ಕನ್ನಡಪ್ರಭವಾರ್ತೆ ಕಾರ್ಕಳ
ಪರಶುರಾಮ ಥೀಮ್ ಪಾರ್ಕ್ ಉದ್ದೇಶಿತ ಯೋಜನೆಯಂತೆ ಕಂಚಿನ ಪರಶುರಾಮ ಪ್ರತಿಮೆ ನಿರ್ಮಾಣವಾಗಿ ದೇಶದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಬೇಕಿತ್ತು. ಆದರೆ ಕೇವಲ ಚುನಾವಣಾ ಲಾಭದ ದೃಷ್ಟಿಯಿಂದ ಕಂಚಿನ ಬದಲಿಗೆ ನಕಲಿ ಪ್ರತಿಮೆ ನಿರ್ಮಿಸಿ ಜನತೆಗೆ ಮೋಸ ಮಾಡಲಾಗಿದೆ. ಇದರ ಪರಿಣಾಮವಾಗಿ ಇಂದು ಥೀಮ್ ಪಾರ್ಕ್ ಪದೇಪದೇ ಕಳ್ಳತನ ಹಾಗೂ ವಿವಾದಗಳ ಕೇಂದ್ರವಾಗುತ್ತಿದೆ. ಜಿಲ್ಲಾಡಳಿತ ತಕ್ಷಣವೇ ಸೂಕ್ತ ಭದ್ರತೆ ಒದಗಿಸಿ ಅಲ್ಲಿನ ಸೊತ್ತುಗಳನ್ನು ರಕ್ಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.ಈ ಬಗ್ಗೆ ಶಾಸಕ ವಿ. ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, ಥೀಮ್ ಪಾರ್ಕ್ ಮೇಲ್ಛಾವಣಿ ಕದ್ದವರು ಕಾಂಗ್ರೆಸ್‌ನವರೇ ಎಂದು ಆರೋಪಿಸಿದ್ದಾರೆ.
ಕಳ್ಳತನ ಪ್ರಕರಣವನ್ನು ಭೇದಿಸಿದ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಧನ್ಯವಾದ ಸಲ್ಲಿಸಿದ ಅವರು, ಪರಶುರಾಮ ಸೃಷ್ಟಿ ಎಂದು ಹೆಸರಾದ ಕರಾವಳಿಯಲ್ಲಿ ಪರಶುರಾಮನ ಹೆಜ್ಜೆಗುರುತುಗಳೇ ಇರಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಥೀಮ್ ಪಾರ್ಕ್ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿತು. ಈಗ ಅವರ ಮತಬ್ಯಾಂಕ್‌ನ ಪುಂಡರು ಕಳ್ಳತನ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್‌ನ ಹಿಂದು ವಿರೋಧಿ ಭಾವನೆಯೇ ಇಂತಹ ಕೃತ್ಯಗಳಿಗೆ ಕಾರಣ ಎಂದು ಆರೋಪಿಸಿದ ಸುನೀಲ್ ಕುಮಾರ್, ಇದು ಕೇವಲ ರಾಜಕೀಯ ತಪ್ಪಲ್ಲ, ಪ್ರವಾಸೋದ್ಯಮಕ್ಕೂ ಭಾರಿ ಹಾನಿ ತಂದಿದೆ. ಈ ತಪ್ಪಿನ ಪರಿಣಾಮ ಮುಂದಿನ ಚುನಾವಣೆಯವರೆಗೆ ಮಾತ್ರವಲ್ಲ, ಶತಶತಮಾನಗಳವರೆಗೂ ಉಳಿಯಲಿದೆ ಎಂದು ಅವರು ಹೇಳಿದರು.ಪರಶುರಾಮ ಥೀಮ್ ಪಾರ್ಕ್ ಕಳ್ಳತನ ಪ್ರಕರಣ ಕಾನೂನು ಕ್ರಮದ ಜೊತೆಗೆ ರಾಜಕೀಯ ಆರೋಪ ಪ್ರತ್ಯಾರೋಪಗಳ ಕೇಂದ್ರಬಿಂದುವಾಗಿದೆ.