ಲಂಚ ಪಡೆದ ಇಬ್ಬರು ತೆರಿಗೆ ವಸೂಲಿ ಸಹಾಯಕರಿಗೆ ಶಿಕ್ಷೆ

KannadaprabhaNewsNetwork | Published : Jul 10, 2024 12:39 AM

ಸಾರಾಂಶ

ತೆರಿಗೆ ವಸೂಲಿ ಸಹಾಯಕರಾದ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಹಾಗೂ ಪ್ರಕಾಶ ಕೃಷ್ಣ ನಾಯ್ಕ ಎಂಬವರೇ ಶಿಕ್ಷೆಗೊಳಗಾದ ಅಪರಾಧಿಗಳು.

ಕಾರವಾರ: ಮನೆಯ ಉತಾರ ಪತ್ರ ವಿತರಿಸಲು ಲಂಚ ಪಡೆದಿದ್ದ ಇಬ್ಬರು ತೆರಿಗೆ ವಸೂಲಿ ಸಹಾಯಕರಿಗೆ ಶಿಕ್ಷೆ ವಿಧಿಸಿ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ತೀರ್ಪು ನೀಡಿದ್ದಾರೆ.

ತೆರಿಗೆ ವಸೂಲಿ ಸಹಾಯಕರಾದ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಹಾಗೂ ಪ್ರಕಾಶ ಕೃಷ್ಣ ನಾಯ್ಕ ಎಂಬವರೇ ಶಿಕ್ಷೆಗೊಳಗಾಗಿದ್ದು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ- 1988ರ ಕಲಂ 7ರ ಅಡಿ 6 ತಿಂಗಳ ಸಾಧಾರಣ ಕಾರಾಗೃಹವಾಸ ಶಿಕ್ಷೆ ಹಾಗೂ ₹1,000 ದಂಡ ಮತ್ತು ಕಲಂ 13(2) ರಡಿಯಲ್ಲಿ 1 ವರ್ಷ ಸಾಧಾರಣ ಶಿಕ್ಷೆ ಹಾಗೂ ₹1,000 ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 1 ತಿಂಗಳು ಸಾಧಾರಣ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣ ಹಿನ್ನೆಲೆ: ಯಲ್ಲಾಪುರ ತಾಲೂಕಿನ ಉದ್ಯಮ ನಗರ ನಿವಾಸಿ ಮಂಜುನಾಥ ವಿಶ್ವೇಶ್ವರ ಹೆಗಡೆ ಅವರು ತಮ್ಮ ತಾಯಿಯವರ ಹೆಸರಿನಲ್ಲಿದ್ದ ಮನೆಗೆ ಹೊಸದಾಗಿ ವಿದ್ಯುತ್ ಸಂಪರ್ಕ ಅಳವಡಿಸಿಕೊಳ್ಳುವುದಕ್ಕಾಗಿ ಹೆಸ್ಕಾಂಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಮನೆಯ ಉತಾರ ಸಲ್ಲಿಸಬೇಕಾಗಿತ್ತು. ಯಲ್ಲಾಪುರ ಪಪಂ ಕಾರ್ಯಾಲಯದಲ್ಲಿ ಸಕಾಲದಡಿ ಮನೆಯ ಉತಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. 5 ದಿನ ಬಿಟ್ಟು ಪಪಂ ತೆರಿಗೆ ವಸೂಲಿ ಸಹಾಯಕ ಪ್ರಕಾಶ ಕೃಷ್ಣ ನಾಯ್ಕ ಅವರನ್ನು ಸಂಪರ್ಕಿಸಿದಾಗ, ಸೈಟ್ ನೋಡಿ ಉತಾರ ನೀಡಬೇಕಾಗುತ್ತದೆ ಹಾಗೂ ಚೀಫ್ ಆಫೀಸರ್ ಅವರ ಸಹಿ ಮಾಡಿಸಿ ಮರುದಿವಸ ಕೊಡುವುದಾಗಿ ತಿಳಿಸಿದ್ದಾರೆ. ಮಾರನೇ ದಿನ ತೆರಿಗೆ ವಸೂಲಿ ಸಹಾಯಕನನ್ನು ಭೇಟಿ ಮಾಡಿದಾಗ ಉತಾರ ಬೇಕಾದರೆ ಅಧಿಕಾರಿಗೆ ಹಣ ಕೊಡಬೇಕಾಗುತ್ತದೆ ಎಂದು ₹6000 ಲಂಚ ಕೇಳಿದ್ದರು.

₹4000 ಹಣ ಪಡೆಯಲು ಒಪ್ಪಿಕೊಂಡು, ಹಣವನ್ನು ಮತ್ತೊಬ್ಬ ತೆರಿಗೆ ವಸೂಲಿ ಸಹಾಯಕ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಅವರಿಗೆ ನೀಡಲು ತಿಳಿಸಿದ್ದು, ಅದರಂತೆ ಪ್ರತಾಪ ಲಂಚ ಪಡೆಯುವಾಗ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದರು. ಲೋಕಾಯುಕ್ತದ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮೀಕಾಂತ ಪ್ರಭು ವಾದ ಮಂಡಿಸಿದ್ದರು.

Share this article