ಶೃಂಗೇರಿಯ ಕೆರೆಕಟ್ಟೆಯಲ್ಲಿ ಆನೆ ದಾಳಿಗೆ ಇಬ್ಬರ ಬಲಿ

KannadaprabhaNewsNetwork |  
Published : Nov 01, 2025, 01:15 AM IST
ೇ್‌ | Kannada Prabha

ಸಾರಾಂಶ

ಶೃಂಗೇರಿ, ತಾಲೂಕಿನ ಕೆರೆ ಪಂಚಾಯಿತಿ ಕೆರೆಕಟ್ಟೆ ಗ್ರಾಮದ ಕೆರೆಗೆದ್ದೆಯಲ್ಲಿ ದನದ ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದಾಗ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

- ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ । ಮಂಗಳೂರು ಶಿವಮೊಗ್ಗ ರಾ.ಹೆ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನ ಕೆರೆ ಪಂಚಾಯಿತಿ ಕೆರೆಕಟ್ಟೆ ಗ್ರಾಮದ ಕೆರೆಗೆದ್ದೆಯಲ್ಲಿ ದನದ ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದಾಗ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಸ್ಥಳೀಯರಾದ ಹರೀಶ್ ಶೆಟ್ಟಿ ಹಾಗೂ ಉಮೇಶ್ ಗೌಡ ಮೃತ ದುರ್ದೈವಿಗಳು.

ಎಂದಿನಂತೆ ಶುಕ್ರವಾರ ಬೆಳಿಗ್ಗೆ ಮನೆಯ ಸಮೀಪ ದನದ ಕೊಟ್ಟಿಗೆಗೆ ಸೊಪ್ಪು ತರಲು ಹರೀಶ್ ಶೆಟ್ಟಿ ತೆರಳಿದ್ದಾಗ ಆನೆ ದಾಳಿ ನಡೆಸಿದೆ. ಆನೆ ಕಂಡ ನಾಯಿಗಳ ಬೊಗಳಾಟ ಕೇಳಿ ಉಮೇಶ್ ಗೌಡ ಸ್ಥಳಕ್ಕೆ ಓಡಿ ಹೋಗಿದ್ದಾರೆ. ಉಮೇಶ್ ಗೌಡ ನನ್ನು ಅಟ್ಟಾಡಿಸಿ ತುಳಿದು ಕೊಂದು ಹಾಕಿದೆ. ಹರೀಶ್ ಶೆಟ್ಟಿ ಮೃತ ದೇಹ ಆನೆ ತುಳಿತಕ್ಕೆ ನಜ್ಜುಗುಜ್ಜಾಗಿದೆ. ಉಮೇಶ್ ನನ್ನು ಅಟ್ಟಾಡಿಸಿ ತಳಿದು ಸಮೀಪದ ಪೊದೆಯಲ್ಲಿ ಹಾಕಿದ್ದು, ದೇಹ ಸಂಪೂರ್ಣ ಛಿದ್ರಗೊಂಡಿದೆ. ಸ್ಥಳದಲ್ಲಿ ಸುತ್ತಮುತ್ತಲ ಗಿಡ ಮರಗಳನ್ನು ಧ್ವಂಸಗೊಳಿಸಿದೆ.

ಮೃತ ಹರೀಶ್ ಶೆಟ್ಟಿಗೆ ಪತ್ನಿ ಇಬ್ಬರು ಹೆಣ್ಣು ಮಕ್ಕಳಿದ್ದು, ಉಮೇಶ್ ಗೌಡಗೂ ಪತ್ನಿ ಇಬ್ಬರು ಗಂಡು ಮಕ್ಕಳಿದ್ದಾರೆ. ಮೃತರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯಿಂದ ಸುತ್ತಮುತ್ತಲ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು ಎಲ್ಲೆಡೆ ಆತಂಕ ಮನಮಾಡಿದೆ.

ಕೆಲ ಸಮಯಗಳಿಂದ ಆನೆ ಸುತ್ತಮುತ್ತಲ ಪ್ರದೇಶಗಳಲ್ಲಿ ಓಡಾಡುತ್ತಿದ್ದು ಕೆಲ ವರ್ಷಗಳ ಹಿಂದೆ ಕೃಷ್ಣಪ್ಪ ಎಂಬ ವ್ಯಕ್ತಿಯನ್ನು ಆನೆ ತುಳಿದು ಸಾಯಿಸಿತ್ತು. ಕೆರೆ ಪಂಚಾಯಿತಿಯಲ್ಲಿ ಆನೆ ದಾಳಿಗೆ ಇದು ಮೂರನೆ ಬಲಿಯಾಗಿದೆ.

ಗ್ರಾಮಸ್ಥ ದ್ಯಾವುಂಟು ರಾಜೇಶ್ ಮಾತನಾಡಿ ರಾಷ್ಟ್ರೀಯ ಉದ್ಯಾನವನ ಹೆಸರಲ್ಲಿ ಜನರ ಬದುಕುವ ಹಕ್ಕನ್ನು ಕಸಿಯಲಾಗುತ್ತಿದೆ. ಕೃಷ್ಣಪ್ಪ ಎಂಬ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿ 2 ವರ್ಷ ಕಳೆದರೂ ಪರಿಹಾರ ನೀಡಿಲ್ಲ. ಕಾಡು ಪ್ರಾಣಿಗಳು ದಾಳಿ ಮಾಡಿ ಕೊಲ್ಲುತ್ತಿದ್ದರೂ ಜೀವಕ್ಕೆ ಬೆಲೆಯಿಲ್ಲ. ಸ್ಥಿತಿವಂತರು ಪರಿಹಾರ ಪಡೆದು ಹೊರಹೋಗುತ್ತಿದ್ದರೆ. ಬಡವರಿಗೆ ಹೋಗಲಾಗದೇ ಇತ್ತ ಉಳಿಯಲೂ ಆಗದೆ ಭಯದಿಂದ ಜೀವನ ನಡೆಸುತ್ತಿದ್ದಾರೆ. ಈಗಾಗಲೇ 3 ಜೀವ ಬಲಿಯಾಗಿದೆ ಎಂದರು.

ಎಚ್.ಜಿ.ಪುಟ್ಟಪ್ಪ ಹೆಗ್ಡೆ ಮಾತನಾಡಿ ಮೂಲ ಸೌಕರ್ಯಗಳು ಒದಗಿಸಲು ಅಡ್ಡಿಯಾಗುತ್ತಿದೆ. ಉದ್ಯಾನವನ ಹೆಸರಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಎಲ್ಲವನ್ನು ಕಾನೂನು ಕಾಯ್ದೆಗಳ ವ್ಯಾಪ್ತಿಯಲ್ಲಿ ತಂದು ಬದುಕುವ ಹಕ್ಕನ್ನು ಕಸಿಯಲಾಗುತ್ತಿದೆ. ಬಡವರು, ಕೂಲಿ ಕಾರ್ಮಿಕರು ಎಲ್ಲಿಗೆ ಹೋಗಬೇಕು. ಕಾಡು ಪ್ರಾಣಿಗಳ ಉಪಟಳದಿಂದ ಜೀವಭಯದಿಂದ ಬದುಕಬೇಕಿದೆ ಎಂದರು. ಎಚ್.ಕೆ.ದಿನೇಶ್ ಹೆಗ್ಡೆ, ತಲಗಾರು ಉಮೇಶ್ ಭಟ್, ನೂತನ್ ಕುಮಾರ್,ದಿವೀರ್ ಮಲ್ನಾಡ್, ಭರತ್ ರಾಜ್, ಕೆ.ಎಂ.ಗೋಪಾಲ್, ಅಭಿಷೇಕ್, ನವೀನ್ ಕರುವಾನೆ ,ರೈತಸಂಘದ ಬಿ.ಎಸ್. ಶ್ರೀಧರರಾವ್, ರಮೇಶ್ ಭಟ್,ಶೆಟ್ಟಿಗೆದ್ದೆ ರಾಮಸ್ವಾಮಿ, ಸೇರಿದಂತೆ ವಿವಿಧ ಸಂಘಸಂಸ್ಥೆಗಳ, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

-- ಬಾಕ್ಸ್ --

ಸ್ಥಳೀಯರ ಆಕ್ರೋಶ, ರಸ್ತೆ ಸಂಚಾರ ಬಂದ್:

ಆನೆ ದಾಳಿಗೆ ಇಬ್ಬರು ಮೃತಪಟ್ಟ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು, ಸುತ್ತಮುತ್ತಲ ಗ್ರಾಮಸ್ಥರು ಘಟನಾ ಸ್ಥಳಕ್ಕೆ ದೌಡಾಯಿಸಿದರು.ಘಟನೆ ನಡೆದ ಕೆಲ ಹೊತ್ತಾದರೂ ಯಾವ ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದರಿಂದ ಕೆರಳಿದ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ತಡೆದು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಡವಾಗಿ ಬಂದ್ ತಹಸೀಲ್ದಾರ್ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ತರು ಅವರನ್ನು ತರಾಟೆಗೆ ತೆಗೆದುಕೊಂಡು ಜೀಪನ್ನು ತಡೆದು ನಿಲ್ಲಿಸಿದರು. ಬೆಳಿಗ್ಗೆಯಿಂದಲೇ ಮಂಗಳೂರು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ಸಂಪೂರ್ಣ ಬಂದ್ ಮಾಡಲಾಯಿತು. ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಜಿಲ್ಲಾ ಎಸ್ಪಿ ವಿಕ್ರಂ ಅಮಟೆ, ಕೊಪ್ಪ ಡಿವೈಎಸ್ ಪಿ ಬಾಲಾಜಿ ಸಿಂಗ್, ತಹಸೀಲ್ದಾರ್ ಅನೂಪ್ ಸಂಜೋಗ್, ಪೋಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು. ಮಧ್ಯಾಹ್ನ ಘಟನಾ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು.

-- ಬಾಕ್ಸ್ --

ಅರಣ್ಯ ಸಚಿವರಿಗೆ ಶಾಸಕ ರಾಜೇಗೌಡ ಪತ್ರ

ಕೆರೆಕಟ್ಟೆಯಲ್ಲಿ ಇಬ್ಬರ ದುರ್ಮರಣಕ್ಕೆ ಕಾರಣವಾದ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರಿಸುವಂತೆ ಶಾಸಕ ಟಿ.ಡಿ.ರಾಜೇಗೌಡ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಪತ್ರ ಬರೆದಿದ್ದಾರೆ. ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಕಾಡಾನೆಗಳ ಉಪಟಳ ಹೆಚ್ಚುತ್ತಿದ್ದು ರೈತರ ಬೆಳೆ, ಜೀವಹಾನಿ ಯಾಗುತ್ತಿದೆ. 4 ಆನೆಗಳನ್ನು ಸ್ಥಳಾಂತರಿಸ ಲಾಗಿದೆ. ಶುಕ್ರವಾರ ಕೆರೆ ಗ್ರಾಮದ ಹರೀಶ್ ಶೆಟ್ಟಿ ಹಾಗೂ ಉಮೇಶ್ ಗೌಡ ಕಾಡಾನೆ ದಾಳಿಗೆ ಮರಣ ಹೊಂದಿದ್ದು ನನ್ನ ಮನಸ್ಸಿಗೆ ತೀವ್ರ ಆಘಾತವಾಗಿದೆ. ಈ ಭಾಗದ ಸಾರ್ವಜನಿಕರು, ರೈತರು ಭಯಭೀತ ರಾಗಿದ್ದಾರೆ. ಈಗಾಗಲೇ ಬಲಿಯಾಗಿದ್ದ 5 ಜನ ಸೇರಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿದೆ. ಕೆರೆಕಟ್ಟೆ, ಮುತ್ತಿನಕೊಪ್ಪ, ನರಸಿಂಹರಾಜಪುರ ಭಾಗದಲ್ಲಿ ಕಾಡಾನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಸಂಬಂಧ ಪಟ್ಟವರಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.

31 ಶ್ರೀ ಚಿತ್ರ 1-

ಶೃಂಗೇರಿ ಕೆರೆಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿರುವ ಸಾರ್ವಜನಿಕರು.

31 ಶ್ರೀ ಚಿತ್ರ 2-ಶೃಂಗೇರಿ ಕೆರೆಕಟ್ಟೆ ಬಳಿ ಇಬ್ಬರನ್ನು ಆನೆ ಬಲಿ ಪಡೆದ ಸ್ಥಳದಲ್ಲಿ ಗ್ರಾಮಸ್ಥರು ವೀಕ್ಷಿಸುತ್ತಿರುವುದು.

31 ಶ್ರೀ ಚಿತ್ರ 3-ಆನೆ ದಾಳಿಗೆ ಬಲಿಯಾದ ಹರೀಶ್ ಶೆಟ್ಟಿ

31 ಶ್ರೀ ಚಿತ್ರ 4-ಆನೆ ದಾಳಿಗೆ ಬಲಿಯಾದ ಉಮೇಶ್ ಗೌಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ