ಸರ್ಕಾರದಿಂದ ಇಬ್ಬರು ಲೋಕೋಪಯೋಗಿ ಅಧಿಕಾರಿಗಳು ಅಮಾನತು । ₹88.83 ಲಕ್ಷ ಪಡೆದು ಕಳಪೆ ಕಾಮಗಾರಿ । ಆಂತರಿಕ ತನಿಖೆಯಲ್ಲಿ ಬೆಳಕಿಗೆ
ರಸ್ತೆ ಕಾಮಗಾರಿಯನ್ನು ಕಳಪೆಯಾಗಿ ಮಾಡಿ, ಇಲಾಖೆಯ ಹಲವು ನಿಯಮಗಳನ್ನು ಗಾಳಿಗೆ ತೂರಿ, ಸರ್ಕಾರಕ್ಕೆ ಭಾರಿ ಆರ್ಥಿಕ ನಷ್ಟವುಂಟು ಮಾಡಿದ ಇಬ್ಬರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.
ಹಿಂದಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಪಿ. ಪುರುಷೋತ್ತಮ (ಪ್ರಸ್ತುತ ಆನೇಕಲ್ ಉಪವಿಭಾಗ) ಹಾಗೂ ಕೊಳ್ಳೇಗಾಲ ಉಪವಿಭಾಗದ ಸಹಾಯಕ ಎಂಜಿನಿಯರ್ ಎನ್. ಸುರೇಂದ್ರ ಕುಮಾರ್‌ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಸರ್ಕಾರ ಆದೇಶಿಸಿದೆ. ಇಬ್ಬರ ವಿರುದ್ಧ ಇಲಾಖಾ ವಿಚಾರಣೆ ಈಗಾಗಲೇ ಪ್ರಗತಿಯಲ್ಲಿದೆ.ಹನೂರು ತಾಲೂಕಿನ ಒಡೆಯರಪಾಳ್ಯದ ಟಿಬೇಟಿಯನ್ ಕಾಲೋನಿಯ ಸಮೀಪ ರಸ್ತೆ ಕಾಮಗಾರಿಯಲ್ಲಿ ಗುತ್ತಿಗೆ ನಿಯಮ ಉಲ್ಲಂಘನೆ, ಗುಣಮಟ್ಟ ಪರೀಕ್ಷೆ ನಡೆಸದಿರುವುದು, ಅಳತೆಯಲ್ಲಿ ವ್ಯತ್ಯಾಸವಿದ್ದರೂ 88.83 ಲಕ್ಷ ರು. ಮೊತ್ತದ ಚಾಲ್ತಿ ಬಿಲ್ ಪಾವತಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿದ್ದಾರೆ. ಈ ಆರೋಪದ ಕಾರಣ ಇಬ್ಬರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ.
ಕೊರಮನಕತ್ರಿ-ಟಿಬೇಟಿಯನ್ ಸೆಟಲ್‌ಮೆಂಟ್ ಕಚೇರಿ ಮಾರ್ಗದ 4.20 ಕಿ.ಮೀ. ರಸ್ತೆ ಕಾಮಗಾರಿಯಲ್ಲಿ ಟೆಂಡರ್‌ಗೆ ಅಗತ್ಯವಿರುವ ಪೂರ್ವಾನುಮೋದನೆ ಪಡೆಯದೇ ಟೆಂಡರ್ ಆಹ್ವಾನಿಸಿ ಅಂಗೀಕರಿಸಿರುವುದು. ಗುತ್ತಿಗೆದಾರರಿಗೆ ಸ್ಥಳೀಯ ಪ್ರಯೋಗಾಲಯ ಸ್ಥಾಪಿಸದಿರುವುದು, ಕಾಮಗಾರಿ ವೇಳೆ ಕಡ್ಡಾಯ ಗುಣಮಟ್ಟ ಪರೀಕ್ಷೆ ನಡೆಸದಿರುವುದು. ಗುಣಭರವಸೆ ಘಟಕದಿಂದ ಪರೀಕ್ಷಾ ವರದಿ ಪಡೆಯದಿರುವುದು ಹಾಗೂ ಅಳತೆ ಪುಸ್ತಕ ಮತ್ತು ಕಾಮಗಾರಿ ಸ್ಥಳದ ಅಳತೆಗಳಲ್ಲಿ ವ್ಯತ್ಯಾಸಗಳಿದ್ದರೂ 88.83 ಲಕ್ಷ ರು. ಚಾಲ್ತಿ ಬಿಲ್‌ಗಳ ಮೂಲಕ ಪಾವತಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಪ್ರಕರಣ ಸಂಬಂಧ 2026ರ ಏ.7ರಂದು ಕಾರಣ ಕೇಳುವ ನೋಟಿಸ್ ಜಾರಿಗೊಳಿಸಲಾಗಿತ್ತು. ಆರೋಪಿ ಅಧಿಕಾರಿಗಳು ಸಲ್ಲಿಸಿದ ಸಮಜಾಯಿಷಿಗಳು ಸಮರ್ಪಕವಾಗಿಲ್ಲ ಎಂದು ಸರ್ಕಾರ ಅಭಿಪ್ರಾಯಪಟ್ಟಿದ್ದು, ಕಾರ್ಯಪಾಲಕ ಎಂಜಿನಿಯರ್ ಕಿರಣ್ ಸಿ. ಅವರು ಯಾವುದೇ ಲಿಖಿತ ಸಮಜಾಯಿಷಿ ಸಲ್ಲಿಸಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳು, 2021ರ ನಿಯಮ 3(1)(i)ರಿಂದ (iii) ಉಲ್ಲಂಘಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಮುಂದುವರಿದಿದ್ದು, ಕರ್ತವ್ಯ ಲೋಪ ಗಂಭೀರವಾಗಿರುವ ಕಾರಣ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.