ಪ್ರತ್ಯೇಕ ಘಟನೆಯಲ್ಲಿ ಇಬ್ಬರು ರೈತರ ಆತ್ಮಹತ್ಯೆ

KannadaprabhaNewsNetwork |  
Published : Aug 18, 2025, 12:00 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಸಾಲಬಾಧೆ ತಾಳಲಾರದೇ ರೈತರೊಬ್ಬರು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಹಾವೇರಿ: ಪ್ರತ್ಯೇಕ ಘಟನೆಗಳಲ್ಲಿ ಜಿಲ್ಲೆಯಲ್ಲಿ ಶನಿವಾರ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾಲಬಾಧೆ ತಾಳಲಾರದೇ ರೈತರೊಬ್ಬರು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.ರಮೇಶ ಮಹದೇವಪ್ಪ ವಾಳದ (65) ಮೃತಪಟ್ಟ ರೈತ.

ಇವರು ಒಂದು ಎಕರೆ ಜಮೀನು ಹೊಂದಿದ್ದು, ಮೂರ‍್ನಾಲ್ಕು ವರ್ಷದ ಹಿಂದೆ ಕೃಷಿ ಕೆಲಸಕ್ಕೆಂದು ಗ್ರಾಮದ ಕೆನರಾ ಬ್ಯಾಂಕಿನಲ್ಲಿ ₹1.35 ಲಕ್ಷ ಸಾಲ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಬೆಳೆ ಸರಿಯಾಗಿ ಬಾರದ ಹಿನ್ನೆಲೆ ಮಾಡಿದ ಸಾಲ ತೀರಿಸಲಾಗದೆ ನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವಿಸಿ ಒದ್ದಾಡುತ್ತಿದ್ದಾಗ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳ ಹೇಳಿವೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುರಳಿಕುಪ್ಪಿಯಲ್ಲಿ ರೈತ ಆತ್ಮಹತ್ಯೆ: ಇನ್ನೊಂದು ಘಟನೆಯಲ್ಲಿ ಸಾಲಬಾಧೆ ತಾಳದೇ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಶನಿವಾರ ನಡೆದಿದೆ.ದುರ್ಗಪ್ಪ ಬೀರಪ್ಪ ಸಿದ್ದಕ್ಕನವರ (42) ಮೃತಪಟ್ಟ ವ್ಯಕ್ತಿ.

ಇವರು ಕೃಷಿ ಕಾರ್ಯಕ್ಕಾಗಿ ಹುರಳಿಕುಪ್ಪಿ ಗ್ರಾಮದ ಕೆವಿಜಿ ಬ್ಯಾಂಕ್‌ನಲ್ಲಿ ₹2 ಲಕ್ಷ, ಸಹಕಾರಿ ಸಂಘಗಳಲ್ಲಿ ₹2 ಲಕ್ಷ, ಕೈಗಡ ಸಾಲವಾಗಿ ₹4 ಲಕ್ಷ ಒಟ್ಟು ₹8 ಲಕ್ಷ ಸಾಲ ಪಡೆದಿದ್ದರು. ಕಳೆದ 2 ವರ್ಷಗಳಿಂದ ಸಕಾಲಕ್ಕೆ ಮಳೆ ಬೆಳೆ ಬಾರದ್ದರಿಂದ ಚಿಂತೆಗೀಡಾಗಿ ಮನನೊಂದು ಶನಿವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಕೂಡಲೇ ಅವರಿಗೆ ಸವಣೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ ಎಂದು ಮೃತರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಸವಣೂರಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌