ಧಾರವಾಡ: ಸರ್ಕಾರಿ ಶಾಲೆಯೊಂದರಿಂದ ಹಾಡ ಹಗಲೇ ಎಂಟು ವರ್ಷದ ಇಬ್ಬರು ಮಕ್ಕಳನ್ನು ಅನಾಮಿಕನೊಬ್ಬ ಅಪಹರಣ ಮಾಡಿಕೊಂಡು ಬೈಕ್ ಮೇಲೆ ಕರೆದೊಯ್ದ ಆತಂಕಕಾರಿ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.
ಮಧ್ಯಾಹ್ನದ ನಂತರ ನಡೆದ ತರಗತಿಯಲ್ಲಿ ಈ ಇಬ್ಬರು ಮಕ್ಕಳು ಕಾಣದಿರುವ ಹಿನ್ನೆಲೆಯಲ್ಲಿ ಆತಂಕಗೊಂಡು ಶಿಕ್ಷಕರು ಪಾಲಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಮಕ್ಕಳು ಶಾಲೆಯಲ್ಲಿಲ್ಲ ಎಂಬ ಮಾಹಿತಿ ಅರಿತು ಆತಂಕದಲ್ಲಿ ಶಾಲೆಗೆ ಬಂದ ಪಾಲಕರಿಗೆ ಅಚ್ಚರಿ ಕಾದಿದ್ದು, ಸಿಸಿ ಟಿವಿಯಲ್ಲಿ ಮಕ್ಕಳನ್ನು ಕರೆದೊಯ್ದ ದೃಶ್ಯಗಳು ಸಿಕ್ಕಿವೆ. ಘಟನೆ ತಿಳಿದು ಹತ್ತಾರು ಮಕ್ಕಳ ಪಾಲಕರು ಶಾಲೆಯ ಬಳಿ ಜಮಾಯಿಸಿ ಮಕ್ಕಳ ಅಪಹರಣ ಬಗ್ಗೆ ಕಳವಳ ಸಹ ವ್ಯಕ್ತಪಡಿಸಿದರು.
ಅಪಘಾತದಿಂದ ಗೊತ್ತಾದ ಮಾಹಿತಿಶಾಲೆಯ ಮುಖ್ಯೋಪಾಧ್ಯಾಯರು ಕೂಡಲೇ ಉಪ ನಗರ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಶಾಲೆಗೆ ಬಂದು ಪರಿಶೀಲನೆ ನಡೆಸಿದರು. ಈ ಬಗ್ಗೆ ಸಿಸಿ ಟಿವಿ ಪರಿಶೀಲಿಸಿ ಇನ್ನೇನು ಕಾರ್ಯಾಚರಣೆ ನಡೆಸಬೇಕು ಎನ್ನುವಷ್ಟರಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಬಳಿ ಅಪಹರಣಕಾರನ ಬೈಕ್ ಅಪಘಾತದ ಸುದ್ದಿ ಬಂದಿದೆ.
ಬೈಕ್ ಮೇಲೆ ಓರ್ವ ವ್ಯಕ್ತಿ ಹಾಗೂ ಇಬ್ಬರು ಮಕ್ಕಳು ಇರುವ ಮಾಹಿತಿ ಉಪ ನಗರ ಪೊಲೀಸರಿಗೆ ಲಭ್ಯವಾಗಿದೆ. ಇದೇ ವೇಳೆ ದಾಂಡೇಲಿ ಪೊಲೀಸರು ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತ ಧಾರವಾಡ ನಗರದ ಅಬ್ದುಲ್ ಕರೀಂ ಮೇಸ್ತ್ರಿ ಎಂದು ತಿಳಿದು ಬಂದಿದೆ. ಈ ಅಪಘಾತದಲ್ಲಿ ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು, ಮಕ್ಕಳು ಸುರಕ್ಷಿತವಾಗಿರುವ ಬಗ್ಗೆ ಪೋಷಕರಿಗೆ ತಿಳಿಸಿದ ಪೊಲೀಸರು ಮಗುವಿನ ಪೋಷಕರೊಂದಿಗೆ ಸೋಮವಾರ ರಾತ್ರಿ ಜೋಯಿಡಾಗೆ ತೆರಳಿದರು.ಅಪಹರಣಕ್ಕೆ ಕಾರಣ ಏನು?
ಉಪನಗರ ಠಾಣೆ ಪೊಲೀಸರು ಪೋಷಕರಿಂದ ದೂರು ಪಡೆದಿದ್ದು, ಯಾವ ಕಾರಣಕ್ಕೆ ಈ ಎರಡೂ ಮಕ್ಕಳನ್ನು ಅಪಹರಣ ಮಾಡಿದ್ದಾನೆ ಎಂಬುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಪಘಾತವೊಂದು ಎರಡೂ ಮಕ್ಕಳನ್ನು ಪತ್ತೆ ಹಚ್ಚಲು ಕಾರಣವಾಗಿದ್ದು ಮಾತ್ರ ವಿಚಿತ್ರ ಸಂಗತಿ.