ಜಿಲ್ಲೆಯ ಇಬ್ಬರು ರಾಜ್ಯಕ್ಕೆ ಪ್ರಥಮ ರ್ಯಾಂಕ್

KannadaprabhaNewsNetwork | Published : May 2, 2025 11:47 PM

ಸಾರಾಂಶ

ಕಳೆದ ಮಾರ್ಚ್ 21 ರಿಂದ ಏಪ್ರಿಲ್ ವರೆಗೆ ನಡೆದ ಎಸ್.ಎಸ್.ಎಲ್ ಸಿ ಫಲಿತಾಂಶ ಹೊರ ಬಿದ್ದಿದ್ದು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಕಳೆದ ಮಾರ್ಚ್ 21 ರಿಂದ ಏಪ್ರಿಲ್ ವರೆಗೆ ನಡೆದ ಎಸ್.ಎಸ್.ಎಲ್ ಸಿ ಫಲಿತಾಂಶ ಹೊರ ಬಿದ್ದಿದ್ದು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.ತುಮಕೂರು ಶೈಕ್ಷಣಿಕ ಜಿಲ್ಲೆಯ ಸರ್ವೋದಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಚೇತನ ವಿದ್ಯಾಮಂದಿರ ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಅದೀಲ್ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಮಧುಗಿರಿ ಪಟ್ಟಣದ ಚಿರಕ್ ಶಾಲೆಯ ವಿದ್ಯಾರ್ಥಿನಿ ಯಶಸ್ವಿತ್ ರೆಡ್ಡಿ ಈ ಸಾಧನೆ ಮಾಡಿದ್ದಾರೆ.ತುಮಕೂರಿನ ಚೇತನ ವಿದ್ಯಾ ಮಂದಿರದ ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಅದೀಲ್ ಮಾತನಾಡಿ ಟಾಪರ್ ಬಂದಿರುವುದು ಖುಷಿ ತಂದಿದೆ. ಗಣಿತ, ವಿಜ್ಞಾನ ವಿಷಯಗಳು ನನಗೆ ತುಂಬಾ ಇಷ್ಟವಾದವು. ಆದರೆ ನನಗೆ ಸಮಾಜ ವಿಜ್ಞಾನ ಕಷ್ಟವಾಗುತ್ತಿತ್ತು. ಉಪನ್ಯಾಸಕರು ಕಥೆ ರೂಪದಲ್ಲಿ ಹೇಳಿಕೊಡುತ್ತಿದ್ದರು. ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ಇತರ ಚಟುವಟಿಕೆಯನ್ನು ಮಾಡುತ್ತಿದ್ದೆ. ಶಿಕ್ಷಕರು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಮೊದಲ ದಿನದಿಂದಲೂ ಪ್ರತಿ ದಿನ 2 ಗಂಟೆ ಓದಿದರೆ ಸಾಕು. ಅರ್ಥ ಮಾಡಿಕೊಂಡು ಓದಬೇಕು. ಮನೆಯಲ್ಲಿ ಓದಿಗೆ ಪ್ರೋತ್ಸಾಹ ನೀಡುತ್ತಿದ್ದರು. ನನಗೆ ವೈದ್ಯನಾಗಬೇಕೆಂಬ ಆಸೆಯಿದೆ ಎಂದು ತನ್ನ ಬಯಕೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ವಿ. ಸುಬ್ಬರಾವ್ ಮಾತನಾಡಿ, ಸರ್ವೋದಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಚೇತನ ವಿದ್ಯಾಮಂದಿರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಬಂದಿರುವುದು ತುಂಬಾ ಸಂತೋಷ ತಂದಿದೆ. ಇದುವರೆಗೂ 2 ಮತ್ತು 3ನೇ ಸ್ಥಾನ ಬರುತ್ತಿತ್ತು. ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ. ಇದಕ್ಕೆ ಕಾರಣಕರ್ತರಾದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಫಸ್ಟ್ ರ್ಯಾಂಕ್ ಜತೆಗೆ ಇನ್ನು 4 ರ್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಮಧುಗಿರಿ ಪಟ್ಟಣದ ಚಿರಕ್ ಶಾಲೆಯ ವಿದ್ಯಾರ್ಥಿನಿ ಯಶಸ್ವಿತ್ ರೆಡ್ಡಿ ಮಾತನಾಡಿ ಶಾಲೆಯ ಎಲ್ಲಾ ಶಿಕ್ಷಕರ ಪ್ರೋತ್ಸಾಹ ಹಾಗೂ ತಂದೆ ತಾಯಿಯ ಉತ್ತೇಜನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. ನಾನು ಯಾವುದೇ ಟ್ಯೂಷನ್ ಗೆ ಹೋಗುತ್ತಿರಲಿಲ್ಲ. ಆದರೆ ಶ್ರದ್ಧೆ ಇಟ್ಟು ಓದಿದೆ. ಹಾಗಾಗಿ ಈ ಫಲಿತಾಂಶ ಹೊರಬಂದಿದೆ ಎಂದರು ಮುಂದೆ ಡಾಕ್ಟರ್ ಅಥವಾ ಐಎಎಸ್ ಮಾಡಬೇಕೆಂಬ ಅಭಿಲಾಷೆಯನ್ನು ಹೊಂದಿರುವುದಾಗಿ ತಿಳಿಸಿದರು. ಇನ್ನು ಆಕೆ ಪೋಷಕರು ಕೃಷಿಕರಾಗಿದ್ದು ಮಕ್ಕಳ ಶಿಕ್ಷಣಕ್ಕಾಗಿ ಮಧುಗಿರಿಯಲ್ಲಿ ನೆಲೆಸಿದ್ದಾರೆ.

Share this article