ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಶ್ರೀ ಕೃಷ್ಣಮಠದಲ್ಲಿ ಮುಂಜಾನೆ ಭಗವಂತನನ್ನು ಎಚ್ಚರಗೊಳಿಸಿ ಪೂಜೆ ಸಲ್ಲಿಸುವ ಪಶ್ಚಿಮ ಜಾಗರ ಎಂಬ ವಿಶಿಷ್ಟ ಪೂಜೆಯು ಆಶ್ವೀಜ ಮಾಸದ ಶುದ್ಧ ಏಕಾದಶಿಯಂದು ಆರಂಭವಾಗಿದ್ದು, ಕಾರ್ತಿಕ ಶುದ್ಧ ಏಕಾದಶಿ ವರೆಗೆ ನಡೆಯುತ್ತದೆ.ಆಷಾಢಶುದ್ಧ ಏಕಾದಶಿಯಿಂದ ಭಗವಂತ ಯೋಗನಿದ್ರೆಯಲ್ಲಿ ಇರುತ್ತಾರೆಂಬ ನಂಬಿಕೆ. ಈ ಒಂದು ತಿಂಗಳು ಬೆಳಗ್ಗೆ ಅಪೂರ್ವ ವಾದ್ಯಘೋಷಗಳಿಂದ ದೇವರನ್ನು ಜಾಗರಗೊಳಿಸಿ ಎಬ್ಬಿಸಿ ಬಳಿಕ ಪೂಜೆಯನ್ನು ನಡೆಸಲಾಗುತ್ತದೆ. ಯೋಗನಿದ್ರೆಯಿಂದ ಭಗವಂತನನ್ನು ಎಚ್ಚರಿಸಲು ಭಕ್ತರು ಮಾಡುವ ಸೇವೆ ಇದಾಗಿದೆ. ಆದ್ದರಿಂದ ಇದನ್ನು ಜಾಗರ ಪೂಜೆ ಎಂದು ಕರೆಯಲಾಗುತ್ತದೆ. ಈ ಆಚರಣೆಯನ್ನು ಮಧ್ವಾಚಾರ್ಯರು ವರಾಹಪುರಾಣದಿಂದ ಉಲ್ಲೇಖಿಸಿ ಚಾಲ್ತಿಗೆ ತಂದಿದ್ದರು.ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಬೆಳಗ್ಗೆ ಸುಮಾರು 4 ಗಂಟೆಯಿಂದ ಅನುಕ್ರಮವಾಗಿ ಶಂಖ, ನಗಾರಿ, ಡಮರು, ಡೋಲು, ಕೊಂಬು, ಚರ್ಮ ವಾದ್ಯ, ತಾಸೆ, ಸೂರ್ಯ ವಾದ್ಯ, ನಾಗಸ್ವರ, ಡೋಲಕ್‌ನೊಂದಿಗೆ ಚಂಡೆ, ಸ್ಯಾಕ್ಸೋಫೋನ್ ವಾದನ ನಡೆಯುತ್ತದೆ. ಈ ವೇಳೆ ಭಾಗವತರು ಪುರಂದರ, ಕನಕ, ಮೊದಲಾದ ದಾಸವರೇಣ್ಯರ ಹಾಡುಗಳನ್ನು ಉದಯರಾಗದೊಂದಿಗೆ ಹಾಡುತ್ತಾರೆ.ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸೂರ್ಯೋದಯಕ್ಕೆ ಮೊದಲು ಪ್ರಾರ್ಥನೆ ಮಾಡಿ ಕೂರ್ಮಾರತಿಯನ್ನು ಹೊರಗಿನ ಒಂದು ಸುತ್ತು ತಂದು ಶ್ರೀ ಕೃಷ್ಣ ದೇವರಿಗೆ ಬೆಳಗುತ್ತಾರೆ. ಬಳಿಕ ಲಕ್ಷ್ಮೀ ಸನ್ನಿಧಾನವಿರುವ ತುಳಸಿ, ಮುಖ್ಯಪ್ರಾಣ, ಮಧ್ವಾಚಾರ್ಯರು ಹಾಗೂ ಗರುಡ ದೇವರಿಗೆ ಬೆಳಗುತ್ತಾರೆ. ಅನಂತರ ಕಲಾವಿದರು ವಾದ್ಯ ವಾದನವನ್ನು ಜಂಪೆ, ರೂಪಕ, ತ್ರಿಪುಟ, ಆದಿ, ಸಂಕೀರ್ಣ, ತಾಳದೊಂದಿಗೆ ನುಡಿಸುತ್ತಾ ಐದು ಸುತ್ತು ಬರುತ್ತಾರೆ. ಇದೇ ವೇಳೆಗೆ ಭಾಗವತರು ಹಾಡುಗಳನ್ನು ಹಾಡುತ್ತಿರುತ್ತಾರೆ.ವಿದ್ಯುತ್ ಬೆಳಕಿನ ಬದಲು ಸುತ್ತಲೂ ಹಚ್ಚಿರುವ ಹಣತೆಗಳ ಬೆಳಕಿನಲ್ಲಿ ನಡೆಯುವ ಈ ಪೂಜೆ ನಯನ ಮನೋಹರವಾಗಿರುತ್ತದೆ. ಇದನ್ನು ನೋಡಲೆಂದೇ ಭಕ್ತರು ಅಷ್ಟು ಮುಂಜಾನೆ ಎದ್ದು ಬಂದು ಕಾಯುತ್ತಿರುತ್ತಾರೆ.ಅತ್ಯಂತ ಅಪರೂಪವಾದ ಸೂರ್ಯವಾದ್ಯ ಇತ್ಯಾದಿ ಸಾಂಪ್ರದಾಯಿಕ ವಾದ್ಯಪ್ರಕಾರಗಳು, ಹಾಡುಗಳು, ಹಣತೆ ಬೆಳಕಿನ ಸಂಯೋಜನೆ ಕಾರ್ತಿಕ ಮಾಸದ ಏಕಾದಶಿವರೆಗೆ ಈ ಒಂದು ತಿಂಗಳ ಕಾಲ ಶ್ರೀ ಕೃಷ್ಣ ಮಠದಲ್ಲಿ ನೋಡಲು ಸಿಗುತ್ತದೆ.