ಕನ್ನಡಪ್ರಭ ವಾರ್ತೆ ದುಬೈ:
ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಸುರಕ್ಷಿತವಾಗಿದ್ದು, ಇಲ್ಲಿನ ಸರ್ಕಾರ ಎಲ್ಲ ಅನಿವಾಸಿ ಕನ್ನಡಿಗರ ಸುರಕ್ಷತೆಯನ್ನು ಸಮರ್ಪಕವಾಗಿ ಕಾಪಾಡುತ್ತಿದೆ. ಯಾರೂ ಯಾವುದೇ ಆತಂಕಕ್ಕೆ ಒಳಗಾಗದೆ, ಅನಧಿಕೃತ ಅಥವಾ ಅಪಪ್ರಚಾರದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಹಂಚಿಕೊಳ್ಳಬಾರದು ಎಂದು ಯುಎಇಯ ಅನಿವಾಸಿ ಕನ್ನಡಿಗರಿಗೆ ಕರ್ನಾಟಕ ಎನ್ಆರ್‌ಐ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕರೆ ನೀಡಿದರು.
ಯುಎಇ ಅತ್ಯಂತ ಸುರಕ್ಷಿತ ದೇಶ. ಪರಿಸ್ಥಿತಿ ಶೀಘ್ರದಲ್ಲೇ ಮೊದಲಿನಂತೆ ಆಗುತ್ತದೆ. ಎಲ್ಲರೂ ಯುಎಇ ಸರ್ಕಾರದ ಮಾರ್ಗದರ್ಶನ ಪಾಲಿಸಿ, ಸಹಕರಿಸಬೇಕು. ಈಗ ಸಂಕಷ್ಟದಲ್ಲಿರುವ ಪ್ರವಾಸಿಗರ ತುರ್ತು ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ವೆಚ್ಚವನ್ನು ಭರಿಸಲು ನಾನು ತಯಾರಿದ್ದೇನೆ. ಅದೇ ರೀತಿ ಕರ್ನಾಟಕ ಸರ್ಕಾರಕ್ಕೆ ಕೂಡ ತುರ್ತು ಪರಿಹಾರದ ಸಹಾಯಧನ ಘೋಷಣೆ ಮಾಡಲು ಒತ್ತಾಯಿಸುತ್ತೇನೆ ಎಂದು ರೊನಾಲ್ಡ್ ಕೊಲಸೋ ಹೇಳಿದರು.ಪ್ರಸ್ತುತ ದುಬೈನಲ್ಲಿ ಸಿಲುಕಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಪರಿಸ್ಥಿತಿ ಬೇಗನೆ ತಿಳಿಯಾಗಲಿದೆ. ಸಂಕಷ್ಟದಲ್ಲಿರುವ ಪ್ರವಾಸಿ ಕನ್ನಡಿಗರಿಗೆ ಸಹಾಯ ಹಸ್ತವಾಗಿ 2 ಕೋಟಿ ರು.ಗಳ ತುರ್ತು ಪರಿಹಾರ ಘೋಷಿಸಿ ಎಂದು ಸಚಿವ ಕೃಷ್ಣ ಭೈರೇಗೌಡ ಅವರಿಗೆ ಒತ್ತಾಯಿಸಿದ್ದೇವೆ. ಅವರು ಮುಖ್ಯಮಂತ್ರಿ ಜೊತೆ ಕೂಡಲೇ ಮಾತನಾಡಿ ಪರಿಹಾರ ಘೋಷಿಸುವ ಭರವಸೆ ನೀಡಿದ್ದಾರೆ ಎಂದರು.
ಸಂಕಷ್ಟದಲ್ಲಿದ್ದ ಹಲವಾರು ಪ್ರವಾಸಿ ಕನ್ನಡಿಗರನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ತಾಯ್ನಾಡಿಗೆ ವಾಪಸ್ ತೆರಳದೇ ಇಲ್ಲಿಯೇ ಸಿಲುಕಿರುವ ಕನ್ನಡಿಗರಿಗೆ ಯಾವುದೇ ವೈದ್ಯಕೀಯ ಸೇವೆ ಬೇಕಿದ್ದಲ್ಲಿ ಕನ್ನಡಿಗಾಸ್ ಹೆಲ್ಪ್‌ಲೈನ್ ಸಂಪೂರ್ಣವಾಗಿ ಸಹಾಯ ಮಾಡಲಿದೆ ಎಂದು ಕನ್ನಡಿಗಾಸ್ ಹೆಲ್ಪ್‌ಲೈನ್ ಸಂಯೋಜಕರು, ಬಿಸಿಸಿಐ ಯುಎಇ ಅಧ್ಯಕ್ಷರಾದ ಹಿದಾಯತ್ ಅಡ್ಡೂರು ತಿಳಿಸಿದರು.
ಯುಎಇಯಲ್ಲಿ ಸಿಲುಕಿರುವ ಕನ್ನಡಿಗರು ಕನ್ನಡಿಗಾಸ್ ಹೆಲ್ಪ್‌ಲೈನ್ ತಂಡವನ್ನು ಸಂಪರ್ಕಿಸಿ. ನೀವು ದುಬೈ, ಶಾರ್ಜಾ, ಅಬುಧಾಬಿ, ಅಜ್ಮಾನ್ ಎಲ್ಲೇ ಇದ್ದರೂ ನಮ್ಮ ತಂಡ ನಿಮ್ಮನ್ನು ಸಂಪರ್ಕಿಸಿ, ಸಹಕರಿಸಲಿದೆ. ಈಗಾಗಲೇ ಈ ಕೆಲಸದಲ್ಲಿ ನಿರತವಾಗಿದೆ ಎಂದು ಕರ್ನಾಟಕ ಸಂಘದ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ ತಿಳಿಸಿದರು.ಸಭೆಯಲ್ಲಿ ಹೆಲ್ಪ್‌ಲೈನ್ ತಂಡದ ದಯಾ ಕಿರೋಡಿಯನ್, ಚಂದ್ರು ಲಿಂಗದಳ್ಳಿ, ಮಲ್ಲಿಕಾರ್ಜುನ ಗೌಡ, ಇಮ್ರಾನ್ ಖಾನ್, ಶ್ವೇತಾ ಜಾಧವ್, ಮನೋಹರ್ ಹೆಗ್ಡೆ, ನಾಗರಾಜ ರಾವ್, ಸಮದ್ ಬಿರಾಲಿ, ಸಲೀಂ ಮೂಡಬಿದ್ರೆ, ಸಂಶುದ್ದೀನ್ ಪಿಲಿಗೂಡು, ರಾಕ್ ಕರ್ನಾಟಕ ಸಂಘದ ಅಧ್ಯಕ್ಷ ರಮೇಶ್ ರಂಗಪ್ಪ, ಕನ್ನಡ ಪಾಠಶಾಲೆ ದುಬೈಯ ಗಿರೀಶ್ ವೊರಟೆ, ಗಿರೀಶ್ ಪಟ್ವಾರಿ, ಗವಾಸ್ಕರ್, ಸಿದ್ಧಲಿಂಗೇಶ್, ರೂಪ ಶಶಿಧರ್, ಫಿರೋಜ್ ಉಪಸ್ಥಿತರಿದ್ದರು.‘ಕನ್ನಡಿಗಾಸ್ ಹೆಲ್ಪ್‌ಲೈನ್’ ದೂರವಾಣಿ ಸಂಖ್ಯೆಗಳು
--ಹಿದಾಯತ್ ಅಡ್ಡೂರು +971 55 111 8555
ಶಶಿಧರ ನಾಗರಾಜಪ್ಪ +971 50 625 1366ದಯಾ ಕಿರೋಡಿಯನ್ +97150 785 5649
ಮಲ್ಲಿಕಾರ್ಜುನ ಗೌಡ +971 50 243 3263ಸಮದ್ ಬಿರಾಲಿ +971 55 354 0287
ಮನೋಹರ್ ಹೆಗ್ಡೆ +971 55 548 5003