ಆರೋಪಿಗಳಿಂದ ಒಟ್ಟು 65 ಗ್ರಾಂ ತೂಕದ ಚಿನ್ನದ ಆಭರಣಗಳು, 500 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಯಮಹಾ ಆರ್.ಎಕ್ಸ್. ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು ₹ 12 ಲಕ್ಷ ಎಂದು ಅಂದಾಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಾಗಡಿ
ಬೀಗ ಹಾಕಿದ ಮನೆಗಳು ಹಾಗೂ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನೋಜ್ ಕುಮಾರ್ ವಿ. (24), ಬಾಲಾಜಿ ಲೇಔಟ್, ಸಿಂಗನಾಯಕನಹಳ್ಳಿ, ಯಲಹಂಕ, ಬೆಂಗಳೂರು ಹಾಗೂ
ಚಂದನ್ ಗೌಡ (21), ವೃಷಭಾವತಿ ನಗರ, ಕಾಮಾಕ್ಷಿಪಾಳ್ಯ, ಬೆಂಗಳೂರು ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಕರಣದ ಹಿನ್ನೆಲೆ:
ಸೆ. 30 ರಂದು ರಾತ್ರಿ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜೋಡಗಟ್ಟೆ ಗ್ರಾಮದಲ್ಲಿ ನಿವಾಸಿಗಳು ಪಕ್ಕದ ಮನೆಯಲ್ಲಿ ಮಲಗಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ ಒಡವೆ ಹಾಗೂ ನಗದನ್ನು ಕಳವು ಮಾಡಿದ್ದರು. ಈ ಸಂಬಂಧ ಅ.01 ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಆರೋಪಿಗಳು ಬೀಗ ಹಾಕಿರುವ ಮನೆಗಳು ಹಾಗೂ ಜನರಿಲ್ಲದ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು. ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗಳು ಜೋಡಗಟ್ಟೆ ಗ್ರಾಮದ ಮನೆ ಕಳವು ಪ್ರಕರಣದ ಜೊತೆಗೆ ಹೇಳಿಗೆಹಳ್ಳಿ ಗ್ರಾಮದ ಶ್ರೀಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಶ್ರೀಮಾರಮ್ಮ ದೇವಿ ದೇವಸ್ಥಾನಗಳಲ್ಲಿ ಹುಂಡಿ ಹಣ ಮತ್ತು ಆಭರಣಗಳನ್ನು ಕಳವು ಮಾಡಿರುವುದು, ಮಾಗಡಿ ಟೌನ್ ತಿರುಮಲೆಯಲ್ಲಿ ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು ಬೆಳ್ಳಿಯ ಒಡವೆಗಳನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಒಟ್ಟು 65 ಗ್ರಾಂ ತೂಕದ ಚಿನ್ನದ ಆಭರಣಗಳು, 500 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಯಮಹಾ ಆರ್.ಎಕ್ಸ್. ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು ₹ 12 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಮೂಲಕ 2 ಮನೆಗಳ್ಳತನ ಹಾಗೂ 1 ದೇವಸ್ಥಾನ ಕಳ್ಳತನ ಸೇರಿ ಒಟ್ಟು 3 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ಪೊಲೀಸ್ ತಂಡಕ್ಕೆ ಶ್ಲಾಘನೆ:
ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ಮಾಗಡಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಟಿ. ಶ್ರೀನಿವಾಸ್, ಪಿ.ಎಸ್.ಐ ಮನೋಜ್ ಎಸ್. ಹಾಗೂ ಸಿಬ್ಬಂದಿ ಬೀರಪ್ಪ ಬಿ., ಪ್ರಮೋದ ಎಂ.ಕೆ., ಮುನೀಂದ್ರ ಡಿ.ಎಂ., ಬಸವರಾಜ, ಶ್ರೀನಿವಾಸ ವಿ. ಮತ್ತು ಮಹದೇವ್ ಅವರ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ್ (ಐ.ಪಿ.ಎಸ್) ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೇಂದ್ರ ಡಿ.ಎಸ್ ಶ್ಲಾಘಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.