ಸಿಡಿಪಿಒ ಹುದ್ದೆಗೆ ಇಬ್ಬರ ಕಾದಾಟ!

KannadaprabhaNewsNetwork |  
Published : Aug 06, 2026, 03:00 AM IST
ಗರಂ | Kannada Prabha

ಸಾರಾಂಶ

ಸದಾ ಒಂದಿಲ್ಲೊಂದು ಗದ್ದಲಗಳಿಂದ ಸುದ್ದಿಯಲ್ಲಿರುವ ಹುಕ್ಕೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದೀಗ ಮತ್ತೊಂದು ಸುದ್ಧಿಯಲ್ಲಿದೆ. ಇಲಾಖೆಯ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಶುರುವಾಗಿದ್ದು, ಇದು ಇಬ್ಬರು ಅಧಿಕಾರಿಗಳ ನಡುವಿನ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸದಾ ಒಂದಿಲ್ಲೊಂದು ಗದ್ದಲಗಳಿಂದ ಸುದ್ದಿಯಲ್ಲಿರುವ ಹುಕ್ಕೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದೀಗ ಮತ್ತೊಂದು ಸುದ್ಧಿಯಲ್ಲಿದೆ. ಇಲಾಖೆಯ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಶುರುವಾಗಿದ್ದು, ಇದು ಇಬ್ಬರು ಅಧಿಕಾರಿಗಳ ನಡುವಿನ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

ಈ ಘಟನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಡಳಿತಾತ್ಮಕ ವೈಫಲ್ಯ ಮತ್ತು ಅಧಿಕಾರ ವ್ಯಾಮೋಹಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹೀಗಾಗಿ, ಹುಕ್ಕೇರಿಯಲ್ಲಿ ಸಿಡಿಪಿಒ ಕಚೇರಿ ಸದ್ಯ ತ್ರಿಶಂಕು ಸ್ಥಿತಿಯಲ್ಲಿದ್ದಂತಾಗಿದೆ. ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಹಠ ಮತ್ತು ಅದಕ್ಕೆ ಮೇಲಾಧಿಕಾರಿಗಳ ದ್ವಂದ್ವ ನಿಲುವು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದೆ. ಅಲ್ಲದೇ, ಕಳೆದ ಎರಡ್ಮೂರು ತಿಂಗಳಿನಿಂದ ಈ ಹುದ್ದೆಯ ಕುರ್ಚಿ ಮ್ಯೂಜಿಕ್ ಚೇರ್‌ನಂತಾಗಿದೆ.ಈ ಹಿಂದಿನ ಸಿಡಿಪಿಒ ಎಚ್.ಹೊಳೆಪ್ಪ ಅವರನ್ನು ಕರ್ತವ್ಯಲೋಪ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ಹುದ್ದೆಯಿಂದ ಮೊದಲು ಬಿಡುಗಡೆಗೊಳಿಸಿ, ವರ್ಗಾವಣೆ ಮಾಡಿ ಬಳಿಕ ಸಸ್ಪೆಂಡ್ ಮಾಡಲಾಗಿದೆ. ತೆರವಾದ ಈ ಸ್ಥಾನಕ್ಕೆ ಬೆಳಗಾವಿ ಸಿಡಿಪಿಒ ರಾಮಮೂರ್ತಿ.ಕೆ.ವಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಇನ್ನು ತಮ್ಮನ್ನು ಅವಧಿಪೂರ್ವ ವರ್ಗಾವಣೆ ಮಾಡಿ ಬಿಡುಗಡೆಗೊಳಿಸಿದ್ದನ್ನು ಪ್ರಶ್ನಿಸಿ ಹೊಳೆಪ್ಪ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದಿದ್ದಾರೆ.ನ್ಯಾಯಾಲಯದ ತೀರ್ಪಿನಂತೆ ಯಥಾಸ್ಥಿತಿ ಕಾಪಾಡಿಕೊಂಡು ತಮ್ಮನ್ನು ಈ ಹುದ್ದೆಯಲ್ಲಿಯೇ ಮುಂದುವರೆಸುವಂತೆ ಹೊಳೆಪ್ಪ ಅವರು ಕಚೇರಿಗೆ ಆಗಮಿಸುತ್ತಿದ್ದಾರೆ. ಇತ್ತ, ಸರ್ಕಾರ ತಮ್ಮನ್ನು ಈ ಸ್ಥಾನಕ್ಕೆ ನೇಮಕ ಮಾಡಿದ್ದು ಯಾವುದೇ ಕಾರಣಕ್ಕೂ ಕುರ್ಚಿಯನ್ನು ಬಿಟ್ಟುಕೊಡುವುದಿಲ್ಲ ಎಂದು ರಾಮಮೂರ್ತಿ ಪಟ್ಟು ಹಿಡಿದಿದ್ದಾರೆ. ಇದರಿಂದ ಹುಕ್ಕೇರಿ ಸಿಡಿಪಿಒ ಕುರ್ಚಿ ಇಬ್ಬರ ಮಧ್ಯದ ಮ್ಯುಸಿಕ್‌ ಚೇರ್‌ನಂತಾಗಿದೆ.ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯವು ಈ ಹುದ್ದೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಈ ಹಿಂದಿನ ಸಿಡಿಪಿಒ ಹೊಳೆಪ್ಪ ಅವರನ್ನೇ ಹುದ್ದೆಯಲ್ಲಿ ಮುಂದುವರೆಸಲು ಸೂಚಿಸಿದೆ. ಆದರೆ, ಸರ್ಕಾರದ ಆದೇಶದಂತೆ ಕೆ.ವಿ.ರಾಮಮೂರ್ತಿ ಅವರು ಅಲಂಕರಿಸಿದ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲ. ಇದರ ಪರಿಣಾಮ ತಾಲೂಕಿನ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಣೆ, ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳ ಪೌಷ್ಠಿಕಾಂಶ ಹಾಗೂ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ ಎಂಬ ದೂರುಗಳು ಬರುತ್ತಿವೆ.ಈ ಪ್ರಕರಣದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಕೋರ್ಟ್ ನಿರ್ದೇಶನವೊಂದೇ ಸಾಕಾಗದು. ಸರ್ಕಾರದ ಆದೇಶವೂ ಕೂಡ ಅವಶ್ಯಕವಿದೆ. ಇಲಾಖೆಯ ಕಾರ್ಯದರ್ಶಿಗಳ ಸೂಚನೆಯಂತೆ ತೆರವಾದ ಹುಕ್ಕೇರಿ ಸಿಡಿಪಿಒ ಸ್ಥಾನಕ್ಕೆ ಹೊಸದಾಗಿ ಅಧಿಕಾರಿಯನ್ನು ನಿಯೋಜಿಸಿದ್ದೇವೆ.

-ಎಂ.ಎನ್.ಚೇತನಕುಮಾರ, ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.ಹುಕ್ಕೇರಿ ಸಿಡಿಪಿಒ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ನನ್ನನ್ನು ಅವಧಿಪೂರ್ವ ಬಿಡುಗಡೆಗೊಳಿಸಿ ವರ್ಗಾವಣೆ ಮಾಡಿರುವುದಕ್ಕೆ ರಾಜ್ಯ ಆಡಳಿತಾತ್ಮಕ ನ್ಯಾಯಾಲಯ ತಡೆಯಾಜ್ಞೆ ನೀಡಿ, ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶಿಸಿದೆ. ಅದರನ್ವಯ ಸರಕಾರ ಮತ್ತು ಮೇಲಾಧಿಕಾರಿಗಳು ನನಗೆ ನ್ಯಾಯ ಒದಗಿಸಿಕೊಡಬೇಕು.

-ಎಚ್.ಹೊಳೆಪ್ಪ,

ನಿಕಟಪೂರ್ವ ಸಿಡಿಪಿಒ ಹುಕ್ಕೇರಿ.ಸರ್ಕಾರದ ಆದೇಶದಂತೆ ತೆರವಾದ ಹುಕ್ಕೇರಿ ಸಿಡಿಪಿಒ ಸ್ಥಾನ ವಹಿಸಿಕೊಂಡು ಇಲಾಖೆ ಯೋಜನೆಗಳ ಅನುಷ್ಠಾನದತ್ತ ಗಮನ ಹರಿಸಿದ್ದೇನೆ. ಈ ವಿಚಾರದಲ್ಲಿ ಯಾವುದೇ ರೀತಿಯ ಒತ್ತಡ ಮತ್ತು ಪ್ರಭಾವ ಬಳಸಿಲ್ಲ. ಒಂದು ವೇಳೆ ಹೊಳೆಪ್ಪ ಅವರು ಸರಕಾರದಿಂದ ಆದೇಶ ತಂದರೆ ಈ ಹುದ್ದೆ ಬಿಟ್ಟುಕೊಡಲು ನನ್ನದು ಯಾವುದೇ ಅಭ್ಯಂತರವಿಲ್ಲ.

-ಕೆ.ವಿ.ರಾಮಮೂರ್ತಿ,
ನೂತನ ಸಿಡಿಪಿಒ ಹುಕ್ಕೇರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತರು ಜನಸಾಮಾನ್ಯರ ಧ್ವನಿ
ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ