ಧಾರವಾಡ: ಹು-ಧಾ ಮಹಾನಗರ ಪಾಲಿಕೆಯು 70ನೇ ಕನ್ನಡ ರಾಜ್ಯೋತ್ಸವ ದಿನವನ್ನು ಅದ್ಧೂರಿಯಿಂದ ಆಚರಿಸುತ್ತಿದ್ದು, ಎರಡು ದಿನಗಳ ಕಾಲ ಅವಳಿ ನಗರದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಮೇಯರ್ ಜ್ಯೋತಿ ಪಾಟೀಲ ಮಾಹಿತಿ ನೀಡಿದರು.
70 ಸಾಧಕರಿಗೆ ಧೀಮಂತ ಪ್ರಶಸ್ತಿ
ನ. 1ರಂದು ಬೆಳಗ್ಗೆ 9ಕ್ಕೆ ಹುಬ್ಬಳ್ಳಿಯ ಸದ್ಗುರು ಸಿದ್ದಾರೂಢ ಸ್ವಾಮಿ ಮಠದಿಂದ ಸಮಾವೇಶಗೊಂಡು ತಾಯಿ ಭುವನೇಶ್ವರಿ ಮಾತೆಯ ಮೆರವಣಿಗೆಯು ಶುರುವಾಗಲಿದೆ. ಇಂಡಿಪಂಪ್ ಸರ್ಕಲ್, ಹಳೆ ಹುಬ್ಬಳ್ಳಿ ವೃತ್ತ, ನ್ಯೂ ಮ್ಯಾದಾರ ಓಣಿ, ಬಮ್ಮಾಪುರ ಓಮಿ, ಹಿರೇಪೇಟೆ, ಜವಳಿಸಾಲು, ಬೆಳಗಾವ್ ಗಲ್ಲಿ, ಪೆಂಡಾರಗಲ್ಲಿ, ದಾಜಿಬಾನಪೇಟ, ಸಂಗೊಳ್ಳಿ ರಾಯಣ್ಣ ವೃತ್ತ, ಚೆನ್ನಮ್ಮ ವೃತ್ತ ಮೂಲಕ ಇಂದಿರಾ ಗಾಜಿನ ಮನೆ ತಲುಪಲಿದೆ. ಮಧ್ಯಾಹ್ನ 3ಕ್ಕೆ ಅಲ್ಲಿಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 70 ಸಾಧಕರಿಗೆ ಧೀಮಂತ ಸನ್ಮಾನ ನಡೆಯಲಿದೆ. ಈ ಬಾರಿ ವಿವಿಧ ಕ್ಷೇತ್ರದಲ್ಲಿ ಸಾಧಿಸಿದ ಮಕ್ಕಳಿಗೂ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು.ಎರಡು ದಿನಗಳ ರಾಜ್ಯೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸರ್ವ ಪಕ್ಷ ಸಭೆ ಕರೆದು ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಲಾಗಿದೆ. ಜೊತೆಗೆ ಸರ್ಕಾರಿ ಕಟ್ಟಡ ಸೇರಿ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವುದು, ತಗ್ಗು-ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪ ಮೇಯರ ಸಂತೋಷ ಚವ್ಹಾಣ, ಸಭಾನಾಯಕ ಈರೇಶಅಂಚಟಗೇರಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಬೀರಪ್ಪ ಖಂಡೇಕರ,
ಶಂಕರ ಶೇಳಕೆ, ಶಂಭುಗೌಡ ಸಾಲಮನಿ, ಸಹಾಯಕ ಆಯುಕ್ತರಾದ ನಾಗರಾಜ ಜಮಖಂಡಿ ಇದ್ದರು.