ಚಿಕ್ಕಮಗಳೂರು ಎಸ್ಸೈಆರ್‌ ಮ್ಯಾಪಿಂಗ್‌ನಿಂದ 2.88 ಲಕ್ಷ ಮಂದಿ ಹೊರಗೆ

KannadaprabhaNewsNetwork |  
Published : Feb 02, 2026, 01:15 AM IST
ಮ್ಯಾಪಿಂಗ್‌ | Kannada Prabha

ಸಾರಾಂಶ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್‌) ಪೂರ್ವ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೂ 2.88 ಲಕ್ಷ ಮಂದಿ ಪ್ರಕ್ರಿಯೆಯಿಂದ ಹೊರಗಿದ್ದಾರೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್‌) ಪೂರ್ವ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೂ 2.88 ಲಕ್ಷ ಮಂದಿ ಪ್ರಕ್ರಿಯೆಯಿಂದ ಹೊರಗಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ದೇಶದ ಹಲವು ರಾಜ್ಯಗಳಲ್ಲಿಯೂ ಎಸ್ಐಆರ್‌ ನಡೆಸುವುದಕ್ಕೆ ಪೂರ್ವಭಾವಿ ಪ್ರಕ್ರಿಯೆಯನ್ನು ಕಳೆದ ಡಿಸೆಂಬರ್‌ನಲ್ಲಿಯೇ ಚಾಲನೆ ನೀಡಿತ್ತು. ಕರ್ನಾಟಕದಲ್ಲಿ ಎಸ್‌ಐಆರ್‌ಗೆ ಪೂರ್ವಭಾವಿಯಾಗಿ 2002ರ ಮತ್ತು 2025ರ ಮತದಾರರ ಪಟ್ಟಿಯನ್ನು ಹೋಲಿಕೆ (ಮ್ಯಾಪಿಂಗ್‌) ಮಾಡಲಾಗುತ್ತಿದೆ. ರಾಜ್ಯದಲ್ಲಿನ 5.54 ಕೋಟಿ ಮತದಾರರ ಪೈಕಿ ಸುಮಾರು 3.50 ಕೋಟಿ ಮತದಾರರ ವಿವರಗಳು ತಾಳೆ ಕಾರ್ಯ ಪೂರ್ಣಗೊಂಡಿದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಇನ್ನೂ 2.88ಕ್ಕೂ ಅಧಿಕ ಮಂದಿ ಮ್ಯಾಪಿಂಗ್‌ನಿಂದ ಹೊರಗುಳಿದಿದ್ದಾರೆ.

ಶೇ.30 ರಷ್ಟು ಬಾಕಿ

ಜಿಲ್ಲೆಯಲ್ಲಿ ಒಟ್ಟು 9,79,455 ಮತದಾರರಿದ್ದಾರೆ. ಈ ಪೈಕಿ 2002ರ ಮತದಾರ ಪಟ್ಟಿಯಲ್ಲಿ 5,95,178 ಇದ್ದ ಮತದಾರರಿದ್ದಾರೆ. 2002ರ ನಂತರ 3,84,277 ಮಂದಿ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಈವರೆಗೆ 6,91,586 ಮಂದಿ ಮ್ಯಾಪಿಂಗ್‌ ಮಾಡಲಾಗಿದೆ. ಇನ್ನೂ ಶೇ.30 ರಷ್ಟು ಮ್ಯಾಪಿಂಗ್‌ ಪ್ರಕ್ರಿಯೆ ಬಾಕಿ ಇದೆ. ಮುಂದಿನ 10 ದಿನದಲ್ಲಿ ಮ್ಯಾಪಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ನಿರ್ಧರಿಸಲಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಅತಿ ಕಡಿಮೆ

ಚಿಕ್ಕಮಗಳೂರು ಜಿಲ್ಲೆಗೆ ಐದು ಉಪವಿಭಾಗಗಳು ಒಳಪಡಲಿವೆ. ಈ ಪೈಕಿ ಶೃಂಗೇರಿ, ಮೂಡಗೆರೆ, ತರೀಕೆರೆ ಹಾಗೂ ಕಡೂರು ಉಪ ವಿಭಾಗದಲ್ಲಿ ಶೇ.70ಕ್ಕಿಂತ ಹೆಚ್ಚಿನ ಮ್ಯಾಪಿಂಗ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಚಿಕ್ಕಮಗಳೂರು ಉಪ ವಿಭಾಗದಲ್ಲಿ ಜನವರಿ ಅಂತ್ಯಕ್ಕೆ ಶೇ.61 ರಷ್ಟು ಮಾತ್ರ ಪೂರ್ಣಗೊಂಡಿದೆ. ಇನ್ನೂ 90 ಸಾವಿರ ಮಂದಿಯನ್ನು ಮ್ಯಾಪಿಂಗ್‌ ಮಾಡಬೇಕಿದೆ.

ಯುವ ಮತದಾರರ ಪತ್ತೆ ಸವಾಲು

5.95 ಲಕ್ಷದಷ್ಟು 40 ವರ್ಷಕ್ಕಿಂತ ಮೇಲ್ಪಟ್ಟ ಮತದಾರಿದ್ದಾರೆ. ಈ ಪೈಕಿ ಈಗಾಗಲೇ 4.30 ಲಕ್ಷ ಮತದಾರರ ಮ್ಯಾಪಿಂಗ್‌ ಆಗಿದೆ. 18 ರಿಂಚ 40 ವರ್ಷದ 3.84 ಲಕ್ಷ ಮತದಾರಿದ್ದು ಈ ಪೈಕಿ 2.60 ಲಕ್ಷ ಮತದಾರರು ಮಾತ್ರ ಮ್ಯಾಪಿಂಗ್‌ ಆಗಿದೆ. ಬಾಕಿರುವ ಸುಮಾರು 1.20 ಲಕ್ಷಕ್ಕಿಂತ ಹೆಚ್ಚಿನ ಮತದಾರರ ಮ್ಯಾಪಿಂಗ್‌ ಮಾಡುವುದು ಕಷ್ಟವಾಗಿದೆ. ಕೆಲವರು, ಉದ್ಯೋಗ, ಮದುವೆ ಸೇರಿದಂತೆ ವಿವಿಧ ಕಾರಣದಿಂದ ವಿಧಾನಸಭಾ ಕ್ಷೇತ್ರದಿಂದ ಹೊರ ಹೋಗಿದ್ದಾರೆ. ಅವರನ್ನು ಸಂಪರ್ಕಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏನಿದು ಎಸ್‌ಐಆರ್‌ ಪೂರ್ವಭಾವಿ ಪ್ರಕ್ರಿಯೆ?

ನಕಲಿ ಹಾಗೂ ಹಲವು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಉಳ್ಳವರನ್ನು ಪತ್ತೆ ಮಾಡುವುದು ಎಸ್‌ಐಆರ್‌ ಪ್ರಕ್ರಿಯೆ ಆಗಿದೆ. ಅದರ ಪೂರ್ವಭಾವಿ ಸಿದ್ಧತೆ ಅಂಗವಾಗಿ ಮತದಾರರನನ್ನು ಅವರ ಅಥವಾ ಅವರ ಕುಟುಂಬದ ಅಜ್ಜ, ಅಜ್ಜಿ, ತಂದೆ ಅಥವಾ ತಾಯಿಯು 2002ರಲ್ಲಿ ಮತದಾನ ಹೊಂದಿದ್ದ ಮತದಾರ ಕ್ಷೇತ್ರ, ಮತಗಟ್ಟೆ, ಕ್ರಮ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿ ಪರಿಶೀಲನೆ ಮಾಡುವುದಾಗಿದೆ. ಅದಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಿ ನೆಲೆಸಿರುವ ಮತದಾರರು 2002ರಲ್ಲಿನ ತಮ್ಮ ಮತಗಟ್ಟೆ ವಿವರನ್ನು ಹಾಲಿ ಇರುವ ಮತಗಟ್ಟೆ ಅಧಿಕಾರಿಗೆ (ಬಿಎಲ್‌ಒ) ನೀಡಬೇಕು.

ಎಸ್‌ಐಆರ್ ಪ್ರಕ್ರಿಯೆ ಆರಂಭಗೊಂಡ ನಂತರ ಮತಗಟ್ಟೆ ಅಧಿಕಾರಿಗಳು ಮನೆ-ಮನೆಗೆ ಹೋಗಿ ಮತದಾರರ ಪಟ್ಟಿಯ ಪರಿಶೀಲನೆ ನಡೆಸಲಿದ್ದಾರೆ. ಮೃತಪಟ್ಟವರು, ವಿಳಾಸ ಬದಲಾದವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಚೀಟಿ ಹೊಂದಿರುವವರ ವಿವರವನ್ನು ಕಲೆ ಹಾಕುತ್ತಾರೆ. ಅರ್ಹ ದಾಖಲೆಗಳನ್ನು ಒದಗಿಸಿದವರು ಮತದಾರರ ಪಟ್ಟಿಯಲ್ಲಿ ಉಳಿಯುತ್ತಾರೆ. ಇದರಿಂದ ಅರ್ಹ ಮತದಾರರ ಸಂಖ್ಯೆ ಅಂದಾಜು ಸಿಗಲಿದೆ.

ಜಿಲ್ಲೆಯ ಮ್ಯಾಪಿಂಗ್‌ ವಿವರ

ತಾಲೂಕುಹಾಲಿ ಮತದಾರರುಪೂರ್ಣಗೊಂಡ ಮ್ಯಾಪಿಂಗ್‌ಬಾಕಿ ಮ್ಯಾಪಿಂಗ್‌

ಶೃಂಗೇರಿ 1,69,475 1,29,091 40,384

ಮೂಡಿಗೆರೆ 1,71,792 1,22,758 49,034

ಚಿಕ್ಕಮಗಳೂರು 2,32,047 1,41,574 90,473

ತರೀಕೆರೆ 1,96,367 1,42,099 54,268

ಕಡೂರು 2,09,774 1,56,064 53,710

ಒಟ್ಟು 9,79,455 6,91,586 2,87,869

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ