ಉಡುಪಿ: ಶಿರೂರು ಮಠದ ಪರ್ಯಾಯಕ್ಕೆ 6ರಂದು ಬಾಳೆ ಮುಹೂರ್ತ

KannadaprabhaNewsNetwork | Published : Dec 3, 2024 12:30 AM

ಸಾರಾಂಶ

ಅಂದು ಬೆಳಗ್ಗೆ 6 ಗಂಟೆಗೆ ಮಠದಲ್ಲಿ ವಿಠಲ ದೇವರಿಗೆ ಮತ್ತು ಶ್ರೀ ಕೃಷ್ಣಮಠದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರಿಗೆ, ರಥಬೀದಿಯಲ್ಲಿರುವ ಚಂದ್ರೇಶ್ವರ ಮತ್ತು ಅನಂತೇಶ್ವರ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುವುದು. ನಂತರ ಮಂಗಳವಾದ್ಯ, ವೇದಘೋಷ, ಭಜನೆಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಪೂರ್ಣಪ್ರಜ್ಞಾ ಕಾಲೇಜಿನ ಹಿಂಭಾಗದ ಅಬ್ಜಾರಣ್ಯದಲ್ಲಿ ಮಠದ ತೋಟದಲ್ಲಿ ಬಾಳೆಗಿಡ ನೆಟ್ಟು ಮುಹೂರ್ತ ನಡೆಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಗದ್ಗುರು ಶ್ರೀ ಮನ್ಮಮಧ್ವಾಚಾರ್ಯ ಮೂಲ ಸಂಸ್ಥಾನದ ಶ್ರೀ ವಾಮನತೀರ್ಥ ಪರಂಪರೆಯಲ್ಲಿ ಬರುವ ಉಡುಪಿ ಶ್ರೀ ಶಿರೂರು ಮಠದ ಪೀಠಾಧಿಪತಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಶ್ರೀ ಕೃಷ್ಣಾ ಪೂಜಾ ಪರ್ಯಾಯ (2026 - 2028)ದ ಮೊದಲ ಮುಹೂರ್ತವಾದ ಬಾಳೆ ಮುಹೂರ್ತ ಡಿ.6ರಂದು ನಡೆಸಲಾಗುವುದು ಎಂದು ಶ್ರೀ ಮಠದ ದಿವಾಣ ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.

ಸೋಮವಾರ ಶ್ರೀ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ವಿವರಗಳನ್ನು ನೀಡಿದರು.

ಅಂದು ಬೆಳಗ್ಗೆ 6 ಗಂಟೆಗೆ ಮಠದಲ್ಲಿ ವಿಠಲ ದೇವರಿಗೆ ಮತ್ತು ಶ್ರೀ ಕೃಷ್ಣಮಠದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರಿಗೆ, ರಥಬೀದಿಯಲ್ಲಿರುವ ಚಂದ್ರೇಶ್ವರ ಮತ್ತು ಅನಂತೇಶ್ವರ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುವುದು. ನಂತರ ಮಂಗಳವಾದ್ಯ, ವೇದಘೋಷ, ಭಜನೆಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಪೂರ್ಣಪ್ರಜ್ಞಾ ಕಾಲೇಜಿನ ಹಿಂಭಾಗದ ಅಬ್ಜಾರಣ್ಯದಲ್ಲಿ ಮಠದ ತೋಟದಲ್ಲಿ ಬಾಳೆಗಿಡ ನೆಟ್ಟು ಮುಹೂರ್ತ ನಡೆಸಲಾಗುತ್ತದೆ ಎಂದರು.

ಈ ತೋಟದಲ್ಲಿ ಈಗಾಗಲೇ 110 ಲೋಡು ಮಣ್ಣು ತುಂಬಿಸಿ ಸುಮಾರು 1000 ಬಾಳೆ ಗಿಡಗಳನ್ನು ನೆಡುವುದಕ್ಕೆ ಸಿದ್ಧತೆ ಮಾಡಲಾಗಿದೆ. ಅಲ್ಲದೆ ಶಿರೂರು ಗ್ರಾಮದಲ್ಲಿರುವ ಮೂಲಮಠದಲ್ಲಿಯೂ 14,000 ಬಾಳೆ ಗಿಡಗಳನ್ನು ನೆಡುವ ಯೋಜನೆ ಇದೆ ಎಂದು ಸರಳತ್ತಾಯರು ತಿಳಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಶಾಸಕ ಯಶ್‌ಪಾಲ್‌ ಸುವರ್ಣ, ಇದು ಜನರ ಪರ್ಯಾಯ, ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮುಹೂರ್ತದಲ್ಲಿ ಭಾಗಹಿಸಿ, ಪ್ರತಿಯೊಬ್ಬರು ಬಾಳೆ ಗಿಡ ನೆಟ್ಟು ಕೃಷ್ಣನಿಗೆ ಅರ್ಪಣೆ ಮಾಡಬೇಕು ಎಂದು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಮಠದ ಪ್ರಮುಖರಾದ ಮೋಹನ್‌ ಭಟ್, ಶ್ರೀಶ ಭಟ್ ಕಡೆಕಾರ್, ವಾಸುದೇವ ಆಚಾರ್, ಗೋವಿಂದ ಆಚಾರ್, ಶ್ರೀಕಾಂತ ನಾಯಕ್‌ ಅಲೆವೂರು ಉಪಸ್ಥಿತರಿದ್ದರು.

* ಅನ್ನಪ್ರಸಾದ ವಿತರಣೆಗೆ ಬಾಳೆ ಎಲೆ

ಉಡುಪಿ ಕೃಷ್ಣಮಠದಲ್ಲಿ ಕೇವಲ ಕೃಷ್ಣನ ಪ್ರತಿಮಾ ರೂಪಕ್ಕೆ ಪೂಜೆ ನಡೆಯುವುದಿಲ್ಲ, ಚೇತನ ರೂಪ ಜನರಿಗೂ ನಿರಂತರ ಅನ್ನದಾನ ಮಾಡುವ ಮೂಲಕ ಅನ್ನವಿಠಲನ ಪೂಜೆಯೂ ನಡೆಯುತ್ತದೆ. ದೇವರ ಪ್ರಸಾದ ರೂಪದಲ್ಲಿ ಅನ್ನದಾನಕ್ಕೆ ಅಗತ್ಯವಾದ ಪಾತ್ರ ಅಂದರೆ ಬಾಳೆ ಎಲೆ ಮತ್ತು ಬಾಳೆ ಹಣ್ಣುಗಳನ್ನು ಬೆಳೆಸುವುದಕ್ಕೆ ಚಾಲನೆ ನೀಡುವುದೇ ಈ ಬಾಳೆ ಮುಹೂರ್ತ ಎಂದು ದಿವಾಣ ಉದಯ ಕುಮಾರ್ ಸರಳತ್ತಾಯ ತಿಳಿಸಿದರು.

Share this article