ಉಡುಪಿ: ಈಶ ಯೋಗ ಕೇಂದ್ರದ ವತಿಯಿಂದ ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿ 70 ದಿನಗಳಲ್ಲಿ 1000 ಕಿ.ಮೀ. ಗೂ ಅಧಿಕ ಉದ್ದದ ತೀರ್ಥಯಾತ್ರೆ ನಡೆಸಲಿರುವ ಆದಿಯೋಗಿ ರಥಯಾತ್ರೆಗೆ ಉಡುಪಿ ರಥಬೀದಿಯಲ್ಲಿ ಪರ್ಯಾಯ ಪುತ್ತಿಗೆಮಠದ ಶ್ರೀ ಸುಗುಣೇಂದ್ರತೀರ್ಥ ಚಾಲನೆ ನೀಡಿದರು.ಉಡುಪಿಯಿಂದ ಹೊರಟಿರುವ ಈ ರಥವು ವೈಭವಯುತ ಮಹಾಶಿವರಾತ್ರಿ ಹಬ್ಬಕ್ಕೂ ಮುನ್ನ, ಫೆ, 13ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಬಳಿ ಇರುವ ಭವ್ಯ ಆದಿಯೋಗಿ ಮೂರ್ತಿಯ ಬಳಿ ಪೂರ್ಣಗೊಳ್ಳಲಿದೆ.ಈ ರಥ ಜಿಲ್ಲೆಯಾದ್ಯಂತ ಸಂಚಾರ ನಡೆಸಿ, 12ರಂದು ಮಂಗಳೂರಿಗೆ ತಲುಪಲಿದ್ದು, ಅಲ್ಲಿಂದ ಪುತ್ತೂರು, ಸುಳ್ಯ, ಮಡಿಕೇರಿ, ಬೆಟ್ಟದಪುರ, ಕೆ.ಆರ್. ನಗರ, ಮೈಸೂರು, ಸದ್ಗುರು ಸನ್ನಿಧಿ (ಚಿಕ್ಕಬಳ್ಳಾಪುರ), ಹೊಸಕೋಟೆ, ಮಾಲೂರು, ರಾಯಕೋಟೆ ಮತ್ತು ಅವಿನಾಶಿ ಸೇರಿದಂತೆ ಪ್ರಮುಖ ಪಟ್ಟಣಗಳ ಮೂಲಕ ಪ್ರಯಾಣಿಸಿ, ಈಶ ಯೋಗ ಕೇಂದ್ರವು ನೆಲೆಸಿರುವ ವೆಳ್ಳಿಯಂಗಿರಿ ಪರ್ವತದ ತಪ್ಪಲನ್ನು ತಲುಪಲಿದೆ.ಅರ್ಪಣೆಯ ಮನೋಭಾವಕ್ಕೆ ಅನುಗುಣವಾಗಿ, ಶಿವಾಂಗ ಸಾಧಕರು ಮತ್ತು ಭಕ್ತರು ಆದಿಯೋಗಿ ರಥವನ್ನು ಎಳೆಯುತ್ತಾ ಮುಂದೊಯ್ಯುತ್ತಾರೆ, ಸ್ವತಃ ಸದ್ಗುರುಗಳು ವಿನ್ಯಾಸಗೊಳಿಸಿರುವ ಈ ಶಕ್ತಿಯುತ ಆಧ್ಯಾತ್ಮಿಕ ಯಾತ್ರೆಯನ್ನು ಅತ್ಯಂತ ಶಿಸ್ತುಬದ್ಧ, ಭಕ್ತಿಪೂರ್ವಕ ಭಾಗವಹಿಸುವಿಕೆಯೊಂದಿಗೆ ನಡೆಯಲು ವ್ಯವಸ್ಥೆ ಮಾಡಲಾಗಿದೆ. ಆದಿಯೋಗಿಯ ಸಾನ್ನಿಧ್ಯವನ್ನು ಹೊತ್ತ ರಥವು ಪ್ರತಿ ಜಿಲ್ಲೆಯಲ್ಲಿ ಮೆರವಣಿಗೆಗಳು, ಅರ್ಪಣೆಗಳು, ಸ್ತೋತ್ರಪಠಣ ಮತ್ತು ಸಮುದಾಯ ಸಭೆಗಳೊಂದಿಗೆ ನಡೆಯಲಿದೆ.