲ್ಯಾಣ್ ಶವವೂ ಪತ್ತೆಯಾಗಿದೆ.
ವೇದಾಂತ ಸಂಜು ಹಿರೇಕುಡೆ ಮೂಲತಃ ಕೆರೂರು ಗ್ರಾಮದ ನಿವಾಸಿಯಾಗಿದ್ದು ಯಕ್ಸಂಬಾದಲ್ಲಿರುವ ಅಜ್ಜನ ಮನೆಯಲ್ಲಿ ವಾಸವಿದ್ದು ಓದುತ್ತಿದ್ದರು. ಇಬ್ಬರ ಮೃತದೇಹಗಳನ್ನು ಯಕ್ಸಂಬಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ರಂಗ ಪಂಚಮಿಯ ದಿನ ನಡೆದ ಈ ದುರ್ಘಟನೆಯಿಂದ ಯಕ್ಸಂಬಾ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.