ಕಾರ್ಕಳ: ಮಹಾತ್ಮಾ ಗಾಂಧೀಜಿಯವರ ಗ್ರಾಮಾಭ್ಯುದಯದ ಕನಸನ್ನು ನನಸಾಗಿಸಿದ ಮಹತ್ವದ ಯೋಜನೆಯಾದ ಮನರೇಗಾ ಯೋಜನೆಯ ಹೆಸರನ್ನು “ವಿಬಿ-ಜಿ ರಾಮ್ ಜಿ” ಎಂದು ಮರುನಾಮಕರಣ ಮಾಡುವ ಮೂಲಕ ಅದರ ಮೂಲ ಸ್ವರೂಪವನ್ನೇ ಬದಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮೀಣ ಪರಿಸರದ ಬಡವರು, ಮಹಿಳೆಯರು ಹಾಗೂ ಸಣ್ಣ ರೈತರ ಅನ್ನದ ಬಟ್ಟಲಿಗೆ ಕನ್ನ ಹಾಕಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಈ ಮಸೂದೆಯಲ್ಲಿ ಕೆಲಸದ ದಿನಗಳನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಎನ್ನಲಾದರೂ, ಯೋಜನೆಯ ಆದ್ಯತಾ ಕ್ಷೇತ್ರಗಳನ್ನು ಬದಲಿಸಿ ನಿರ್ದಿಷ್ಟ ವಲಯಗಳನ್ನು ಮಾತ್ರ ನಿಗದಿಪಡಿಸಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡುವ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಪರಿಸರ ಸಂರಕ್ಷಣೆ, ಜಲಸಂಪನ್ಮೂಲ ಅಭಿವೃದ್ಧಿ ಸೇರಿದಂತೆ ಪ್ರಾಕೃತಿಕ ಆದ್ಯತಾ ವಲಯಗಳ ಜೊತೆಗೆ, ಗ್ರಾಮೀಣ ರೈತ ಸ್ನೇಹಿ ಕೆಲಸಗಳಾದ ಹಟ್ಟಿ, ಕೊಟ್ಟಿಗೆ, ಅಗಳು ಮುಂತಾದ ಕಾರ್ಯಗಳನ್ನು ಕೈಬಿಟ್ಟಿರುವುದು ಗ್ರಾಮೀಣ ಜನರಿಗೆ ಹೊಡೆತವಾಗಿದೆ ಎಂದು ತಿಳಿಸಲಾಗಿದೆ.ಇನ್ನೂ ಬೀಜ ಬಿತ್ತನೆ ಹಾಗೂ ಕೊಯ್ಲಿನ ಅವಧಿಯಲ್ಲಿ ಈ ಯೋಜನೆಯಡಿ ಕೂಲಿ ಕೆಲಸವನ್ನು ನಿರ್ಬಂಧಿಸಿರುವುದು ಮಸೂದೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.ಹಿಂದಿನ ಸರ್ಕಾರಗಳ ಯೋಜನೆಗಳ ಹೆಸರನ್ನು ಬದಲಿಸುವುದನ್ನೇ ತಮ್ಮ ಸಾಧನೆ ಎಂದು ಬಿಂಬಿಸುವ ಬಿಜೆಪಿಗೆ ಅಭಿವೃದ್ಧಿಯ ಅರ್ಥವೇ ತಿಳಿದಿಲ್ಲ. ಮರ್ಯಾದ ಪುರುಷೋತ್ತಮ ರಾಮನ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಿಜೆಪಿಗೆ ದೇಶದ ಸಂವಿಧಾನದ ಮೇಲೂ ವಿಶ್ವಾಸವಿಲ್ಲ ಎಂದು ಆರೋಪಿಸಿದೆ. ಈ ಮಸೂದೆಯ ಮೂಲಕ ಬಿಜೆಪಿ ಸಂವಿಧಾನಾತ್ಮಕವಾಗಿ ಗ್ರಾಮೀಣ ಜನರಿಗೆ ಲಭಿಸಿದ್ದ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಉದ್ಯೋಗದ ಹಕ್ಕಿಗೆ ಧಕ್ಕೆ ತಂದಿದೆ. ದೇಶದ ಹಿತದೃಷ್ಟಿಯಿಂದ ಈ ಕ್ರಮ ಖಂಡನೀಯವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.