ಕನ್ನಡಪ್ರಭ ವಾರ್ತೆ ಬೆಂಗಳೂರು
ಹೈಕೋರ್ಟ್ ಸೂಚನೆ ಮೇರೆಗೆ ಪಥಸಂಚಲನಕ್ಕೆ ಅನುಮತಿ ನೀಡುವ ಬಗ್ಗೆ ಉಂಟಾಗಿರುವ ವಿವಾದ ಪರಿಹರಿಸಲು ರಾಜ್ಯ ಅಡ್ವೋಕೆಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರ ನೇತೃತ್ವದಲ್ಲಿ ಬುಧವಾರ ಸಂಜೆ ಶಾಂತಿ ಸಭೆ ನಡೆಯಿತು.
ವಿವಾದ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರೂ ಆಗಿರುವ ಆರ್‌ಎಸ್‌ಎಸ್ ಕಲಬುರಗಿ ಜಿಲ್ಲಾ ಸಮನ್ವಯಕಾರ ಅಶೋಕ್ ಪಾಟೀಲ್, ಹಿರಿಯ ವಕೀಲ ಎಸ್.ಅರುಣ್ ಶ್ಯಾಮ್ ಸಮ್ಮುಖದಲ್ಲಿ ಎಜಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಯಿತು. ಪ್ರಸ್ತಾವನೆಯೊಂದಿಗೆ ಪಥಸಂಚಲನ ನಡೆಸುವ ಮಾರ್ಗ, ಸ್ವಯಂ ಸೇವಕರು ನಡೆಸಲಿರುವ ಸಭೆ, ವಾಹನಗಳ ನಿಲುಗಡೆಗೆ ಗುರುತಿಸಿರುವ ಜಾಗದ ಫೋಟೋಗಳನ್ನು ಸಹ ಸಲ್ಲಿಸಲಾಗಿದೆ.ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯಿಸಿ, ಪ್ರಸ್ತಾವನೆ ಕುರಿತು ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಬೇಕಿದೆ. ನಿರ್ಧಾರ ಕೈಗೊಂಡು ನ.7ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ನ.13 ಅಥವಾ 16ರಂದು ಪಥಸಂಚಲನ ನಡೆಸಲು ಉದ್ದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಪಥಸಂಚಲನದಲ್ಲಿ ಚಿತ್ತಾಪುರ ತಾಲೂಕು ಆರ್‌ಎಸ್‌ಎಸ್ ಸ್ವಯಂ ಸೇವಕರು ಮಾತ್ರ ಭಾಗವಹಿಸುತ್ತಾರೆ. ನೆರೆಯ ತಾಲೂಕಿನವರು ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ಪಥಸಂಚಲನದಲ್ಲಿ 600ರಿಂದ 850 ಸ್ವಯಂ ಸೇವಕರು ಮಾತ್ರ ಗಣವೇಷದಲ್ಲಿ ಭಾಗವಹಿಸುತ್ತಾರೆ. ಸಾಮಾನ್ಯವಾಗಿ ನಡೆಸುವ ನಾಲ್ಕು ಸಾಲಿನ ಬದಲು ಮೂರು ಸಾಲಿನಲ್ಲೇ ಮೂರು ಕಿ.ಮೀ. ಪಥಸಂಚಲನ ನಡೆಸಲಾಗುತ್ತದೆ. ಪಥ ಸಂಚಲ ಸುಮಾರು 37ರಿಂದ 45 ನಿಮಿಷದೊಳಗೆ ಪೂರ್ಣಗೊಳ್ಳಲಿದೆ. ಈ ವೇಳೆ ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರಿಗೆ ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಪಥಸಂಚಲನಕ್ಕೆ ಪರವಾನಗಿ ನೀಡಲು ಜಿಲ್ಲಾಡಳಿತ ವಿಧಿಸುವ ಎಲ್ಲ ಷರತ್ತುಗಳನ್ನು ಪಾಲಿಸಲಾಗುವುದು. ಸ್ವಯಂಸೇವಕರ ವಾಹನಗಳನ್ನು ಬಜಾಜ್ ಕಲ್ಯಾಣ ಮಂಟಪ ಆವರಣದಲ್ಲಿ ನಿಲ್ಲಿಸಲು ಅಗತ್ಯ ಸಿದ್ಧತೆ ಮಾಡಲಾಗಿದೆ. ಪಥಸಂಚಲನದ ಕೊನೆಯಲ್ಲಿ ಬಜಾಜ್ ಕಲ್ಯಾಣ ಮಂಟಪದೊಳಗೆ ಸ್ವಯಂಸೇವಕರ ಸಭೆ ನಡೆಸಲಿದ್ದು, ಅದಕ್ಕಾಗಿ ಈಗಾಗಲೇ ಅಗತ್ಯ ಅನುಮತಿ ಪಡೆಯಲಾಗಿದೆ ಎಂದು ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹೈಕೋರ್ಟ್ ಸೂಚನೆಯಂತೆ ಅಡ್ವೋಕೆಟ್ ಜನರಲ್ ನಡೆಸಿದ ಶಾಂತಿ ಸಭೆಯಲ್ಲಿ ಭಾಗವಹಿಸಿ, ನ.13 ಅಥವಾ 16ರಂದು ಪಥಸಂಚಲನ ನಡೆಸಲು ಉದ್ದೇಶಿಸಿದ್ದು, ಅನುಮತಿ ನೀಡಲು ಕೋರಲಾಗಿದೆ. ಎಜಿ ಅವರ ನೇತೃತ್ವದಲ್ಲಿ ಸಭೆಯು ಶಾಂತಿಯುತವಾಗಿ ನಡೆಯಿತು. ನಮ್ಮ ಪ್ರಸ್ತಾವನೆಗೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗುವ ವಿಶ್ವಾಸವಿದೆ.