ಚಿತ್ರದುರ್ಗ: ಕೋಟೆನಾಡಿನ ಪ್ರಮುಖ ಶಕ್ತಿ ದೇವತೆ ದೊಡ್ಡಪೇಟೆಯ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯವರ ಜಾತ್ರಾ ಮಹೋತ್ಸವಕ್ಕೆ ದೇವಿಗೆ ಕಂಕಣಧಾರಣೆಯೊಂದಿಗೆ ಶನಿವಾರ ಚಾಲನೆ ನೀಡಲಾಯಿತು.ಒಂದು ವಾರಗಳ ಕಾಲ ನಡೆಯುವ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬೆಳಗಿನಜಾವ ದೇವಿಯ ಮೂರ್ತಿಗೆ ಅಭಿಷೇಕ ನೆರವೇರಿಸಿದ ಬಳಿಕ ಕಂಕಣಧಾರಣೆ, ಮದುವಣಗಿತ್ತಿ ಶಾಸ್ತ್ರ ಸೇರಿದಂತೆ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ಈ ವೇಳೆ ನೆರೆದಿದ್ದ ಭಕ್ತರು ಉದೋ, ಉದೋ ಎಂಬ ಉದ್ಘಾರ ಘೋಷಗಳನ್ನು ಮೊಳಗಿಸಿದರು. ಕಂಕಣಧಾರಣೆ ಮದುವಣಗಿತ್ತಿ ಶಾಸ್ತ್ರದ ಪ್ರಯುಕ್ತ ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗಳನ್ನು ಹೊಂಬಾಳೆ, ಗುಲಾಬಿ, ಸಂಪಿಗೆ, ಮಲ್ಲಿಗೆ, ಕನಕಾಂಬರ, ಚೆಂಡು, ಪತ್ರೆ ಸೇರಿದಂತೆ ಬಗೆ ಬಗೆಯ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ನಿಂಬೆಹಣ್ಣಿನ ಹಾರ, ದ್ರಾಕ್ಷಿ ಸೇರಿದಂತೆ ಮತ್ತಿತರ ಹಣ್ಣುಗಳಿಂದ ಸಿಂಗಾರ ಮಾಡಲಾಗಿತ್ತು. ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಆನಂತರ ನಡೆದ ಅನ್ನಸಂತರ್ಪಣೆಯಲ್ಲಿ ಭಕ್ತರು ಪಾಯಸ, ಪಲ್ಯ, ಅನ್ನ ಸಾಂಬಾರು ಸವಿದರು.
ಮೇ.9ರ ಬೆಳಗ್ಗೆ 8ಕ್ಕೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ, ಬಳಿಕ ನಗರದ ರಾಜ ಬೀದಿಗಳಲ್ಲಿ ನಾನಾ ಜಾನಪದ ಕಲಾ ಮೇಳಗಳೊಂದಿಗೆ ಹೂವಿನ ಉಚ್ಚಾಯ ರಥೋತ್ಸವ ನೆರವೇರಲಿದೆ.ಸಿಡಿ ಉತ್ಸವ:
ಮೇ.10ರ ಮಧ್ಯಾಹ್ನ 12ಕ್ಕೆ ದೇವಿಗೆ ವಿಶೇಷ ಭಂಡಾರದ ಪೂಜೆ ನಂತರ ಪ್ರಸಾದ ವಿನಿಯೋಗ, ಸಂಜೆ 6ಕ್ಕೆ ದೇವಸ್ಥಾನದ ಮುಂಭಾಗ ಸಿಡಿ ಉತ್ಸವ ಜರುಗಲಿದ್ದು, ಹರಕೆ ಹೊತ್ತ ಮಹಾ ಭಕ್ತರಿಂದ ಸಿಡಿ ಸೇವೆ ನಡೆಯಲಿದೆ. ಮೇ.11ರ ಬೆಳಗ್ಗೆ 8ಕ್ಕೆ ಅಭಿಷೇಕ, ಮಹಾಮಂಗಳಾರತಿ, ರಾತ್ರಿ 9ಕ್ಕೆ ದೇವಿಯ ಮಹಾ ಭಕ್ತರಾದ ಜೋಗಪ್ಪ ಮತ್ತು ಜೋಗಮ್ಮನವರಿಂದ ಓಕುಳಿ ಸೇವೆ ಜರುಗಲಿದೆ. ಮೇ.13ರ ಬೆಳಗ್ಗೆ 8ಕ್ಕೆ ದೇವಿಗೆ ಅಭಿಷೇಕ, ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.