ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗಡಿಜಿಲ್ಲೆ ಚಾಮರಾಜನಗರದಲ್ಲಿ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಾಗಿದ್ದು, ರೈತರು ಜಮೀನಿಗೆ ತೆರಳಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದ ಜಮೀನಿನಲ್ಲಿ ಹುಲಿ ದಾಳಿಗೆ ರೈತ ಬಸವಣ್ಣ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆ ನಡೆಸಿದರಾದರೂ ವ್ಯಾಘ್ರನ ಪತ್ತೆ ಮಾತ್ರ ಆಗಿಲ್ಲ. ಡ್ರೋಣ್ ಹಾಗೂ ಥರ್ಮಲ್ ಡ್ರೋಣ್, ಶ್ವಾನದಳದ ಮೂಲಕ ಕಾರ್ಯಾಚರಣೆ ನಡೆಸಿದರೂ ಇದುವರೆಗೂ ಹುಲಿ ಸುಳಿವು ಸಿಕ್ಕಿಲ್ಲ. ಈ ನಡುವೆ ಚಾಮರಾಜನಗರ ತಾಲೂಕಿನ ಮರಿಯಾಲದಲ್ಲಿ ಚಿರತೆ ದಾಳಿಗೆ ಮೂರು ಹಸುಗಳು ಬಲಿಯಾಗಿದ್ದು ರೈತರು ತೀವ್ರ ಆತಂಕ ಹೊರಹಾಕಿದ್ದಾರೆ.
ಮರಿಯಾಲ ಗ್ರಾಮದಲ್ಲಿ ಚಿರತೆ ದಾಳಿ: ಎರಡು ಹಸು, ಒಂದು ಕರು ಬಲಿಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಎರಡು ಹಸು ಹಾಗೂ ಒಂದು ಕರುವನ್ನು ಬಲಿ ಪಡೆದಿರುವ ಘಟನೆ ಬುಧವಾರ ನಡೆದಿದೆ.
ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು, ಪದೇಪದೇ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಜಾನುವಾರುಗಳನ್ನು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡುವಂತೆಯೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ನಿತ್ಯ ಒಂದಲ್ಲ ಒಂದು ಕಡೆ ವನ್ಯಜೀವಿಗಳ ಉಪಟಳ ಕಂಡು ಬರುತ್ತಿದ್ದು, ರೈತರಂತೂ ರೋಸಿಹೋಗಿದ್ದಾರೆ. ಒಂದೆಡೆ ಆನೆ ಲಗ್ಗೆ ಇಟ್ಟರೆ ಮತ್ತೊಂದೆಡೆ ಹುಲಿ- ಚಿರತೆಗಳು ದಾಳಿ ನಡೆಸುತ್ತಿವೆ. ಸರ್ಕಾರಗಳು ಕಾಡುಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ. ವನ್ಯಜೀವಿಗಳ ರಕ್ಷಣೆ ಜೊತೆಗೆ ರೈತರಿಗೂ ನಿರಾಂತಕದ ವಾತಾವರಣ ನಿರ್ಮಿಸಬೇಕಿದೆ.