ಕನ್ನಡಪ್ರಭ ವಾರ್ತೆ ಉಡುಪಿ
ಇತ್ತೀಚೆಗೆ ನಡೆದ ಶ್ರೀ ಕೃಷ್ಣಾಷ್ಟಮಿಯ ನಂತರ ಉಡುಪಿ ಜಿಲ್ಲಾದ್ಯಂತ ಈಗ ಗಣೇಶ ಚತುರ್ಥಿಗೆ ಸಿದ್ಧತೆಗಳು ನಡೆಯುತ್ತಿವೆ. ಚೌತಿ ಹಿನ್ನೆಲೆಯಲ್ಲಿ ಹೂವು, ಹಣ್ಣು, ಕಬ್ಬು ಇತ್ಯಾದಿಗಳ ವ್ಯಾಪಾರ ವಹಿವಾಟಿಗೆ ಹುರುಪು ಬಂದಿದೆ.ಉಡುಪಿಯ ಕೃಷ್ಣಮಠದ ರಥಬೀದಿ, ನಗರದ ಕವಿ ಮುದ್ದಣ ಮಾರ್ಗ, ಮಾರುತಿ ವೀಥಿಕಾಗಳಲ್ಲಿ ಕಳೆದೆರಡು ದಿನಗಳಿಂದ ಹೊರ ಜಿಲ್ಲೆಯ ವ್ಯಾಪಾರಿಗಳು ಬೀಡು ಬಿಟ್ಟಿದ್ದು, ಹೂವು- ಹಬ್ಬು ರಾಶಿ ಹಾಕಿಕೊಂಡು ಗ್ರಾಹಕರ ನಿರೀಕ್ಷೆಯಲ್ಲಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಬ್ಬಿನ ಬೆಲೆ ತುಸು ಇಳಿಕೆಯಾಗಿದೆ. ಕಳೆದ ವರ್ಷ 80 ರು.ಗೆ ಮಾರಾಟವಾಗಿದ್ದ ಒಂದು ಕಬ್ಬು, ಈ ಬಾರಿ ಬಾರಿ 60 ರು.ಗೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಸ್ವತಃ ಕಬ್ಬಿನ ವ್ಯಾಪಾರಿಗಳು. ಆದರೆ ಹೂವು ತುಸು ತುಟ್ಟಿಯಾಗಿದೆ. ಮಾರು ಉದ್ದ ಸೇವಂತಿಗೆ ಹೂವಿನ ಮಾಲೆಗೆ 100 ರು., ಕಾಕಡ 100 ರು., ಕನಕಾಂಬರ 70 ರು., ಮಲ್ಲಿಗೆ ಅಟ್ಟೆಗೆ 830 ರು., ಜಾಜಿ 570 ರು. ಗಳಿಗೆ ಮಾರಾಟವಾಗುತ್ತಿದೆ.ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳು ಹೂವು, ಕಬ್ಬು ಮಾರಾಟ ಮಾಡುತಿದ್ದರೆ, ಸ್ಥಳೀಯ ವ್ಯಾಪಾರಿಗಳು ಗಣೇಶೋತ್ಸವಕ್ಕೆ ಬಹು ಬೇಡಿಕೆಯಾದ ಗರಿಕೆ, ಕಬ್ಬು, ಹಳದಿ ಎಲೆ, ಮೂಡೆ ಎಲೆಗಳನ್ನು ವ್ಯಾಪಾರ ಬಿರುಸಾಗಿದೆ.ಆದರೆ ಬುಧವಾರ ಮೊದಲ ದಿನ ಹೇಳಿಕೊಳ್ಳುವಂತಹ ವ್ಯಾಪಾರವಾಗಿಲ್ಲ. ಶುಕ್ರವಾರ ಗೌರಿ ಹಬ್ಬವಾದರೂ ಗುರುವಾರ ಕೂಡ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು, ನಿರೀಕ್ಷೆಯ ವ್ಯಾಪಾರವಾಗಿಲ್ಲ, ಬೆಲೆ ಕಡಿಮೆ ಮಾಡಿದರೂ ಗ್ರಾಹಕರು ಬರುತ್ತಿಲ್ಲ ಎಂದು ಶಿವಮೊಗ್ಗದ ವ್ಯಾಪಾರಿ ಮಂಜುನಾಥ್ ಹೇಳಿದರು.
-----ಸುಮಾರು 500 ಕಡೆಗಳಲ್ಲಿ ಗಣೇಶೋತ್ಸವಜಿಲ್ಲೆಯಲ್ಲಿ ಕಳೆದ ಬಾರಿ 470 ಕಡೆಗಳಲ್ಲಿ ಗಣೇಶೋತ್ಸವ ನಡೆದಿದ್ದು, ಈ ಬಾರಿ ಅದು 500ಕ್ಕೇರುವ ನಿರೀಕ್ಷೆ ಇದೆ. ಉಡುಪಿಯ ಕೊಡವೂರು ಗಣೇಶೋತ್ಸವ ಸಮಿತಿ 56ನೇ ವರ್ಷದ ಹಬ್ಬ, ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ 58ನೇ ವರ್ಷ, ಪರ್ಕಳ ಸಾರ್ವಜನಿಕ ಗಣೇಶೋತ್ಸವ 57ನೇ ವರ್ಷ, ಬಾರ್ಕೂರು ಪಟ್ಟಾಭಿರಾಮ ದೇವಳದ 57ನೇ ವರ್ಷದ ಗಣಪತಿ ಹಬ್ಬಗಳ ಜೊತೆಗೆ, ಪ್ರಮುಖ ಗಣೇಶೋತ್ಸವ ಸಮಿತಿಗಳಾದ ಅಂಬಲಪಾಡಿ ಗಣೇಶೋತ್ಸವ ಸಮಿತಿ, ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಹಾಲ್, ಪಡುಬಿದ್ರಿ, ಅಂಬಾಗಿಲು, ಹಟ್ಟಿಯಂಗಡಿ ಮತ್ತು ಉಡುಪಿ ಕೃಷ್ಣಮಠ ಸೇರಿದಂತೆ ವಿವಿಧೆಡೆ ವೈಭದ ಗಣೇಶೋತ್ಸವ ನಡೆಯಲಿದೆ.