ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಪೂರಕ ಅನುದಾನಗಳ ಬೇಡಿಕೆ ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಎಲ್ಲ ರಾಜ್ಯಗಳಿಗೆ ಉತ್ತಮ ಸಹಕಾರ ನೀಡಿದೆ. ಯುಪಿಎ ಸರ್ಕಾರ ಇದ್ದಾಗ, ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಶೇ 30.5 ನಿಂದ ಶೇ.32 ರವರೆಗೆ ಏರಿಕೆಯಾಗಿತ್ತು. ಎನ್‌ಡಿಎ ಅವಧಿಯಲ್ಲಿ ಇದು ಶೇ.40 ರವರೆಗೆ ಏರಿಕೆಯಾಗಿದೆ. 2004ರಿಂದ 2014ರವರೆಗಿನ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ ₹81,795 ಕೋಟಿ ತೆರಿಗೆ ಹಂಚಿಕೆಯಾಗಿದೆ. 2014ರಿಂದ 2024 ರವರೆಗೆ ಎನ್‌ಡಿಎ ಅವಧಿಯಲ್ಲಿ ₹2.77 ಲಕ್ಷ ಕೋಟಿ ತೆರಿಗೆ ಹಂಚಿಕೆಯಾಗಿದೆ. ಅಂದರೆ ತೆರಿಗೆ ಹಂಚಿಕೆ ಪ್ರಮಾಣದಲ್ಲಿ ಶೇ 239 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದರು.2004ರಿಂದ 2014 ರವರೆಗೆ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ ₹60,779 ಕೋಟಿ ಅನುದಾನ ದೊರೆತಿದೆ. 2014-2024 ರ ಎನ್‌ಡಿಎ ಅವಧಿಯಲ್ಲಿ ₹2.08 ಲಕ್ಷ ಕೋಟಿ ಅನುದಾನ ಸಿಕ್ಕಿದೆ. ಅಂದರೆ ಅನುದಾನ ಶೇ.243 ರಷ್ಟು ಏರಿಕೆ ಕಂಡಿದೆ. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಈ ನೀತಿಯನ್ನು ರದ್ದುಪಡಿಸಿದೆ. ಸರ್ಕಾರ ಹೊಸ ರಾಜ್ಯ ಶಿಕ್ಷಣ ನೀತಿ ತರಲಿದೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಈವರೆಗೂ ಅಂತಹ ಯಾವುದೇ ನೀತಿ ಬಂದಿಲ್ಲ ಎಂದರು.
ಯುಪಿಎ ಅವಧಿಯಲ್ಲಿ ರೈತರಿಗೆ ಬಜೆಟ್‌ನಲ್ಲಿ ₹22,000 ಕೋಟಿ ನೀಡುತ್ತಿದ್ದರೆ, ಮೋದಿ ಸರ್ಕಾರ ಆ ಮೊತ್ತವನ್ನು 2023-24ರಲ್ಲಿ ₹1,22,000 ಕೋಟಿಗೆ ಹೆಚ್ಚಿಸಿದೆ. 2013-2014ರಲ್ಲಿ ರಸಗೊಬ್ಬರ ಸಹಾಯ ಧನ ₹73,000 ಕೋಟಿಯಾಗಿತ್ತು. ಅದನ್ನು 2023-24 ರಲ್ಲಿ ಮೋದಿ ಸರ್ಕಾರ ₹2.55 ಲಕ್ಷ ಕೋಟಿಗೆ ಏರಿಸಿದೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಯೋಜನೆಗಳ ಜಾರಿ ಮೂಲಕ ಸುಧಾರಣೆ ಸಾಧ್ಯವಾಗುತ್ತದೆ. ಎನ್‌ಡಿಎ ಅವಧಿಯಲ್ಲಿ ಕೃಷಿ ಬೆಳವಣಿಗೆ ದರ ಶೇ.3.4ಕ್ಕೆ ಏರಿದೆ. 9,000 ಕೃಷಿ ಸಂಘ ಆರಂಭಿಸಲಾಗಿದೆ. ಈ ಕ್ರಮಗಳು ರೈತ ಸಮುದಾಯವನ್ನು ಸಬಲೀಕರಣಗೊಳಿಸಿದೆ ಎಂದು ಹೇಳಿದರು.
ಬಜೆಟ್ ಅವಧಿಯನ್ನು 2017-18 ರಿಂದ ಫೆಬ್ರವರಿ ಮೊದಲ ದಿನಕ್ಕೆ ಬದಲಾಯಿಸಿರುವುದರಿಂದ ರಾಜ್ಯಗಳು ಇದಕ್ಕೆ ಪೂರಕವಾಗಿ ಬಜೆಟ್ ರೂಪಿಸಬಹುದು. ಈ ಸುಧಾರಣೆಯಿಂದಾಗಿ ಯೋಜನೆಗಳಿಗೆ ಅನುದಾನ ನಿಗದಿ, ಕೇಂದ್ರ ಸರ್ಕಾರಿ ಯೋಜನೆ ಜಾರಿ, ಅಗತ್ಯತೆಗಳ ಗುರುತಿಸುವಿಕೆ, ಮೊದಲಾದ ಸಂಗತಿಯಲ್ಲಿ ರಾಜ್ಯ ಸರ್ಕಾರಗಳು ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದರು.
ಕೈಗಾರಿಕಾ ವಿವಾದ, ದೂರು ವಿಲೇವಾರಿಗೆ ಸ್ಥಾಪಿಸಿದ ಸಮಾಧಾನ್ ಪೋರ್ಟಲ್ ರಾಜ್ಯ, ಪ್ರಾದೇಶಿಕ ಮಟ್ಟದ ವ್ಯವಸ್ಥೆಗಳೊಂದಿಗೆ ಸಮನ್ವಯಗೊಳಿಸಿ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಾಧಾನ್ ಪೋರ್ಟಲ್ ಸೇವೆ ಸಿಗುವಂತೆ ಮಾಡುವ ಕುರಿತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನಸುಖ್ ಮಾಂಡವೀಯಗೆ ಸಂಸದ ಡಾ.ಕೆ.ಸುಧಾಕರ್ ಪ್ರಶ್ನೆ ಕೇಳಿದರು.
ಕೇಂದ್ರ ಸಚಿವ ಮನಸುಖ್ ಮಾಂಡವೀಯ ಪ್ರತಿಕ್ರಿಯಿಸಿ, ಅಸಂಘಟಿತ ವಲಯದ 30 ಕೋಟಿಗೂ ಅಧಿಕ ಕಾರ್ಮಿಕರು ಇ-ಶ್ರಮ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಅವರು ಕೂಡ ಸಮಾಧಾನ್ ಪೋರ್ಟಲ್‌ನಲ್ಲಿ ಅಹವಾಲು ಸಲ್ಲಿಸಬಹುದು ಎಂದು ಉತ್ತರಿಸಿದರು.