ಕೆ.ಎಂ.ಮಂಜುನಾಥ್
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಚುನಾಯಿತಗೊಂಡು ಕೇಂದ್ರದಲ್ಲಿ ಸಚಿವರಾದವರು ಈ ಜಿಲ್ಲೆಗೆ ನೀಡಿದ ಕೊಡುಗೆ ಏನು ? ಎಂಬುದು ಇಂದಿಗೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ.1952ರಿಂದ 1996ರ ನಡುವೆ ಇಬ್ಬರು ಕೇಂದ್ರ ಸಚಿವರಾಗಿ ಆಯ್ಕೆಗೊಳ್ಳುತ್ತಾರೆ. ಆದರೆ, ಈ ಇಬ್ಬರು ಜಿಲ್ಲೆಗೆ ನೀಡಿದ ಮಹತ್ತರ ಸೇವೆ ಏನು? ಈ ಜಿಲ್ಲೆ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಮಾಡಿದ ಕೆಲಸವೇನು? ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪ್ರಗತಿ ನೆಲೆಯಲ್ಲಿ ಇವರ ಕೊಡುಗೆ ಏನೆಂದು ನೋಡಿದರೆ ಈ ಇಬ್ಬರು ಸಚಿವರು ಯಾವುದೇ ಗಮನಾರ್ಹ ಕೊಡುಗೆ ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಕೇಂದ್ರ ಸಚಿವರಾದ ಆರ್ಥಿಕ ತಜ್ಞ:ಖ್ಯಾತ ಆರ್ಥಿಕ ತಜ್ಞ ಹಾಗೂ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದ ವಿ.ಕೆ.ಆರ್.ವಿ.ರಾವ್ (ವಿಜಯೇಂದ್ರ ಕಸ್ತೂರಿರಂಗ ವರದರಾಜ ರಾವ್) 1967ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. ಈ ಹಿಂದಿನ ಲೋಕಸಭಾ ಸದಸ್ಯರಾಗಿದ್ದ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟೇಕೂರು ಸುಬ್ರಮಣ್ಯಂ ರಾಜಕೀಯ ನಿವೃತ್ತಿ ಪಡೆದ ಬಳಿಕ ಬಳ್ಳಾರಿಯಿಂದ ಸ್ಪರ್ಧಿಸುವಂತೆ ವಿ.ಕೆ.ಆರ್.ವಿ.ರಾವ್ ಅವರಿಗೆ ಕಾಂಗ್ರೆಸ್ ಸೂಚಿಸುತ್ತದೆ.
1967, 1971ರಲ್ಲಿ ಸ್ವತಂತ್ರ ಪಕ್ಷದ ವೈ.ಮಹಾಬಲೇಶ್ವರಪ್ಪ ವಿರುದ್ಧ ಸ್ಪರ್ಧಿಸಿ ಭಾರೀ ಅಂತರದ ಗೆಲುವು ದಾಖಲಿಸುವ ವಿ.ಕೆ.ಆರ್.ವಿ.ರಾವ್ 1967-69ರಲ್ಲಿ ಕೇಂದ್ರದ ಸಾರಿಗೆ ಮತ್ತು ಸಾಗಣೆ ಇಲಾಖೆಯ ಕ್ಯಾಬಿನೆಟ್ ಸಚಿವರಾಗಿದ್ದರು. ಆದರೆ, ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯ ಕೈಗೊಳ್ಳಲಿಲ್ಲ. ಅಂದಿನ ಪ್ರಧಾನಿ ಜವಾಹರಲಾಲ್ ನೆಹರುಗೆ ನಿಕಟವರ್ತಿಯಾಗಿದ್ದ ರಾವ್ ಪ್ರಭಾವ ಬಳಸಿ ತಾವೇ ಪ್ರತಿನಿಧಿಸಿದ ಕ್ಷೇತ್ರದ ಪ್ರಗತಿಗೆ ಶ್ರಮಿಸಲಿಲ್ಲ ಎಂಬ ಆರೋಪಗಳಿವೆ.ಹ್ಯಾಟ್ರಿಕ್ ಬಸವರಾಜೇಶ್ವರಿ:
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿದ ಬಸವರಾಜೇಶ್ವರಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಸಚಿವ ಸಂಪುಟದಲ್ಲಿ ಮಹಿಳಾ-ಮಕ್ಕಳ ಕಲ್ಯಾಣ ಸಚಿವರಾಗಿದ್ದರು. 1984ರಲ್ಲಿ ಮೊದಲ ಬಾರಿಗೆ ಸಂಸತ್ ಚುನಾವಣೆ ಎದುರಿಸಿದ ಬಸವರಾಜೇಶ್ವರಿ ಜನತಾಪಾರ್ಟಿಯ ಅಭ್ಯರ್ಥಿ ಎಂ.ಪಿ.ಪ್ರಕಾಶ್ ವಿರುದ್ಧ 72,286 ಮತಗಳ ಅಂತರದಲ್ಲಿ ಗೆಲುವು ಪಡೆಯುತ್ತಾರೆ.1989ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿ ಎನ್.ತಿಪ್ಪಣ್ಣ ವಿರುದ್ಧ 76,085 ಮತಗಳ ಅಂತರದ ಜಯ ಗಳಿಸುವ ಬಸವರಾಜೇಶ್ವರಿ 1991ರಲ್ಲಿ ಜನತಾದಳದ ಅಭ್ಯರ್ಥಿ ವೈ.ನೆಟ್ಟಕಲ್ಲಪ್ಪ ವಿರುದ್ಧ 65,981 ಮತಗಳ ಅಂತರದ ಗೆಲುವು ಪಡೆಯುತ್ತಾರೆ. ಹ್ಯಾಟ್ರಿಕ್ ಗೆಲುವಿನ ಜಯ ಸಾಧಿಸಿ ಕೇಂದ್ರದ ಮಂತ್ರಿಯೂ ಆಗುತ್ತಾರೆ.
ಆದರೆ, ಜಿಲ್ಲೆ ನೆನಪಿಡುವಂತಹ ಯಾವುದೇ ಮಹತ್ವ ಯೋಜನೆಯನ್ನು ಜಾರಿಗೊಳಿಸುವುದಿಲ್ಲ. ಇದರಿಂದ ಬಳ್ಳಾರಿ ಕ್ಷೇತ್ರದಿಂದ ಇಬ್ಬರು ಮಂತ್ರಿಯಾದರೂ ಜಿಲ್ಲೆಗೆ ಯಾವುದೇ ಕೊಡುಗೆ ನೀಡಲಿಲ್ಲ ಎಂಬ ಬೇಸರ ಜಿಲ್ಲೆಯ ಮತದಾರರದ್ದಾಗಿದೆ.ಸಂಸತ್ ಸದಸ್ಯರ ಕೊಡುಗೆಯೂ ಅಷ್ಟಕ್ಕಷ್ಟೇ:
ಜಿಲ್ಲೆ ಪ್ರತಿನಿಧಿಸಿ ಸಂಸತ್ ಪ್ರವೇಶಿಸಿದ ಈವರೆಗಿನ ಸದಸ್ಯರು ಕೂಡ ಯಾವುದೇ ಪ್ರಮುಖ ಯೋಜನೆ ತಂದು ಗಮನ ಸೆಳೆಯಲಿಲ್ಲ.1999ರಲ್ಲಿ ಬಳ್ಳಾರಿಯಿಂದ ಗೆದ್ದ ಸೋನಿಯಾಗಾಂಧಿ ಬಳ್ಳಾರಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು ಬಿಟ್ಟರೆ, ಉಳಿದಂತೆ ಈ ಜಿಲ್ಲೆಯನ್ನು ಪ್ರತಿನಿಧಿಸಿದವರು ಸಂಸದರ ಅನುದಾನ ಬಳಕೆ ಮಾಡಿರುವುದು ಬಿಟ್ಟರೆ ಯಾವುದೇ ಮಹತ್ವದ ಕೆಲಸ ಮಾಡಲಿಲ್ಲ ಎಂಬ ಆರೋಪಗಳಿವೆ.