ಭರಮಸಮುದ್ರದಲ್ಲಿ ಘಟನೆ । ಬಿಸಿಲ ತಾಪ ತಣಿಸಲು ನೀರಿಗಿಳಿದಿದ್ದ ಐವರಲ್ಲಿ ಇಬ್ಬರು ನೀರುಪಾಲು
ತಾಲೂಕಿನ ಭರಮಸಮುದ್ರ ಕೆರೆಯಲ್ಲಿ ಈಜಲು ಹೋಗಿದ್ದ ಐವರಲ್ಲಿ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಬೇಸಿಗೆ ರಜೆ ಹಿನ್ನೆಲೆ ಬಿಸಿಲು ಹೆಚ್ಚಾಗಿರುವ ಕಾರಣ ತಾಪ ತಣಿಸಲು ಈಜಲು ಹೋಗಿದ್ದ ಭರಮಸಮುದ್ರ ಗ್ರಾಮದ ಬಸವರಾಜ್, ರೇಣುಕಮ್ಮ ಪುತ್ರ ಅಜ್ಜಯ್ (೧೮), ತಿಪ್ಪೇಸ್ವಾಮಿ, ಮಂಜುಳಾ ದಂಪತಿ ಪುತ್ರ ಓಬಳೇಶ್ (೨೦) ನೀರುಪಾಲಾಗಿದ್ದಾರೆ.ಕಳೆದ ವರ್ಷ ಸುರಿದ ಭಾರಿ ಮಳೆ ಮತ್ತು ೫೭ ಕೆರೆ ತುಂಬಿಸುವ ಯೋಜನೆಯಿಂದ ಭರ್ತಿಯಾಗಿದ್ದ ದೊಡ್ಡ ಕೆರೆಯಲ್ಲಿ ಸಾಕಷ್ಟು ನೀರು ತುಂಬಿತ್ತು. ಇತ್ತೀಚೆಗೆ ಅಜ್ಜಯ್ಯ ಪಿಯುಸಿ ಪರೀಕ್ಷೆ ಮುಗಿಸಿದ್ದ. ಓಬಳೇಶ್ ಬೆಂಗಳೂರಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಸ್ನೇಹಿತರು ಗ್ರಾಮದ ಇತರ ಮೂವರು ಸ್ನೇಹಿರೊಂದಿಗೆ ಸೇರಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದಾರೆ. ಮೃತ ಓಬಳೇಶ್‌ಗೆ ಈಜು ಬರುತ್ತಿರಲಿಲ್ಲ. ಆಳವಾದ ಗುಂಡಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಇದ್ದ ಕಾರಣ ಆತ ಮುಳುಗಿದ್ದಾನೆ. ಓಬಳೇಶ್‌ನನ್ನು ರಕ್ಷಿಸಲು ಹೋದ ಅಜ್ಜಯ್ಯ ಸಹ ನೀರಿನಲ್ಲಿ ಮುಳುಗಿದ್ದಾನೆ. ಉಳಿದ ಮೂರು ಜನ ಯುವಕರು ನೀರಿನಿಂದ ಹೊರ ಬಂದು ಕೂಗಿಕೊಂಡಿದ್ದಾರೆ. ಅಷ್ಟರಲ್ಲಾಗಲೇ ಇಬ್ಬರೂ ಮುಳುಗಿದ್ದರು. ತಕ್ಷಣ ಸ್ಥಳೀಯರು ರಕ್ಷಣೆಗೆ ಬಂದರೂ ಯುವಕರು ಕಾಣದ ಹಿನ್ನೆಲೆ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದರು.
ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟುತ್ತು. ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಸವರಾಜ್ ಪ್ರಕರಣ ದಾಖಲಿಸಿದ್ದಾರೆ. ಮೃತದೇಹಗಳನ್ನು ಜಗಳೂರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಸಂಬಂಧಿಕರು ತಿಳಿಸಿದರು.
ಜಾಗೃತಿ ಫಲಕ ಇದ್ದರೂ ನಿರ್ಲಕ್ಷ್ಯ