ಕಾರಟಗಿ: ಗ್ರಾಮೀಣ ಮಹಿಳೆಯರು ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯವಾಗಿ ಬೆಳೆಯಬೇಕು. ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವ ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಪೂರಕವಾಗುತ್ತದೆ. ದೇಶದ ನಮ್ಮ ತಾಯಂದಿರು ಕೃಷಿ,ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ ವಹಿವಾಟು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಹೆಸರು ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಬಸವರಾಜ ದಢೇಸ್ಗೂರು ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮೋದಿ ನೇತೃತ್ವದ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದ ಯೋಜನೆಗಳಿಂದ ಇಂದು ದೇಶದ ಕೋಟ್ಯಂತರ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ,ಇಂತಹ ಯೋಜನೆ ಜಾರಿಗೆ ತರುವ ಮೂಲಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪ್ರೀಯಗೊಂಡಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಎಲ್ಲ ರಂಗಗಳಲ್ಲೂ ಮುಂದೆ ಬರಬೇಕು ಎಂದರು.
ಸಮಾಜ ಸೇವೆ, ಕ್ರೀಡೆ,ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ ಸಮಾನತೆ ಹಾಗೂ ಸಬಲ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು.ನ್ಯಾಯವಾದಿ ರಾಜೇಶ್ವರಿ ವಿಶೇಷ ಉಪನ್ಯಾಸ ನೀಡಿ, ಮಹಿಳೆಯರು ಸಂರಕ್ಷಣೆ ಹಾಗೂ ಕಾನೂನು ಜಾಗೃತಿಯ ಬಗ್ಗೆ ಮಾಹಿತಿ ನೀಡಿ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ ಸ್ವರಕ್ಷಣೆಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಾಕುಮಾರಿ,ಮಂಡಲ ಮೋರ್ಚಾ ಅಧ್ಯಕ್ಷೆ ಶಿವಲೀಲಾ ಅಯೋಧ್ಯ, ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ ಮಾತನಾಡಿ, ಮಹಿಳೆ ಸಬಲರಾದಾಗ ಮಾತ್ರ ಕುಟುಂಬ ಮತ್ತು ಸಮಾಜವೂ ಸಹ ಸಬಲವಾಗುತ್ತದೆ. ಮಹಿಳೆಯರಿಗೆ ಸಮಾನ ಅವಕಾಶ, ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ ಒದಗಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವೆಂದರು.
ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿ ದೀಪಾ ಹಿರೇಮಠ ಸೇರಿದಂತೆ ಮಹಿಳಾ ಮೋರ್ಚಾ ಪದಾಧಿಕಾರಿಗಳು ಇದ್ದರು.