ಹಾಗೆ ನೋಡಿದರೆ ಈ ಇಬ್ಬರು ಹಿಂದೆ ಸಚಿವರಾದಾಗ ನಿಭಾಯಿಸಿದ ಖಾತೆಗಳೇ ಮತ್ತೆ ಬಂದಿರುವುದು ತಾವು ಕೈಗೊಂಡಿರುವ ಯೋಜನೆ ಜಾರಿಗೊಳಿಸಲು ಅನುಕೂಲವಾಗಲಿದೆ
ಸೋಮರಡ್ಡಿ ಅಳವಂಡಿ ಕೊಪ್ಪಳ
ಕೊಪ್ಪಳ ಜಿಲ್ಲೆಯ ಇಬ್ಬರು ಸಚಿವರಿಗೆ ತಾವು ಇಷ್ಟಪಟ್ಟ ಖಾತೆ ಸಿಗಲೇ ಇಲ್ಲ, ಈಗಾಗಲೇ ಒಂದು ಬಾರಿ ನಿಭಾಯಿಸಿರುವ ಖಾತೆ ಮತ್ತೆ ಸಿಕ್ಕಿರುವುದು, ಇಬ್ಬರಿಗೆ ಖಾತೆ ಹಂಚಿಕೆ ಅಷ್ಟೇನೂ ಖುಷಿ ಕೊಟ್ಟಿಲ್ಲ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 19 ಸಚಿವರಿಗೆ ಹಂಚಿಕೆ ಮಾಡಿರುವ ಖಾತೆಗಳಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದರೆ ಕನಕಗಿರಿಯ ಶಾಸಕ ಶಿವರಾಜ ತಂಗಡಗಿಗೆ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನೀಡಲಾಗಿದೆ.
ಹಾಗೆ ನೋಡಿದರೆ ಈ ಇಬ್ಬರು ಹಿಂದೆ ಸಚಿವರಾದಾಗ ನಿಭಾಯಿಸಿದ ಖಾತೆಗಳೇ ಮತ್ತೆ ಬಂದಿರುವುದು ತಾವು ಕೈಗೊಂಡಿರುವ ಯೋಜನೆ ಜಾರಿಗೊಳಿಸಲು ಅನುಕೂಲವಾಗಲಿದೆ.
ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಯೋಜನಾ ಇಲಾಖೆ ಅಥವಾ ಹಣಕಾಸು ಇಲಾಖೆಯ ನಿರೀಕ್ಷೆಯಲ್ಲಿದ್ದರು. ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಶಾಸಕ ಬಸವರಾಜ ರೆಡ್ಡಿಗೆ ಹಣಕಾಸು ಖಾತೆ ನೀಡುವಂತೆ ಶಿಫಾರಸು ಮಾಡಿದ್ದರು. ಆದರೂ ಕೂಡ ಖಾತೆ ಹಂಚಿಕೆಯ ವೇಳೆ ಅದ್ಯಾವುದು ವರ್ಕೌಟ್ ಆಗಿಲ್ಲ.
ಖಾತೆ ಹಂಚುವುದಕ್ಕೂ ಮೊದಲು ಬಸವರಾಜ ರಾಯರಡ್ಡಿ ಮಾಧ್ಯಮಗಳ ಎದುರು ಮಾತನಾಡಿ, ನನಗೆ ಯೋಜನಾ ಅಥವಾ ಹಣಕಾಸು ಖಾತೆ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಈಗಾಗಲೇ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರನಾಗಿ ಕಾರ್ಯ ನಿರ್ವಹಿಸಿರುವುದರಿಂದ ಹೆಚ್ಚು ಅನುಭವವಿದ್ದು, ಅದನ್ನು ನೀಡಿದರೆ ಖಂಡಿತವಾಗಿಯೂ ಸರ್ಕಾರಕ್ಕೆ ಉತ್ತಮ ಹೆಸರು ತರುವ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರಲ್ಲದೆ, ಮುಖ್ಯಮಂತ್ರಿಗಳು ಬಜೆಟ್ ಮಂಡನೆ, ಇಲಾಖೆಯ ವರ್ಗಾವಣೆ ಸೇರಿದಂತೆ ಎಲ್ಲವನ್ನು ತಮ್ಮ ಬಳಿ ಇಟ್ಟುಕೊಂಡು ನನಗೆ ಹಣಕಾಸು ನಿರ್ವಹಣೆ ಜವಾಬ್ದಾರಿ ನೀಡಿದರೆ ಅಷ್ಟೇ ಸಾಕು ಎಂದು ಸಹ ಹೇಳಿದ್ದರು. ಆದರೆ, ಅವರ ಆಸೆ ಕೈಗೂಡಿಲ್ಲ.
ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ ಸತತ ನಾಲ್ಕು ಬಾರಿ ಸಚಿವರಾಗಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದರೂ ಕೂಡ ತಮ್ಮ ಇಷ್ಟದಂತೆ ಖಾತೆ ಪಡೆಯುವಲ್ಲಿ ಸಫಲರಾಗಿಲ್ಲ. ಖಾತೆ ಹಂಚುವ ಮುನ್ನ ಸಚಿವ ಶಿವರಾಜ ತಂಗಡಗಿ, ಈ ಬಾರಿ ನಾನು ಸಮಾಜ ಕಲ್ಯಾಣ ಖಾತೆಯ ಸಚಿವನಾಗಿ ಕಾರ್ಯ ನಿರ್ವಹಿಸುವ ಉತ್ಸಕತೆ ಹೊಂದಿದ್ದೇನೆ. ಕಳೆದ ಬಾರಿಯೂ ಕೇಳಿದ್ದೆ, ಸಿಕ್ಕಿರಲಿಲ್ಲ ಈ ಬಾರಿ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದರು. ಆದರೆ, ಹಿಂದಿನ ಖಾತೆಗಳೇ ಲಭಿಸಿವೆ.
ಕೊಪ್ಪಳ ವಿಶ್ವವಿದ್ಯಾಲಯ: ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಉನ್ನತ ಶಿಕ್ಷಣ ಖಾತೆಯ ಸಚಿವರಾಗುತ್ತಿದ್ದಂತೆ ಕೊಪ್ಪಳ ವಿಶ್ವವಿದ್ಯಾಲಯದ ಸ್ಥಳ ನಿಗದಿಯ ಕುರಿತು ಈಗಾಗಲೇ ಇದ್ದ ಚರ್ಚೆ ಮುನ್ನೆಲೆಗೆ ಬಂದಿದೆ. ಕೊಪ್ಪಳ ವಿವಿ ಕೊಪ್ಪಳದಲ್ಲಿಯೇ ಸ್ಥಾಪಿಸಬೇಕು ಎನ್ನುವ ಕುರಿತು ಹಲವಾರು ಹೋರಾಟ ಆಗಿವೆ. ಆದರೆ ಸೂಕ್ತ ಸ್ಥಳದ ಅಭಾವದಿಂದ ಕುಕುನೂರು ತಾಲೂಕಿನ ತಳಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೊಪ್ಪಳ ವಿವಿ ಈಗ ಕಾರ್ಯ ನಿರ್ವಹಿಸುತ್ತಿದೆ. ಸಚಿವರಾದ ತಕ್ಷಣ ಬಸವರಾಜ ರಾಯರೆಡ್ಡಿ ಈ ಕುರಿತು ಪ್ರತಿಕ್ರಿಯಿಸಿ ಕೊಪ್ಪಳದಲ್ಲಿ ಸೂಕ್ತ ಜಾಗ ನೀಡುವುದಾದರೆ ಕೊಪ್ಪಳದಲ್ಲಿಯೇ ವಿವಿ ಮುಂದುವರಿಸಲು ನನಗೇನು ಅಭ್ಯಂತರವಿಲ್ಲ, ಆದರೆ ಸೂಕ್ತ ಜಾಗ ದೊರೆಯದೆ ಇದ್ದರೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸೂಕ್ತ ಜಾಗ ನೀಡುವ ಕುರಿತು ಚಿಂತಿಸಬಹುದಾಗಿದೆ ಎಂದು ಹೇಳಿದ್ದರು. ಈಗ ಉನ್ನತ ಶಿಕ್ಷಣ ಇಲಾಖೆಯ ಸಚಿವರೂ ಅವರೇ ಆಗಿರುವುದರಿಂದ ಕೊಪ್ಪಳ ವಿವಿ ತಮ್ಮ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳುವರೇ ಎನ್ನುವ ಕುರಿತು ಭಾರಿ ಚರ್ಚೆಯಂತೂ ಪ್ರಾರಂಭವಾಗಿದೆ.
ಸಮಾಜ ಕಲ್ಯಾಣ ಖಾತೆ ಕೇಳಿದ್ದು ನಿಜ. ಆದರೆ ಈಗ ಮುಖ್ಯಮಂತ್ರಿಗಳು ಕೊಟ್ಟ ಖಾತೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.