ಜೈಲಲ್ಲಿ ರೌಡಿಗಳ ಹುಟ್ಟುಹಬ್ಬ ಆಚರಣೆ ಇಬ್ಬರು ಕಾರಾಗೃಹದ ಸಿಬ್ಬಂದಿ ತಲೆದಂಡ

KannadaprabhaNewsNetwork |  
Published : Oct 09, 2025, 02:00 AM IST

ಸಾರಾಂಶ

ಜೈಲಿನಲ್ಲಿ ರೌಡಿ ಶ್ರೀನಿವಾಸ ಅಲಿಯಾಸ್ ಗುಬ್ಬಚ್ಚಿ ಸೀನ ಜನ್ಮ ದಿನಾಚರಣೆ ಪ್ರಕರಣ ಸಂಬಂಧ ಇಬ್ಬರು ಕಾರಾಗೃಹ ಸಿಬ್ಬಂದಿ ತಲೆದಂಡವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜೈಲಿನಲ್ಲಿ ರೌಡಿ ಶ್ರೀನಿವಾಸ ಅಲಿಯಾಸ್ ಗುಬ್ಬಚ್ಚಿ ಸೀನ ಜನ್ಮ ದಿನಾಚರಣೆ ಪ್ರಕರಣ ಸಂಬಂಧ ಇಬ್ಬರು ಕಾರಾಗೃಹ ಸಿಬ್ಬಂದಿ ತಲೆದಂಡವಾಗಿದೆ.

ಮುಖ್ಯ ವೀಕ್ಷಕ ಹಾಗೂ ವೀಕ್ಷಕನನ್ನು ಅಮಾನತು ಮಾಡಲಾಗಿದ್ದು, ಸಹಾಯಕ ಅಧೀಕ್ಷಕ, ಇಬ್ಬರು ಜೈಲರ್‌ಗಳು ಹಾಗೂ ಇಬ್ಬರು ಸಹಾಯಕ ಜೈಲರ್‌ಗಳ ವಿರುದ್ಧ ಶಿಸ್ತು ಕ್ರಮಕ್ಕೆ ಡಿಐಜಿ ದಕ್ಷಿಣ ವಲಯ ಕೆ.ಸಿ.ದಿವ್ಯಶ್ರೀ ಶಿಫಾರಸು ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತನ್ನ ಸಹಚರರ ಜತೆ ಕೊಲೆ ಪ್ರಕರಣದ ಆರೋಪಿ ಸರ್ಜಾಪುರದ ರೌಡಿ ಶ್ರೀನಿವಾಸ ಅಲಿಯಾಸ್ ಗುಬ್ಬಚ್ಚಿ ಸೀನ ಹುಟ್ಟು ಹಬ್ಬ ಆಚರಿಸಿಕೊಂಡ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿ ವರದಿ ನೀಡುವಂತೆ ಡಿಐಜಿ ದಿವ್ಯಶ್ರೀ ಅವರಿಗೆ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಎಡಿಜಿಪಿ ಬಿ.ದಯಾನಂದ್ ಸೂಚಿಸಿದ್ದರು. ಅಂತೆಯೇ ಅ.4 ರಂದು ಜೈಲಿಗೆ ಭೇಟಿ ನೀಡಿ ವಿಚಾರಣೆ ನಡೆಸಿ ಎಡಿಜಿಪಿ ಅವರಿಗೆ ಡಿಐಜಿ ಪ್ರಾಥಮಿಕ ವರದಿ ಸಲ್ಲಿಸಿದ್ದರು. ಸೆ.9 ರಂದು 6 ನೇ ಬ್ಯಾರಕ್‌ನ 7ನೇ ಕೊಠಡಿಯಲ್ಲಿ ಮಧ್ಯಾಹ್ನದ ನಂತರ ಗುಬ್ಬಚ್ಚಿ ಸೀನ ಜನ್ಮ ದಿನಾಚರಣೆ ನಡೆದಿದೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಈ ಹುಟ್ಟು ಹಬ್ಬ ಆಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿದ್ದವು. ಹೀಗಾಗಿ ಹುಟ್ಟು ಹಬ್ಬ ಆಚರಣೆಯ ಚಿತ್ರೀಕರಿಸಿಕೊಂಡಿದ್ದ ಮೊಬೈಲ್ ಮೂಲ ಪತ್ತೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಅಲ್ಲದೆ ಈ ಪ್ರಕರಣದಲ್ಲಿ ಏಳು ಮಂದಿ ಸಿಬ್ಬಂದಿ ಕರ್ತವ್ಯಲೋಪ ಎಸಗಿರುವುದು ಖಚಿತವಾಗಿದೆ. ಇದರಲ್ಲಿ ಇಬ್ಬರನ್ನು ಅಮಾನತುಗೊಳಿಸಲಾಗಿದ್ದು, ಇನ್ನುಳಿದ ಸಹಾಯಕ ಅಧೀಕ್ಷಕ, ಇಬ್ಬರು ಜೈಲರ್‌ಗಳು ಹಾಗೂ ಸಹಾಯಕ ಜೈಲರ್‌ಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. ಡಿಐಜಿ ಪ್ರಾಥಮಿಕ ವಿಚಾರಣಾ ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಐಜಿಪಿ (ಕಾರಾಗೃಹ) ಪಿ.ವಿ.ಆನಂದ್ ರೆಡ್ಡಿ ತಿಳಿಸಿದ್ದಾರೆ.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ