ಕೈಗಾರಿಕಾ ಯೋಜನೆಗಳು ಗಡುವಿನೊಳಗೆ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

KannadaprabhaNewsNetwork |  
Published : Mar 26, 2026, 02:45 AM IST
ಸ್ವರೂಪ  | Kannada Prabha

ಸಾರಾಂಶ

ಕೈಗಾರಿಕಾ ಪ್ರದೇಶಗಳಲ್ಲಿ ಹಂಚಿಕೆಗೊಂಡಿರುವ ನಿವೇಶನಗಳಲ್ಲಿ ಕೈಗಾರಿಕಾ ಘಟಕಗಳನ್ನು ನಿಗದಿತ ಅವಧಿಯೊಳಗೆ ಸ್ಥಾಪಿಸಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ವಿಳಂಬವಾದಲ್ಲಿ ಮಂಜೂರಾತಿಯನ್ನು ರದ್ದುಪಡಿಸಿ ಹೊಸ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಎಚ್ಚರಿಕೆ ನೀಡಿದ್ದಾರೆ.

ಉಡುಪಿ: ಕೈಗಾರಿಕಾ ಪ್ರದೇಶಗಳಲ್ಲಿ ಹಂಚಿಕೆಗೊಂಡಿರುವ ನಿವೇಶನಗಳಲ್ಲಿ ಕೈಗಾರಿಕಾ ಘಟಕಗಳನ್ನು ನಿಗದಿತ ಅವಧಿಯೊಳಗೆ ಸ್ಥಾಪಿಸಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ವಿಳಂಬವಾದಲ್ಲಿ ಮಂಜೂರಾತಿಯನ್ನು ರದ್ದುಪಡಿಸಿ ಹೊಸ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಎಚ್ಚರಿಕೆ ನೀಡಿದ್ದಾರೆ.ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿವಿಧ ಜಿಲ್ಲಾ ಮಟ್ಟದ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೈಗಾರಿಕಾ ಘಟಕಗಳನ್ನು ಪ್ರಾರಂಭಿಸದೇ ಕಾಲಾವಕಾಶ ಕೋರುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಹೆಚ್ಚುವರಿ ಸಮಯ ಪಡೆದ ಘಟಕಗಳ ಪ್ರಗತಿ ಕುರಿತು ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಹೆಬ್ರಿ ತಾಲೂಕಿನ ಶಿವಪುರದಲ್ಲಿ 74.84 ಎಕರೆ ಹಾಗೂ ಕೆರೆಬೆಟ್ಟುವಿನಲ್ಲಿ 38.75 ಎಕರೆ ಸೇರಿದಂತೆ ಒಟ್ಟು 113.59 ಎಕರೆ ಜಮೀನಿನಲ್ಲಿ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಗಡಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ 101.19 ಎಕರೆ ಜಮೀನನ್ನು ಸಣ್ಣ ಕೈಗಾರಿಕಾ ವಸಾಹತಿಗಾಗಿ ಗುರುತಿಸಲಾಗಿದ್ದು, ಪ್ರಸ್ತಾವನೆ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ. ಉಡುಪಿ ತಾಲೂಕಿನ ಪೆರ್ಣಂಕಿಲದಲ್ಲಿ 28 ಎಕರೆ ಸರ್ಕಾರಿ ಜಮೀನಿನಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.ಜಿಲ್ಲೆಯ ನಂದಿಕೂರು, ಬೆಳಪು ಮತ್ತು ಮಿಯ್ಯಾರು ಕೈಗಾರಿಕಾ ಪ್ರದೇಶಗಳಲ್ಲಿ ಒಟ್ಟು 26 ಘಟಕಗಳಿಗೆ ಗುತ್ತಿಗೆ ನೀಡಲಾಗಿದ್ದು, ಅದರಲ್ಲಿ 19 ಘಟಕಗಳು ಇನ್ನೂ ಪ್ರಾರಂಭವಾಗಿಲ್ಲ. ಇಂತಹ ಘಟಕಗಳ ಕರಾರು ರದ್ದುಪಡಿಸಿ ಹೊಸ ಉದ್ಯಮಿಗಳಿಗೆ ಅವಕಾಶ ನೀಡುವಂತೆ ಸೂಚಿಸಿದರು.ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು. ಬೆಳಪು ಪ್ರದೇಶದ ರಸ್ತೆ ವಿಸ್ತರಣೆ ಹಾಗೂ ಮಿಯ್ಯಾರು ಪ್ರದೇಶದಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳ ಸ್ಥಾಪನೆಗೆ ಆದ್ಯತೆ ನೀಡುವಂತೆ ಹೇಳಿದರು.ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಬಾಕಿ ಇರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು. ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಈಗಾಗಲೇ ಸಾವಿರಾರು ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಕಳ–ಹೆಬ್ರಿಯಲ್ಲಿ ಭಾರಿ ಮಳೆ: ಮನೆಗಳಿಗೆ ಹಾನಿ, ಲಕ್ಷಾಂತರ ನಷ್ಟ
ಮಹಿಳೆಯರ ಸ್ವಾವಲಂಬಿ ಜೀವನ ಗ್ರಾಮೀಣ ಅಭಿವೃದ್ಧಿಗೆ ಪೂರಕ