ಉಡುಪಿ: ರಾಜ್ಯದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರಿಗೆ 37,000 ಕೋಟಿ ರು. ಬಿಲ್ ಪಾವತಿಗೆ ಬಾಕಿಯಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಯ ಗುತ್ತಿಗೆದಾರರಿಗೂ ಸಾವಿರ ಕೋಟಿ ರು.ಗಳಷ್ಟು ಬಿಲ್ ಬಾಕಿಯಾಗಿದ್ದು, ಇದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಬಾಕಿ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘವು ಬೆಂಗಳೂರಿನಲ್ಲಿ ಉಡುಪಿ ಜಿಲ್ಲೆಯ ಐವರು ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಗುತ್ತಿಗೆದಾರರು ಸರ್ಕಾರಿ ಕಾಮಗಾರಿಗಳನ್ನು ನಡೆಸಲು ನೂರಾರು ಕೋಟಿ ರು. ಸಾಲ ಮಾಡಿದ್ದು ಸರ್ಕಾರದಿಂದ ಬಿಲ್ ಪಾವತಿಯಾಗದೇ ಸಾಲದ ಬಡ್ಡಿ ವಿಪರೀತ ಹೆಚ್ಚುತ್ತಿದೆ. ಕಾರ್ಮಿಕರ ವೇತನ, ನಿರ್ಮಾಣ ಸಾಮಾಗ್ರಿಗಳ ಪೂರೈಕೆದಾರರಿಗೆ ಬಿಲ್ ಪಾವತಿಸಲಾಗದೇ ಗುತ್ತಿಗೆದಾರರು ತೀವ್ರ ಸಮಸ್ಯೆ ಅನುಭವಿಸುತಿದ್ದಾರೆ, ಇದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅಲ್ಲದೇ ಬಿಡುಗಡೆಯಾದ ಅಲ್ಪಸ್ವಲ್ಪ ಮೊತ್ತವೂ ಜೇಷ್ಟತೆಯ ಆಧಾರದಲ್ಲಿ ವಿತರಣೆ ಮಾಡದೇ ಮಧ್ಯಮ ಮತ್ತು ಸಣ್ಣ ಗುತ್ತಿಗೆದಾರರು ತೊಂದರೆಗೊಳಗಾಗಿದ್ದಾರೆ. ಆದ್ದರಿಂದ ಶಾಸಕರೆಲ್ಲರೂ ಸೇರಿ ಈ ಸಮಸ್ಯೆಯ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಿ, ಬಾಕಿ ಬಿಲ್ಲು ಬಿಡುಗಡೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದ್ದಾರೆ.ಮನವಿ ಪತ್ರವನ್ನು ಸ್ವೀಕರಿಸಿದ ಶಾಸಕರು ಗುತ್ತಿಗೆದಾರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಸಂಬಂಧಿತ ಅಧಿಕಾರಿಗಳು ಮತ್ತು ಸರ್ಕಾರದ ಮಟ್ಟದಲ್ಲಿ ವಿಷಯವನ್ನು ಗಂಭೀರವಾಗಿ ಮುಂದಿಟ್ಟು ಸದನದಲ್ಲಿಯೂ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.