ಉಡುಪಿ: ಬುದ್ಧನಜಡ್ಡು, ಅವಲಕ್ಕಿಪಾರೆಗಳಲ್ಲಿನ ಗೀರುಚಿತ್ರಗಳ ಅಧ್ಯಯನ

KannadaprabhaNewsNetwork | Published : Mar 25, 2024 12:51 AM

ಸಾರಾಂಶ

ಸುಮಾರು ಕ್ರಿಸ್ತ ಪೂರ್ವ ೬೦೦೦ ವರ್ಷಗಳಿಂದ ೩೫೦೦ ವರ್ಷಗಳಷ್ಟು ಪುರಾತನವೆನಿಸಿರುವ ಈ ಗೀರು ಚಿತ್ರಗಳ ಬಗೆಗಿನ ಕಥೆಗಳು ಹಾಗೂ ಅದರ ಸುತ್ತಲಿನ ನಂಬಿಕೆಗಳೇ ಮುಂತಾಗಿ ಮಾಹಿತಿಯನ್ನು ಸ್ಥಳೀಯರಾದ ಎಂಜಿನಿಯರ್ ಮುರುಳೀಧರ ಹೆಗ್ಡೆ ಅವರು ವಿವರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಹಾವಂಜೆಯ ಭಾವನಾ ಪ್ರತಿಷ್ಠಾನ ಹಾಗೂ ಭಾಸ ಗ್ಯಾಲರಿ - ಸ್ಟುಡಿಯೊ ಆಯೋಜಿಸಿದ್ದ ಪುರಾತತ್ವದೊಂದಿಗಿನ ಸಂಬಂಧ ಸರಣಿ ಕಾರ್ಯಕ್ರಮವು (ಏನ್ಸಸ್ಟ್ರಲ್ ಅಫೇರ್ಸ್) ಉಡುಪಿ ಜಿಲ್ಲೆಯ ಐತಿಹಾಸಿಕ ನೆಲೆಗಳಾದ ಬುದ್ಧನಜಡ್ಡು ಹಾಗೂ ಅವಲಕ್ಕಿಪಾರೆಗಳಲ್ಲಿ ಇತ್ತೀಚೆಗೆ ನಡೆಯಿತು.

ನಮ್ಮ ನಡುವಿನ ಇತಿಹಾಸ, ಕಲೆ ಹಾಗೂ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವ ಈ ಸರಣಿ ಕಾರ್ಯಕ್ರಮದಲ್ಲಿ ಈ ಪುರಾತನ ಇತಿಹಾಸ ಕಾಲದ ನೆಲೆಗಳಲ್ಲಿನ ಗೀರು ರೇಖಾಚಿತ್ರಗಳು, ಸಂಬಂಧಿಸಿದ ಐತಿಹ್ಯಗಳ ಜೊತೆಗೆ ಐತಿಹಾಸಿಕ ಸ್ಥಳ ಹಾಗೂ ವಸ್ತುಗಳ ಅಧ್ಯಯನ ಮತ್ತು ದಾಖಲಾತಿಗಳನ್ನು ಒಳಗೊಂಡಿತ್ತು.

ಸುಮಾರು ಕ್ರಿಸ್ತ ಪೂರ್ವ ೬೦೦೦ ವರ್ಷಗಳಿಂದ ೩೫೦೦ ವರ್ಷಗಳಷ್ಟು ಪುರಾತನವೆನಿಸಿರುವ ಈ ಗೀರು ಚಿತ್ರಗಳ ಬಗೆಗಿನ ಕಥೆಗಳು ಹಾಗೂ ಅದರ ಸುತ್ತಲಿನ ನಂಬಿಕೆಗಳೇ ಮುಂತಾಗಿ ಮಾಹಿತಿಯನ್ನು ಸ್ಥಳೀಯರಾದ ಎಂಜಿನಿಯರ್ ಮುರುಳೀಧರ ಹೆಗ್ಡೆ ಅವರು ವಿವರಿಸಿದರು. ನಮ್ಮ ಕರಾವಳಿಯ ಭಾಗದ ಬಹು ಅಪರೂಪದ್ದೆನಿಸುವ ಈ ಚಿತ್ರಗಳ ಬಗೆಗೆ ಈ ಹಿಂದೆ ಶಿರ್ವ ಕಾಲೇಜಿನ ಪುರಾತತ್ವ ತಂಡವು ಅಧ್ಯಯನ ನಡೆಸಿತ್ತಲ್ಲದೇ ಜಾಗೃತಿ ಕಾರ್ಯಕ್ರಮ ಹಾಗೂ ಸೆಮಿನಾರ್ ನಡೆಸಿದ್ದ ಬಗೆಗೆ ಮಾಹಿತಿಯಿತ್ತರು.

ಸಾಮಾನ್ಯವಾಗಿ ಈ ಚಿತ್ರಗಳಲ್ಲಿ ಕಾಣುವ ಅಭಿವ್ಯಕ್ತಿಗಳು ಭಾರತದ ಕೊಂಕಣ ಕರಾವಳಿಯ ಇತರೆಡೆಯಲ್ಲಿಯ ಚಿತ್ರಗಳಂತೆಯೇ ಇರುವುದಲ್ಲದೇ ಬೇಟೆಯ ಸನ್ನಿವೇಶಗಳು, ಮಾನವರ ಚಿತ್ರಗಳು, ಪ್ರಾಣಿ ಪಕ್ಷಿಗಳೇ ಮೊದಲಾಗಿ ಮರಗಿಡಗಳ ಸ್ಥೂಲ ರೂಪದ ಕಲ್ಪನೆಗಳ ಬಗೆಗೆ ಕಾರ್ಯಕ್ರಮದ ಸಂಯೋಜಕರಾದ ಕಲಾವಿದ ಡಾ. ಜನಾರ್ದನ ಹಾವಂಜೆ ಅವರು ಮಾಹಿತಿ ನೀಡಿದರು. ಈ ಚಿತ್ರಗಳ ಸಂರಕ್ಷಣೆ ಮತ್ತು ಇದರ ಸಮೀಪದ ಸ್ಥಳಗಳಲ್ಲಿಯ ಇನ್ನಷ್ಟು ಶೋಧ ಮತ್ತು ಪುರಾತನ ವಸ್ತುಗಳು ಕರಾವಳಿಯ ಪ್ರಾಗಿತಿಹಾಸದ ಅಧ್ಯಯನವನ್ನು ಮತ್ತಷ್ಟು ವಿಸ್ತರಿಸಬಹುದೆಂದರು.

ಪ್ರಸ್ತುತ ಈ ಕಾರ್ಯಾಗಾರದಲ್ಲಿ ಕಲಾವಿದರು, ಛಾಯಾಗ್ರಾಹಕರು, ವಾಸ್ತುಶಿಲ್ಪ ಮತ್ತು ಇತಿಹಾಸದ ಅಧ್ಯಯನಾಸಕ್ತರು ಭಾಗವಹಿಸಿದ್ದರಲ್ಲದೇ ಇನ್ನು ಮುಂದೆಯೂ ಇನ್ನಷ್ಟು ಕರಾವಳಿ ಭಾಗದ ಪುರಾತನ ಕಟ್ಟಡಗಳು, ಇತಿಹಾಸ, ಕಲೆ ಮೊದಲಾದವುಗಳ ಬಗೆಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂಬುದಾಗಿ ಸಂಯೋಜಕರು ತಿಳಿಸಿದರು.

Share this article