ತ್ಯಾಗರ್ತಿ ಗ್ರಾಪಂ ಅಧ್ಯಕ್ಷರಿಂದ ಗಾಂವ್‍ ಠಾಣಾ ಸ್ಥಳ ಅತಿಕ್ರಮಣ ಆರೋಪ

KannadaprabhaNewsNetwork | Published : Apr 24, 2025 12:05 AM

ಸಾರಾಂಶ

ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡವಳ್ಳಿ ಗ್ರಾಮದಲ್ಲಿ ಗಾಂವ್‍ ಠಾಣಾ ಜಾಗವನ್ನು ತ್ಯಾಗರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಬಳಿಸಿದ್ದಾರೆಂದು ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸದಸ್ಯರು ಬುಧವಾರ ತ್ಯಾಗರ್ತಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನೆಡೆಸಿದರು.

ನಾರಾಯಣ ಗುರು ಸಂಘ ಧರಣಿ । ಕ್ರಮಕ್ಕೆ ಆಗ್ರಹ

ತ್ಯಾಗರ್ತಿ: ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡವಳ್ಳಿ ಗ್ರಾಮದಲ್ಲಿ ಗಾಂವ್‍ ಠಾಣಾ ಜಾಗವನ್ನು ತ್ಯಾಗರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಬಳಿಸಿದ್ದಾರೆಂದು ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸದಸ್ಯರು ಬುಧವಾರ ತ್ಯಾಗರ್ತಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನೆಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ರವೀಂದ್ರ, ಹಲವು ವರ್ಷಗಳಿಂದ ಗ್ರಾಮದಲ್ಲಿನ 35.06 ಎಕರೆ ವಿಸ್ತೀರ್ಣದ ಗಾಂವ್‍ ಠಾಣಾ ಜಾಗವನ್ನು ತ್ಯಾಗರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಲೋಕಪ್ಪ ಹಾಗೂ ಇವರ ಕುಟುಂಬದವರು ಅತಿಕ್ರಮಿಸಿಕೊಂಡಿದ್ದಾರೆ. ಈ ಜಾಗದಲ್ಲಿ ಪುರಾತನ ಕಾಲದ 9 ದೇವಾಲಯಗಳಿದ್ದು ಈ ಜಾಗವನ್ನು ಗ್ರಾಮದ ಒಳಿತಿಗಾಗಿ, ಶಾಲಾ ಕಟ್ಟಡ, ಆಸ್ಪತ್ರೆ, ಹಲವಾರು ಸಾರ್ವಜನಿಕ ಅನುಕೂಲಕ್ಕಾಗಿ ಮೀಸಲಾಗಿಡಬೇಕೆಂದು 2015ರಿಂದ ಹೋರಾಟ ನೆಡೆಸುತ್ತ ಬಂದಿದ್ದರೂ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಕಾನೂನುಗಳನ್ನು ಗಾಳಿಗೆ ತೂರಿ ಪ್ರಭಾವತಿ ಲೋಕಪ್ಪ ಕುಟುಂಬಕ್ಕೆ ಮಂಜೂರು ಮಾಡಿರುತ್ತಾರೆ ಎಂದು ದೂರಿದರು.

ಗಾಂವ್‍ ಠಾಣಾ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕೇ ಹೊರತು ಕೃಷಿ ಚಟುವಟಿಕೆಗೆ ಉಪಯೋಗಿಸುವಂತಿಲ್ಲ. ಈ ಬಗ್ಗೆ ಡಿಸಿ, ಎಸಿ, ಸಿಎಸ್, ಸಾಗರ ತಹಸೀಲ್ದಾರರಿಗೆ ಮನವಿ ನೀಡಿದ್ದರೂ ಸಹ ಮಂಜೂರಾತಿ ನೀಡಿದ್ದಾರೆ. ಕೂಡಲೇ ಈ ಜಾಗವನ್ನು ತೆರವುಗೊಳಿಸಿ ದೇವಸ್ಥಾನದ ಕಾರ್ಯಕ್ರಮಗಳನ್ನು ನೆಡೆಸಲು ಹಾಗೂ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಿಗೆ ಸಹಕಾರಿಯಾಗಬೇಕೆಂದು ಆಗ್ರಹಿಸಿದರು.

ಕೂಡಲೇ ನಮ್ಮ ಮನವಿಯನ್ನು ಮನ್ನಿಸಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಗ್ರಾಮದ ಹಿತ ಕಾಪಾಡದಿದ್ದರೆ ಉಗ್ರ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷರಾದ ರಾಮಚಂದ್ರ.ಬಿ, ಸದಸ್ಯರಾದ ವಿರೂಪಾಕ್ಷಪ್ಪ ಎಚ್.ಎಂ., ಬಸವರಾಜ್ ಎಸ್., ಮಂಜಪ್ಪ.ಕೆ.ಎಚ್, ಮಂಜಪ್ಪ ಭಂಗಿ, ಕೃಷ್ಣಪ್ಪ ಗಾಳಿ, ರಾಜು.ಜೆ, ಟೀಕಪ್ಪ, ಮಾಣಿಕ್ಯ ವಿಜಯ, ನಾಡವಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

Share this article