ಒಂದೇ ಮರಕ್ಕೆ ನೇಪಾಳದ ಇಬ್ಬರುಪ್ರಾಣ ಸ್ನೇಹಿತೆಯರು ನೇಣಿಗೆ ಶರಣು

KannadaprabhaNewsNetwork |  
Published : Aug 07, 2026, 02:00 AM IST
ಆತ್ಮಹತ್ಯೆ  | Kannada Prabha

ಸಾರಾಂಶ

ತಮ್ಮ ‘ಆಪ್ತ’ ಗೆಳತನವನ್ನು ಆಕ್ಷೇಪಿಸಿ ಪೋಷಕರು ಬೇರ್ಪಡಿಸಲು ಯತ್ನಿಸಿದ್ದಾರೆ ಎಂದು ನೊಂದು ಮರಕ್ಕೆ ಒಂದೇ ದುಪ್ಪಟ್ಟದಲ್ಲಿ ಒಟ್ಟಿಗೆ ನೇಣು ಬಿಗಿದುಕೊಂಡು ನೇಪಾಳ ದೇಶದ ಇಬ್ಬರು ಯುವತಿಯರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ‘ಆಪ್ತ’ ಗೆಳತನವನ್ನು ಆಕ್ಷೇಪಿಸಿ ಪೋಷಕರು ಬೇರ್ಪಡಿಸಲು ಯತ್ನಿಸಿದ್ದಾರೆ ಎಂದು ನೊಂದು ಮರಕ್ಕೆ ಒಂದೇ ದುಪ್ಪಟ್ಟದಲ್ಲಿ ಒಟ್ಟಿಗೆ ನೇಣು ಬಿಗಿದುಕೊಂಡು ನೇಪಾಳ ದೇಶದ ಇಬ್ಬರು ಯುವತಿಯರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ನೇಪಾಳ ಮೂಲದ ಶಿರ್ಜಾದ ಸಾಹು (22) ಹಾಗೂ ರೀಟಾ (23) ಮೃತ ಯುವತಿಯರು. ಶಿವನಹಳ್ಳಿ ಸಮೀಪದ ಆಟದ ಮೈದಾನದಲ್ಲಿ ಮರಕ್ಕೆ ನಸುಕಿನಲ್ಲಿ ಗೆಳೆತಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಮೈದಾನದ ಬಳಿಗೆ ವಾಯು ವಿಹಾರಕ್ಕೆ ಬಂದಾಗ ಮರದಲ್ಲಿ ನೇತಾಡುತ್ತಿದ್ದ ಅಪರಿಚಿತ ಮೃತದೇಹಗಳನ್ನು ಕಂಡು ಸ್ಥಳೀಯರು ಭೀತಿಗೊಂಡಿದ್ದಾರೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ತಿಂಗಳ ಹಿಂದಷ್ಟೇ ಬಂದಿದ್ರು

ಜಕ್ಕೂರಿನಲ್ಲಿ ರೀಟಾ ಹಾಗೂ ಆರ್‌.ಟಿ.ನಗರದ ಚೋಳನಾಯಕನಹಳ್ಳಿ ಬಳಿ ಶಿರ್ಜಾದ ಸಾಹು ನೆಲೆಸಿದ್ದರು. ಖಾಸಗಿ ಕಂಪನಿಯ ಸ್ವಚ್ಛತಾ ವಿಭಾಗದಲ್ಲಿ ಅವರು ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳಿಂದ ಈ ಇಬ್ಬರು ಆತ್ಮೀಯ ಒಡನಾಡಿಗಳಾಗಿದ್ದರು. ಈ ‘ಗೆಳತನ’ಕ್ಕೆ ಅವರ ಸಂಬಂಧಿಕರು ಹಾಗೂ ಸ್ನೇಹಿತರು ಕುಹುಕವಾಡುತ್ತಿದ್ದರು. ಈ ಮಾತುಗಳಿಂದ ಅವರಿಗೆ ಬೇಸರವಾಗಿತ್ತು. ಅಲ್ಲದೆ ಕೊನೆಗೆ ಇಬ್ಬರನ್ನು ಪ್ರತ್ಯೇಕವಾಗಿಸಲು ಗೆಳೆಯತಿಯರು ಹಾಗೂ ಹೆತ್ತವರು ಯತ್ನಿಸಿದ್ದರು. ತಮ್ಮ ಸ್ನೇಹ ಕಡಿದುಕೊಳ್ಳುವಂತೆ ಈ ಗೆಳೆತಿಯರಿಗೆ ಪೋಷಕರು ತಾಕೀತು ಸಹ ಮಾಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಬೆಳವಣಿಗೆಯಿಂದ ಬೇಸರಗೊಂಡ ಗೆಳೆತಿಯರು, ತಿಂಗಳ ಹಿಂದಷ್ಟೇ ನೇಪಾಳದಿಂದ ನಗರಕ್ಕೆ ಬಂದು ನೆಲೆಸಿದ್ದರು. ನಂತರ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಇಬ್ಬರು ಜೀವನ ಸಾಗಿಸುತ್ತಿದ್ದರು. ಹೀಗಿದ್ದರೂ ಅವರ ಸ್ನೇಹ ಸಂಬಂಧ ವಿಚಾರವಾಗಿ ಬಂಧುಗಳ ನಿರಂತರ ಹೀಯಾಳಿಕೆಯ ನುಡಿಗಳಿಂದ ಬೇಸರವಾಗಿತ್ತು. ತಮ್ಮನ್ನು ಪೋಷಕರು ದೂರ ಮಾಡುತ್ತಾರೆ ಎಂದು ಆತಂಕದ ನೋವಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ರೀಟಾ ಹಾಗೂ ಶಿರ್ಜಾದ ನಿರ್ಧರಿಸಿದ್ದಾರೆ. ಅಂತೆಯೇ ಶಿವನಹಳ್ಳಿ ಸಮೀಪದ ಆಟದ ಮೈದಾನಕ್ಕೆ ತೆರಳಿ ಮರಕ್ಕೆ ಒಂದೇ ದುಪ್ಪಟ್ಟದಿಂದ ನೇಣು ಬಿಗಿದುಕೊಂಡು ಒಟ್ಟಿಗೆ ಪ್ರಾಣತ್ಯಾಗ ಮಾಡಿದ್ದಾರೆ. ಈ ಮೂಲಕ ಜೀವನದಲ್ಲಿ ಒಟ್ಟಿಗೆ ಪಯಣಿಸುತ್ತಿದ್ದ ಗೆಳೆಯರು ಅಂತ್ಯದಲ್ಲಿ ಕೂಡ ಸಹ ಪಯಣಿಗರಾಗಿದ್ದಾರೆ.

ಈ ಆತ್ಮಹತ್ಯೆ ವಿಚಾರ ತಿಳಿದು ಠಾಣೆಗೆ ಮೃತರ ಸಂಬಂಧಿಕರು ತೆರಳಿದ್ದಾರೆ. ಆಗ ಮೃತರ ಸ್ನೇಹದ ವಿಚಾರವಾಗಿ ತಮಗೆ ಇದ್ದ ಅನುಮಾನವೇ ಸಾವಿಗೆ ಕಾರಣವಾಗಿದೆ ಎಂದು ಹೇಳಿ ಮೃತರ ಸೋದರರು ದುಃಖಿಸಿದ್ದಾರೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಯಿಯ ಹಾಲೇ ಮಗುವಿನ ಮೊದಲ ನೈಸರ್ಗಿಕ ಲಸಿಕೆ: ಕೆ.ಆರ್.ನಂದಿನಿ
ವಿದ್ಯಾರ್ಥಿಗಳಲ್ಲಿ ಶಿಸ್ತು ಇದ್ದರೆ ಭವಿಷ್ಯ ಉಜ್ವಲ: ಎಚ್.ಎಂ.ಆನಂದ್ ಕುಮಾರ್