ಕನ್ನಡಪ್ರಭ ವಾರ್ತೆ, ಮಂಡ್ಯ
ಸಣ್ಣ ಗುಂಡಿಗಳು ನಿರ್ಮಾಣ: ಮಂಡ್ಯ ಗ್ರಾಮಾಂತರ ಠಾಣೆಯಿಂದ ಎಡಭಾಗದ ರಸ್ತೆಯಲ್ಲಿ ಜಲ್ಲಿ ಬಿಚಾವಣೆ ಮಾಡಿದ್ದು, ಮಳೆಯಿಂದಾಗಿ ಸಣ್ಣ ಸಣ್ಣ ಹೊಂಡಗಳು ನಿರ್ಮಾಣವಾಗಿವೆ. ಈ ಹೊಂಡಗಳು ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿವೆ. ಗುಂಡಿಯೊಳಗೆ ವಾಹನಗಳನ್ನು ಇಳಿಸುತ್ತಾ. ಏಳಿಸುತ್ತಾ ಸರ್ಕಸ್ ಮಾಡಿಕೊಂಡು ಸಾಗುವಂತಾಗಿದೆ.ಭಾರೀ ವಾಹನಗಳು ಸಂಚರಿಸುವ ವೇಳೆ ಮೇಲೇಳುವ ಧೂಳು ದ್ವಿಚಕ್ರವಾಹನ ಸವಾರರಿಗೆ ಇನ್ನಷ್ಟು ನರಕ ಸೃಷ್ಟಿಸುತ್ತಿದೆ. ಸಣ್ಣ ಸಣ್ಣ ಕಲ್ಲುಗಳು ರಸ್ತೆ ತುಂಬೆಲ್ಲಾ ಹರಡಿಕೊಂಡಿವೆ. ದ್ವಿಚಕ್ರವಾಹನ ಸವಾರರು ಎಚ್ಚರ ತಪ್ಪಿ ಬ್ರೇಕ್ ಹಾಕಿದರೆ ಬಿದ್ದು ಅನಾಹುತ ಸಂಭವಿಸುವುದಂತೂ ಗ್ಯಾರಂಟಿ.ರಸ್ತೆಯಲ್ಲೇ ಜಲ್ಲಿ, ಮರಳು ದಾಸ್ತಾನು: ರಸ್ತೆ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರ ರಸ್ತೆಯಲ್ಲೇ ಜಲ್ಲಿ, ಮರಳು ದಾಸ್ತಾನು ಮಾಡುತ್ತಿದ್ದಾನೆ. ಸಾರ್ವಜನಿಕರು ಓಡಾಡುವ ರಸ್ತೆ ಎಂಬ ಭಯವಿಲ್ಲದೆ ಬೇರೆಡೆಗೆ ಸಾಗಿಸಬೇಕಾದ ಕಲ್ಲು, ಮರಳನ್ನು ಇಲ್ಲಿ ದಾಸ್ತಾನಿಟ್ಟುಕೊಂಡು ಕಳುಹಿಸುತ್ತಿದ್ದಾನೆ. ಅವ್ಯವಸ್ಥಿತ ರೀತಿಯಲ್ಲಿ ವಾಟರ್ ಟ್ಯಾಂಕರ್, ಜೆಸಿಬಿಗಳನ್ನು ನಿಲ್ಲಿಸುತ್ತಾ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದರೂ ಯಾರೊಬ್ಬರೂ ಗುತ್ತಿಗೆದಾರನನ್ನು ಕ್ಯಾರೆ ಎನ್ನದಿರುವುದು ವಿಪರ್ಯಾಸದ ಸಂಗತಿ.ಮುರಿದು ಬಿದ್ದಿರುವ ಬ್ಯಾರಿಕೇಡ್‌ಗಳು: ಕಾಮಗಾರಿ ವೇಳೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ಅಳವಡಿಸಿದ್ದ ಬ್ಯಾರಿಕೇಡ್‌ಗಳು ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ಬಿದ್ದಿವೆ. ಒಂದು ಬ್ಯಾರಿಕೇಡ್ ಮಕಾಡೆ ಮಲಗಿದ್ದರೆ ಇನ್ನೊಂದು ಬ್ಯಾರಿಕೇಡ್ ಬೀಳುವ ಸ್ಥಿತಿಯಲ್ಲಿ ನಿಂತುಕೊಂಡಿವೆ. 200 ಮೀಟರ್ ರಸ್ತೆ ನಿರ್ಮಾಣವೇ ಇಷ್ಟೊಂದು ವಿಳಂಬವಾದರೆ ಮಂಡ್ಯ ಬದಲಾಗುತ್ತಿದೆ ಎಂದು ಹೇಳಲು ಹೇಗೆ ಸಾಧ್ಯ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ನಮಗೆ ವಿಶ್ವದರ್ಜೆಯ ರಸ್ತೆ ಬೇಡ..!: ನಮಗೆ ವಿಶ್ವದರ್ಜೆಯ ರಸ್ತೆ ನಿರ್ಮಾಣವಾಗುವುದು ಬೇಡ. ಸಾಮಾನ್ಯ ಜನರು ನೆಮ್ಮದಿಯಿಂದ ಓಡಾಡುವಂತಹ ರಸ್ತೆಯೇ ಸಾಕು. ಅದನ್ನಾದರೂ ಬೇಗ ಮಾಡಿಕೊಡಿ ಎನ್ನುವುದು ಈ ಭಾಗದ ನಿವಾಸಿಗಳ ಆಗ್ರಹವಾಗಿದೆ. ಮಳೆಯನ್ನು ಮುಂದಿಟ್ಟುಕೊಂಡು ಕಾಮಗಾರಿಯನ್ನು ವಿಳಂಬ ಮಾಡುವುದು ಎಷ್ಟರಮಟ್ಟಿಗೆ ಸರಿ. 200 ಮೀಟರ್ ಉದ್ದದ ರಸ್ತೆಗೆ ಜಲ್ಲಿ ಬಿಚಾವಣೆ ಮಾಡಿದ ಬಳಿಕ ಅದನ್ನು ಸಮತಟ್ಟುಗೊಳಿಸಿ ಡಾಂಬರು ಹಾಕುವುದಕ್ಕೆ ಎಷ್ಟು ಕಾಲ ಬೇಕೆಂದು ತಿಳಿಯದಷ್ಟು ಜನರು ದಡ್ಡರೇನಲ್ಲ. ಜನರನ್ನು ಕಣ್ಣಿಗೆ ಮಂಕುಬೂದಿ ಎರಚುವ ಕೆಲಸ ನಗರಸಭೆ ಅಽಕಾರಿಗಳು, ಗುತ್ತಿಗೆದಾರರಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಧೈರ್ಯವಿಲ್ಲ..!: ನಿಗದಿತ ಸಮಯಕ್ಕೆ ಕಾಮಗಾರಿ ಪೂರೈಸದ, ಕಾಮಗಾರಿಯ ಬಗ್ಗೆ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಧೈರ್ಯ ನಗರಸಭೆ ಅಧಿಕಾರಿಗಳಿಂದ ಹಿಡಿದು ಜಿಲ್ಲಾಡಳಿತ, ಶಾಸಕರಿಗೂ ಇಲ್ಲ. ನೋಟೀಸ್ ಕೊಡುವುದಕ್ಕಷ್ಟೇ ಅವರ ಕೆಲಸ ಸೀಮಿತವಾಗಿದೆ. ಇಂತಹ ನೂರು ನೋಟೀಸ್ ನೀಡಿದರೂ ಗುತ್ತಿಗೆದಾರರು ಹೆದರುವುದಿಲ್ಲ. ನಗರಸಭೆಯಲ್ಲಿ ಹಣವಿದ್ದರೂ ಕಾಮಗಾರಿ ನಡೆಸುವುದಕ್ಕೆ ಹಿಂಜರಿಯುವ ಕೆಲವು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಅದು ಉಳಿದ ಗುತ್ತಿಗೆದಾರರಿಗೆ ಎಚ್ಚರಿಕೆ ಗಂಟೆಯಾಗಲಿದೆ. ಆದರೆ, ನಗರಸಭೆ, ಜಿಲ್ಲಾಡಳಿತದಿಂದ ಕಪ್ಪುಪಟ್ಟಿಗೆ ಸೇರಿಸುವ ಪ್ರಯತ್ನ ಮಾತ್ರ ನಡೆಯದಿರುವುದು ಗುತ್ತಿಗೆದಾರರ ಉದಾಸೀನ ಧೋರಣೆಗೆ ಕಾರಣವಾಗಿದೆ.ರಾಜಕೀಯ ಪ್ರಭಾವ ಬಳಸಿ ಕಾಮಗಾರಿಯ ಗುತ್ತಿಗೆ ಪಡೆದಿರುವವರು ತಮಗಿಷ್ಟ ಬಂದಂತೆ ಕಾಮಗಾರಿ ನಡೆಸುತ್ತಿದ್ದಾರೆ. ಅವರನ್ನು ಪ್ರಶ್ನೆ ಮಾಡವ ಧೈರ್ಯ, ಎದೆಗಾರಿಕೆ ಯಾರಿಗೂ ಇಲ್ಲದಿರುವುದೇ ಕಾಮಗಾರಿಗಳು ವಿಳಂಬವಾಗಿ, ಮನಸೋಇಚ್ಛೆಯಾಗಿ ನಡೆಯುವುದಕ್ಕೆ ಪ್ರಮುಖ ಕಾರಣವಾಗಿದೆ.ಅಡ್ಜಸ್ಟ್‌ಮೆಂಟ್ ರಾಜಕಾರಣ ಮೇಲುಗೈ: ರಸ್ತೆ, ಸೇತುವೆ, ಚರಂಡಿ ಸೇರಿದಂತೆ ಹಲವಾರು ಕಾಮಗಾರಿಗಳಲ್ಲಿ ಹೊಂದಾಣಿಕೆ ರಾಜಕಾರಣ ಸದಾ ಮೇಲುಗೈ ಸಾಧಿಸುವುದು ಸಾಮಾನ್ಯವಾಗಿದೆ. ಇಂತಹ ರಾಜಕಾರಣವೇ ಅಭಿವೃದ್ಧಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಜನರು ಎಷ್ಟೇ ಮಂದಗತಿಯಲ್ಲಿ ಕಾಮಗಾರಿ ನಡೆಸಿದರೂ ಕೇಳುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಜನರೆದುರು ಕುಂಟುನೆಪಗಳನ್ನು ಹೇಳಿಕೊಂಡು ಗುತ್ತಿಗೆದಾರರೊಂದಿಗೆ ಅಡ್ಜಸ್ಟ್‌ಮೆಂಟ್ ರಾಜಕಾರಣವನ್ನು ಮುಂದುವರೆಸಿದ್ದಾರೆ.ನಗರಸಭೆ ಅಮೃತ ಭವನ ಸಭಾಂಗಣ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 1.75 ಕೋಟಿ ರು. ಹಣವನ್ನು ಬನ್ನೂರು ರಸ್ತೆ ಅಭಿವೃದ್ಧಿಗೆ ನೀಡಲಾಗಿದೆ. ಶಾಸಕರೂ ಈ ಕಾಮಗಾರಿಗೆ ಹೆಚ್ಚುವರಿ ಹಣ ತರುವುವಾಗಿ ಹೇಳಿದ್ದರು. ನಂತರದಲ್ಲಿ ಅನುದಾನ ಬಿಡುಗಡೆಯಾಗಲಿಲ್ಲ. ನಗರಸಭೆಯಲ್ಲಿ ದುಡ್ಡಿದ್ದರೂ ಗುತ್ತಿಗೆದಾರ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ರಸ್ತೆ ಅದ್ವಾನಸ್ಥಿ ತಿ ತಲುಪಿರುವುದು ನನ್ನ ಗಮನಕ್ಕೂ ಬಂದಿದೆ. ಕೂಡಲೇ ಗುತ್ತಿಗೆದಾರನಿಗೆ ಎಚ್ಚರಿಕೆ ಕೊಟ್ಟು ಕಾಮಗಾರಿ ನಡೆಸುವೆ.- ಎಂ.ವಿ.ಪ್ರಕಾಶ್, ಅಧ್ಯಕ್ಷರು, ನಗರಸಭೆ